“ನ್ಯೂಸ್ ಕವರೇಜ್” ಗೆ “ವಾಹನ”ಕೊಡುವುದಿಲ್ಲವಂತೆ…?! ಪ್ರತಿಷ್ಟಿತ “ಚಾನೆಲ್” ನಿಂದ “ವರದಿಗಾರ”ರಿಗೆ ಫರ್ಮಾನ್..!?

“ನ್ಯೂಸ್ ಕವರೇಜ್” ಗೆ “ವಾಹನ”ಕೊಡುವುದಿಲ್ಲವಂತೆ…?! ಪ್ರತಿಷ್ಟಿತ “ಚಾನೆಲ್” ನಿಂದ “ವರದಿಗಾರ”ರಿಗೆ ಫರ್ಮಾನ್..!?

ಬೆಂಗಳೂರು: ಇದು ಕನ್ನಡ ಸುದ್ದಿವಾಹಿನಿಗಳ ಪೈಕಿ ಪ್ರತಿಷ್ಟಿತ ಸುದ್ದಿ ವಾಹಿನಿ ಎನಿಸಿಕೊಂಡಿರುವ ಚಾನೆಲ್ ವೊಂದರ ದುಸ್ತಿತಿಗೆ ಹಿಡಿದ ಕೈಗನ್ನಡಿನಾ ಗೊತ್ತಿಲ್ಲ..ಏಕೆಂದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಅದು ವರದಿಗಾರರಿಗೆ ಹೊರಡಿಸಿರುವ ಫರ್ಮಾನ್ ಇದೀಗ ವೃತ್ತಿಪರತೆ ಹಾಗೂ ಉದ್ಯೋಗಕ್ಕೆ ಕುತ್ತು ತರುವಂತಿದೆ.

ಅತೀ ದೊಡ್ಡ ನೆಟ್ ವರ್ಕ್ ಎನಿಸಿಕೊಳ್ಳುವ ಸುದ್ದಿಸಂಸ್ಥೆ ಕರ್ನಾಟಕದಲ್ಲಿ ನಡೆಸುತ್ತಿರುವ ಚಾನೆಲ್ ಇತ್ತೀಚೆಗೆ ತನ್ನ ವರದಿಗಾರರಿಗೆ ಸಂಪಾದಕೀಯದ ಮೂಲಕ ಒಂದು ಸುದ್ದಿಯನ್ನು ರವಾನಿಸಿದೆಯಂತೆ.ಆ ಸುದ್ದಿ ಕೇಳಿ ವರದಿಗಾರರು ಶಾಕ್ ಆಗಿದ್ದಾರಂತೆ.ಕೆಲವರು ತಮ್ಮ ಅವಶ್ಯಕತೆ ಸಂಸ್ಥೆಗೆ ಇದ್ದಿದ್ದು ಇಷ್ಟೇ ದಿನ ಅನ್ನಿಸುತ್ತೆ..ಇನ್ನೂ ಇಲ್ಲೇ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ..ಅವರೇ ಕಳುಹಿಸುವುದಕ್ಕಿಂತ ನಾವೇ ತಿಳಿದು ಹೋಗುವುದು ಸೂಕ್ತವೇನೋ ಎನ್ನುವ ಮಟ್ಟಿಗಿನ ಆಲೋಚನೆಗೆ ಬಂದಿದ್ದಾರಂತೆ.

ವರದಿಗಾರರಿಗೆ ಇನ್ಮುಂದೆ ವರದಿಗಾರಿಕೆಗೆ ಯಾವುದೇ ವಾಹನ ನೀಡುವುದಿಲ್ಲ.ಅವರೇ ತಮ್ಮ ಸ್ವಂತ ವಾಹನಗಳಲ್ಲಿ ಸುದ್ದಿ ಕವರೇಜ್ ಮಾಡಿಕೊಂಡು ಬರಬೇಕು.ನೀವು ಟೂ ವೀಲರ್ ನಲ್ಲಿ ಹೋಗುತ್ತಿರೋ ಅಥವಾ ಫೋರ್ ವ್ಹೀಲರ್ ನಲ್ಲಿ ಹೋಗುತ್ತಿರೋ ಸುದ್ದಿ ಮಾತ್ರ ಮಿಸ್ ಆಗಲೇಬಾರದು ಎಂಬ ಕಂಡೀಷನ್ ಮಾತ್ರ ಹಾಕಿದ್ದಾರೆ.ಈ ಸುದ್ದಿ ಕೇಳಿ ವರದಿಗಾರರು ಸಂಪೂರ್ಣ ಕಂಗಾಲಾಗಿದ್ದಾರೆ.ವಾಹನಗಳಿಲ್ಲದೆ ಇಷ್ಟೊಂದು ದೊಡ್ಡ ಸಿಟಿಯಲ್ಲಿ ಹೇಗೆ ಕೆಲಸ ಮಾಡೋದು,ಸುದ್ದಿ ಹೇಗೆ ಕವರ್ ಮಾಡೋದು..ಇದು ಸಾಧ್ಯನಾ..? ಎಂದು ಚಿಂತೆಗೀಡಾಗಿದ್ದಾರೆ.

ಸಂಪಾದಕೀಯದಿಂದ ಈ ಬಗ್ಗೆ ಸ್ಪಷ್ಟನೆ ಕೇಳಿದಾಗಲೂ ಅವರಿಂದ ಇದೇ ಉತ್ತರ ಬಂದಿದೆ.ಆರ್ಥಿಕ ಹಿಂಜರಿತ ಕಾರಣನಾ..? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕ ಕೆಲವು ಮಾಹಿತಿಗಳಂತೆ ಅಂತದ್ದೊಂದು ದೊಡ್ಡ ಸುದ್ದಿಸಂಸ್ಥೆ ಇಂತದ್ದೊಂದು ನಿರ್ದಾರ ಕೈಗೊಳ್ಳಲು ಕಾರಣವೇ ಆರ್ಥಿಕ ಹಿಂಜರಿತವಂತೆ.ಅದೇ ಚಾನೆಲ್ ನ ಮೂಲಗಳ ಪ್ರಕಾರ ಟ್ರಾನ್ಸ್ ಪೋರ್ಟ್ ಗೆ ಪ್ರತಿ ತಿಂಗಳು ೧೨ ರಿಂದ ೧೫ ಲಕ್ಷ ಖರ್ಚಾಗುತ್ತಿತ್ತಂತೆ.ಇದು ದುಬಾರಿಯಾದ ಮೊತ್ತ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.ಆದರೆ ಕೋಟ್ಯಾಂತರ ಖರ್ಚು ಮಾಡಿ ಚಾನೆಲ್ ನಡೆಸುತ್ತಿರುವ ಮಾಲೀಕರಿಗೆ ೧೫ ಲಕ್ಷ ನಿರ್ವಹಣೆ ಕಷ್ಟವಾಯಿತಾ..? ಎನ್ನುವುದೇ ಪ್ರಶ್ನೆ.

ವರದಿಗಾರರೇ ಹೊರೆಯಾದರಾ..? ವಾಹನ ಕೊಡೊಲ್ಲ ಎನ್ನೋದು ಕೇವಲ ನೆವನಾ..? ಇದು ಕೂಡ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.ಇಷ್ಟು ವರ್ಷ ಟ್ರಾನ್ಸ್ ಪೋರ್ಟ್ ಗೆ ಖರ್ಚು ಮಾಡುತ್ತಿದ್ದ ಸಂಸ್ಥೆ ಇದ್ದಕ್ಕಿದ್ದಂತೆ ಅದನ್ನು ಸ್ಥಗಿತಗೊಳಿಸುವ ನಿರ್ದಾರ ತೆಗೆದುಕೊಳ್ಳುತ್ತೆ ಎಂದರೆ ಅದರಲ್ಲೇನೋ ವಿಶೇಷವಿದೆ ಎನ್ನುವುದು ಸ್ಪಷ್ಟ.ಕೆಲವು ಮೂಲಗಳ ಪ್ರಕಾರ ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಕೆಲವು ವರದಿಗಾರರ ಕಾರ್ಯವೈಖರಿ ಸಂಸ್ಥೆಯ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವಂತೆ.ಕಾರ್ಪೊರೇಟ್ ಸೆಕ್ಟರ್ ನಲ್ಲಿ ಅವರನ್ನು ತೆಗೆದು ಹಾಕುವುದು ಅಷ್ಟು ಸುಲಭವಲ್ಲ.ಅದಕ್ಕೆ ಹತ್ತಾರು ನಿಯಮಗಳಿವೆ.ಅದನ್ನು ಪಾಲಿಸಿದರೆ ಹೆಚ್ಚುವರಿ ನಷ್ಟ ಉಂಟಾಗುತ್ತದೆ.ಹಾಗಾಗಿ ಒಂದಷ್ಟು ಸಿಬ್ಬಂದಿ ತೆಗೆದು ಹಾಕಲು ಇಂತದ್ದೊಂದು ನೆವ ಹುಡುಕಿಕೊಳ್ಳಲಾಗಿದೆಯಾ ಎಂದು ಕಾರ್ಮಿಕ ಸಮೂಹ ಸಂಶಯಿಸುತ್ತಿದೆ. ಕೊರೊನಾ ಕಾಲದಲ್ಲಿ ಎಲ್ಲರಿಗಿಂತ ಹೆಚ್ಚು ಆದಾಯ-ಲಾಭ ಮಾಡಿದ ಉದ್ಯಮಿಗಳ ಪಟ್ಟಿಯಲ್ಲಿದ್ದಂತ ಈ ಸಂಸ್ಥೆ ಮಾಲೀಕರು ಲಾಭದ ಹೊರತಾಗ್ಯೂ ದಂಡಿಯಾಗಿ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ಕೆಲಸದಿಂದ ತೆಗೆದು ಹಾಕಿದ್ರು.ಆಗಲೇ ಹಾಗೆ ಮಾಡಿದವರು,ಈಗ ಒಂದಷ್ಟು ಸಿಬ್ಬಂದಿಗೆ ಗೇಟ್ ಪಾಸ್ ಕೊಡೊಕ್ಕೆ ಸಾರಿಗೆ ಹೊರೆಯ ನೆವ ಕಂಡುಕೊಂಡಿದ್ದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಕೆಲಸ ಹೇಗೆ ಮಾಡೋದು..ಸುದ್ದಿಯನ್ನು ಹೇಗೆ ತರೋದು ಎನ್ನುವ ಚಿಂತೆಗೆ ಬಿದ್ದ ವರದಿಗಾರರು:ರಾಜಕೀಯ, ಮೆಟ್ರೋ. ಕ್ರೈಂ,ಸಿನೆಮಾ..ಹೀಗೆ ವಿವಿಧ ವಿಭಾಗಗಳಲ್ಲಿ ಸುಮಾರು ೧೫ಕ್ಕೂ ಹೆಚ್ಚು ವರದಿಗಾರರು ಕೆಲಸ ಮಾಡುತ್ತಿದ್ದಾರೆ.ಅವರೆಲ್ಲರಿಗೂ ಒಂದೇ ಮಾದರಿಯ ಹೇಳಿಕೆಯನ್ನು ಕೊಡಲಾಗಿದೆ.ಇನ್ಮುಂದೆ ನಿಮಗೆ ವಾಹನಗಳ ಸೌಲಭ್ಯ ಸಿಗಲಾರದು.ಆ ಸೂಚನೆ ಶೀಘ್ರವೇ ಜಾರಿಗೆ ಬರಬಹುದು ಎಂದು ಮ್ಯಾನೇಜ್ಮೆಂಟ್ ಎಚ್ಚರಿಕೆ ನೀಡಿರುವುದು ಎಲ್ಲಾ ವರದಿಗಾರರಲ್ಲಿ ಭಯವನ್ನುಂಟುಮಾಡಿದೆ.

ಬೆಂಗಳೂರಿನಲ್ಲಿ ನಿರಂತರ ಸುದ್ದಿಗಳು ನಡೆಯುತ್ತಲೇ ಇರುತ್ವೆ.ಅದು ಕೂಡ ಬೇರೆ ಬೇರೆ ಕಡೆಗಳಲ್ಲಿ.ಒಂದು ಸುದ್ದಿ ಒಂದು ಮೂಲೆಯಲ್ಲಿ ಘಟಿಸಿದ್ರೆ ಇನ್ನೊಂದು ಸುದ್ದಿ ಇನ್ನ್ಯಾವುದೋ ಮೂಲೆಯಲ್ಲಿ ಸಂಭವಿಸುತ್ತಿರು ತ್ತದೆ.ಕಾರು ಇದ್ದಾಗ ಚಾಲಕರ ಸಮಯಪ್ರಜ್ಞೆಯಿಂದ ಹೇಗೋ ತಲುಪಿ ಸುದ್ದಿ ಮಾಡಿಕೊಂಡು ಬರುತ್ತಿದ್ದೆವು.ಆದರೆ ಈಗ ವಾಹನ ಕೊಡೊಲ್ಲ,ಸುದ್ದಿ ಮಾಡಿಕೊಂಡು ಬನ್ನಿ..ವಿತೌಟ್ ಫೇಲ್..ಯಾವುದೂ ಮಿಸ್ ಆಗಬಾರದು..ಯಾವ್ದೇ ಸುದ್ದಿ ಮಿಸ್ ಆದ್ರೂ ನೀವೇ ಅದಕ್ಕೆ ಜವಾಬ್ದಾರಿ ಎಂಬ ಖಡಕ್ ಎಚ್ಚರಿಕೆ ಕೂಡ ಸಂಪಾದಕೀಯ ಹಾಗೂ ಮ್ಯಾನೇಜ್ಮೆಂಟ್ ನಿಂದ ದೊರೆತಿದೆಯಂತೆ.

ಕೆಲಸ ಬಿಡಲು ನಿರ್ದರಿಸಿದ್ದೇವೆ ಸಾರ್..:ಇಂಥಾ ನಿಯಮ ಹೇರಿರುವುದರಿಂದ ಸರಿಯಾಗಿ ಕೆಲಸ ಮಾಡೊಕ್ಕೆ ಆಗೊಲ್ಲ ಸರ್..ಸುದ್ದಿ ಮಿಸ್ ಆಗಬಾರದು ಎಂದ್ರೆ ಹೇಗೆ.ನಮ್ಮದೇ ರಿಸ್ಕ್ ನಲ್ಲಿ, ನಮ್ಮದೇ ವೆಹಿಕಲ್ ಮೂಲಕ ದೂರಕ್ಕೆ ತೆರಳಿ ಸುದ್ದಿ ಮಾಡಿಕೊಂಡು ಬರೋದು ಹೇಗೆ ಸಾಧ್ಯ…ಸುದ್ದಿಗಳು ಮಿಸ್ ಆಗಿಯೇ ಆಗುತ್ತವೆ.ಆದ್ರೆ ಅಂಥಾ ಸಂದರ್ಭದಲ್ಲಿ ಮ್ಯಾನೇಜ್ಮೆಂಟ್ ನಮ್ಮನ್ನು ಟಾರ್ಗೆಟ್ ಮಾಡಿ ಕೆಲಸದಿಂದ ತೆಗೆದು ಹಾಕೋದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು..? ಕೆಲಸ ಮಾಡಿಲ್ಲ ಎಂದು ನಮ್ಮನ್ನು ತೆಗೆದು ಹಾಕಿದ್ರೆ ಅದು ನಮಗೆ ಆಗುವ ಅಪಮಾನವಲ್ಲವೇ..? ಅದರಿಂದ ನಮ್ಮ ವೃತ್ತಿಜೀವನಕ್ಕೆ ತೊಂದರೆಯಾಗುವುದಿಲ್ಲವೇ..? ಕೆಲಸ ಮಾಡಿಯೂ ಏಕೆ ಇಂಥಾ ಕೆಟ್ಟ ಹೆಸರು ತೆಗೆದುಕೊಳ್ಳಬೇಕು..ಹಾಗೆ ಆಗುವುದಕ್ಕಿಂತ ಮುನ್ನ ಕೆಲಸ ಬಿಡೋದೇ ಸೂಕ್ತ ಅಲ್ಲವೇ..? ಹಾಗಾಗಿ ಎಲೆಕ್ಷನ್ ಮುಗೀತಿದ್ದಂಗೆ ಕೆಲಸ ಬಿಡಬೇಕೆನ್ನುವ ಆಲೋಚನೆಯಲ್ಲಿದ್ದೇನೆ ಎಂದು ವರದಿಗಾರನೊಬ್ಬ ತನ್ನ ಮನದಾಳ ಬಿಚ್ಚಿಟ್ಟರು. ಬಹುಷಃ ಇನ್ನೂ ಅನೇಕ ವರದಿಗಾರರು ಇದೇ ಮನಸ್ಥಿತಿಗೆ ತಲುಪಿದ್ದರೂ ಆಶ್ಚರ್ಯವಿಲ್ಲ.

ಅಂದ್ಹಾಗೆ ಈ ಪ್ರತಿಷ್ಟಿತ ಸುದ್ದಿವಾಹಿನಿ, ವರದಿಗಾರರಿಗೆ ಇದ್ದ ವಾಹನಗಳ ವ್ಯವಸ್ಥೆಯನ್ನು ರದ್ದು ಮಾಡುತ್ತಿರುವ ಮೊದಲ ನ್ಯೂಸ್ ಚಾನೆಲ್ ಏನೂ ಅಲ್ಲ..ಈ ಕೆಲಸಕ್ಕೆ ವರ್ಷಗಳ ಹಿಂದೆಯೇ ಪ್ರತಿಷ್ಟಿತ ನ್ಯೂಸ್ ಚಾನೆಲ್ ನಾಂದಿ ಹಾಡಿತ್ತು.ಅದು ಅದಾಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.ಪರಿಣಾಮ ವರದಿಗಾರರು ಎಲ್ಲಿಗೂ ಹೋಗಲಿಕ್ಕಾಗದೆ ಸುದ್ದಿಯನ್ನು ತರಲಿಕ್ಕೂ ಆಗದೆ ಕಷ್ಟಪಡುವಂತಾಯಿತು.ಅದರ ಪರಿಣಾಮ ಸುದ್ದಿಯ ಗುಣಮಟ್ಟದ ಮೇಲಾಯಿತು.ಇದೇ ವ್ಯವಸ್ಥೆ ಅಂತದ್ದೇ ವ್ಯವಸ್ಥೆ ಅಳವಡಿಸಿಕೊಳ್ಳಲು ಹೊರಟಿರುವ ನ್ಯೂಸ್ ಚಾನೆಲ್ ವಿಷಯದಲ್ಲಿ ಆದರೂ ಆಶ್ಚರ್ಯವಿಲ್ಲ.

ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಗಳಲ್ಲಿ ಬದಲಾವಣೆ-ಸುಧಾರಣೆ-ರೂಪಾಂತರ ತಂದುಕೊಳ್ಳುವುದು ಆಯಾ ಚಾನೆಲ್ ಗಳ ಮ್ಯಾನೇಜ್ಮೆಂಟ್ ನ ವಿವೇಚನೆಗೆ ಬಿಟ್ಟ ವಿಚಾರ.ಅದನ್ನು ಪ್ರಶ್ನಿಸೊಕ್ಕೆ ಯಾರಿಗೂ ಅಧಿಕಾರವಿರೊಲ್ಲ.ಆದರೆ kಇಂಥಾ ವ್ಯವಸ್ಥೆಗಳು ಪತ್ರಿಕೋದ್ಯಮದ ವೃತ್ತಿಪರತೆ ಹಾಗೂ ವರದಿಗಾರರ ಮಾನಸಿಕತೆ ಮತ್ತು ಕೆಲಸ ಮಾಡುವ ಮನಸ್ಥಿತಿ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎನ್ನುವುದಷ್ಟೇ ನಮ್ಮ ಆತಂಕ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *