ಬೆಂಗಳೂರು:ಬೇಸಿಗೆಯ ಝಳ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನೂ ಕಾಡುತ್ತಿದೆ.ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲವಂತೆ.ಸುಡೋ ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಸಿಲುಕಿರುವ ಸಾರಿಗೆ ಸಿಬ್ಬಂದಿಗೆ ನೀರನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬಿಎಂಟಿಸಿ ಸಿಬ್ಬಂದಿಯೋರ್ವರು ಪತ್ರವನ್ನೇ ಬರೆದಿದ್ದಾರೆ.
ಡ್ರೈವರ್ ಕಮ್ ಕಂಡಕ್ಟರ್ ಆಗಿರುವ ಯೋಗೇಶ್ ಗೌಡ ಬಿಎಂಟಿಸಿ ಎಂಡಿ ರಾಮಚಂದ್ರರಾವ್ ಗೆ ಪತ್ರ ಬರೆದಿದ್ದು ಬೇಸಿಗೆಯಲ್ಲಿ ಬಸ್ ಚಾಲನೆ ಮಾಡುವ ವೇಳೆ ಅಪಾರ ಪ್ರಮಾಣದಲ್ಲಿ ನೀರಡಿಕೆ ಆಗುತ್ತಿದೆ.ಬಹುತೇಕ ಡಿಪೋಗಳಲ್ಲಿ ಕುಡಿಯೊಕ್ಕೆ ನೀರು ಇಲ್ಲ.ಸಿಬ್ಬಂದಿ ಗೋಳು ಹೇಳತೀರದಷ್ಟು ಅಸಹನೀಯವಾಗಿದೆ. ಕಾದ ಕಾವಲಿಯಂತಾದ ಬಸ್ ಗಳಲ್ಲಿ ಕುಳಿತು ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡೊಕ್ಕೆ ಆಗ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೇಸಿಗೆಯ ಝಳ ಡ್ರೈವೆರ್-ಕಂಡಕ್ಟರ್ಸ್ ಗೆ ಕೆಲಸ ಮಾಡಲಿಕ್ಕೂ ಆಗದ ಸ್ತಿತಿಯನ್ನು ನಿರ್ಮಾಣ ಮಾಡಿದೆ.ಅನೇಕರು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ.ರಜೆ ಕೊಡಿ ಎಂದು ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ.ಸಂಸ್ಥೆ ಏಳ್ಗೆಗೆ ಸದಾ ದುಡಿಯುವ ಸಾರಿಗೆ ಸಿಬ್ಬಂದಿ ಕೆಲಸ ಮಾಡಲಾಗುತ್ತಿಲ್ಲ.ರಜೆ ಕೊಡಿ ಎಂದು ಕೇಳುತ್ತಿದ್ದಾರೆಂದರೆ ಎಂಥಾ ಧಾರುಣ ಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆನ್ನುವುದು ಅರ್ಥವಾಗುತ್ತದೆ.
ಬಿಎಂಟಿಸಿ ಡಿಪೋಗಳಲ್ಲಿನ ಕಥೆ ಹೇಳತೀರದಷ್ಟು ಶೋಚನೀಯವಾಗಿದೆಯಂತೆ.ಡಿಪೋಗಳಲ್ಲಿನ ಆರ್ ಓ ಪ್ಲಾಂಟ್ ಗಳು ಬಹುತೇಕ ಕೆಟ್ಟು ಹೋಗಿವೆಯಂತೆ.ಇರುವಂಥ ಘಟಕಗಳ ದುರಸ್ತಿಯೂ ನಡೆದಿಲ್ಲ.ಅದರಿಂದ ಬರುತ್ತಿರುವ ನೀರು ಸೇವನೆಗೆ ಯೋಗ್ಯವಾಗಿಲ್ಲವಂತೆ.ಡಿಪೋಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕುಡಿಯಲು ನೀರಿಲ್ಲದೆ ಶೌಚಕ್ಕೂ ನೀರಿಲ್ಲದೆ ಒದ್ದಾಡುವಂತಾಗಿದೆ.
ಈ ಎಲ್ಲಾ ಸಮಸ್ಯೆಗಳು ಇರುವುದರಿಂದ ಅನೇಕ ಸಿಬ್ಬಂದಿ ಡ್ಯೂಟಿಗೆ ಬರುವ ಆಸಕ್ತಿಯನ್ನೇ ತೋರಿಸುತ್ತಿಲ್ಲವಂತೆ.ಅನೇಕರು ನಮಗೆ ರಜೆ ಕೊಡಿ ಸಂಬಳ ಇಲ್ಲದಿದ್ದರೂ ಪರ್ವಾಗಿಲ್ಲ ಎಂದು ಮನವಿ ಮಾಡಿಕೊಳ್ಳಲಾರಂಭಿಸಿದ್ದಾರಂತೆ. ಬಿಎಂಟಿಸಿ ಇತಿಹಾಸದಲ್ಲಿ ಕುಡಿಯುವ ನೀರಿಗೆ ಇಷ್ಟೊಂದು ಸಮಸ್ಯೆ ನಿರ್ಮಾಣವಾದ ಉದಾಹರಣೆಗಳೇ ಇರಲಿಲ್ಲವೇನೋ,.?