ಬೆಂಗಳೂರು: ಈಗ ಅರ್ಥವಾಯ್ತು..ಕಳದೊಂದಷ್ಟು ದಿನಗಳಲ್ಲಿ ಯಾವುದೇ ಪತ್ರಿಕೆ ನೋಡಿದ್ರೂ..ಯಾವುದೇ ನ್ಯೂಸ್ ಚಾನೆಲ್ ಆನ್ ಮಾಡಿದ್ರೂ ಏಕೆ, ರಾಜ್ಯ ಬಿಜೆಪಿ ಸರ್ಕಾರದ ಗುಣಗಾನವೇ ಪುಟಗಟ್ಟಲೇ, ನಿಮಿಷಗಟ್ಟಲೇ ರಾರಾಜಿಸುತ್ತಿತ್ತು ಅಂಥಾ…!!
ಹಾಗೆಲ್ಲಾ ಮಾಡೊಕ್ಕೆ, ಸರ್ಕಾರವೇ ಮಾದ್ಯಮಗಳಿಗೆ ತನ್ನ ಬೊಕ್ಕಸದಿಂದ ಮೊಗೆ ಮೊಗೆದು ಉದಾರಿಯಾಗಿ ಹಣ ಸಂದಾಯ ಮಾಡಿದೆ.ಆದ್ರೆ ಅಷ್ಟೊಂದು ಮೊತ್ತದ ಹಣ ಸಂದಾಯ ಮಾಡೊಕ್ಕೆ ಸರ್ಕಾರಕ್ಕೆ ಅಧಿಕಾರ ಇದೆಯಾ..? ಎಷ್ಟು ಪ್ರಮಾಣದ ಹಣ ಕೊಡೊಕ್ಕೆ ಅವಕಾಶ ಇದೆ..? ಅದಕ್ಕೇನೆ ಪ್ರತ್ಯೇಕ ರೂಪುರೇಷೆಗಳೇನಾದ್ರೂ ಇದೆಯೇ..? ಎನ್ನುವುದಕ್ಕೆ ಸ್ಪಷ್ಟತೆ ಸಿಗದಿದ್ದರೂ ಸರ್ಕಾರ ನೀಡಿದೆ ಎನ್ನಲಾದ ಮೊತ್ತ ಎಂಥವರನ್ನು ತಬ್ಬಿಬ್ಬು ಗೊಳಿಸಿದೆ.ಇದು ಸರ್ಕಾರವೇ ನೀಡಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ.
ಇಡೀ ಆಡಳಿತಯಂತ್ರವನ್ನು ಬಿಜೆಪಿ ಸರಕಾರ ದುರ್ಬಳಕೆ ಮಾಡಿಕೊಂಡಷ್ಟು ಇನ್ನ್ಯಾವುದೇ ಸರ್ಕಾರ ಬಳಸಿಕೊಳ್ಳಲಿಲ್ಲ ಎನ್ನುವ ಮಾತು ಸಾರ್ವತ್ರಿಕವಾಗಿದೆ. ಈಗ ಮತ್ತೊಂದು ಸಂಗತಿ ಬಯಲಾಗಿದೆ.ಅದು ಮಾದ್ಯಮಗಳಿಗೆ ಸಂಬಂಧಿಸಿದ್ದು.ಆದರೆ ಬಳಸಿಕೊಂಡಿದ್ದಕ್ಕೆ ಖರ್ಚು ಮಾಡಿರುವ ಮೊತ್ತ ನೋಡಿದಾಗ ಒಂದ್ ಕ್ಷಣ ತಲೆ ತಿರುಗ್ದೆ ಇರೊಲ್ಲ..ಹಾಗೆಯೇ ನಮ್ ತೆರಿಗೆ ದುಡ್ಡನ್ನು ಹೀಗೆ ಬಳಸಿಕೊಳ್ಳೊಕ್ಕೆ ಸರ್ಕಾರಕ್ಕೆ ಅವಕಾಶ-ಅಧಿಕಾರ ಕೊಟ್ಟವರು ಯಾರು ಎಂದು ಜನಸಾಮಾನ್ಯರು ಕೂಡ ಪ್ರಶ್ನಿಸದೆ ಇರೊಲ್ಲ.
ಹೌದು..ರಾಜೇಶ್ ಕೃಷ್ಣ ಪ್ರಸಾದ್ ಎನ್ನುವವರು ಬಿಜೆಪಿ ಸರ್ಕಾರದ ಅಧಿಕಾರದ ಕೊನೇ ದಿನಗಳಲ್ಲಿ ಮಾದ್ಯಮಗಳಿಗೆ ಎಷ್ಟು ಪ್ರಮಾಣದ ಹಣ ನೀಡಿರಬಹುದೆನ್ನುವುದನ್ನು ವಾರ್ತಾ ಇಲಾಖೆಗೆ ಆರ್ ಟಿ ಐ ಹಾಕಿ ಮಾಹಿತಿ ಕೇಳಿದ್ದರು.ಇದಕ್ಕೆ ಉಪನಿರ್ದೇಶಕರು 08-05-2023 ರಲ್ಲಿ ನೀಡಿರುವ ಮಾಹಿತಿ ಗಾಬರಿ ಹಾಗೂ ಅಚ್ಚರಿ ಮೂಡಿಸಿದೆ.2002 ರ ಡಿಸೆಂಬರ್ 1 ರಿಂದ ಮಾರ್ಚ್ 29,2023 ರವರೆಗೆ ಅಂದ್ರೆ ಬರೋಬ್ಬರಿ 4 ತಿಂಗಳ ಅವಧಿಯಲ್ಲಿ ಸರ್ಕಾರ 42.46ಕೋಟಿ ಹಣ ಖರ್ಚು ಮಾಡಿದೆ ಎನ್ನುವುದಾಗಿ ಮಾಹಿತಿ ನೀಡಿದ್ದಾರೆ.
ಮುದ್ರಣ ಮಾದ್ಯಮ( ಪತ್ರಿಕೆಗಳು) ಹಾಗೂ ವಿದ್ಯುನ್ಮಾನ ಮಾದ್ಯಮ( ಟೆಲಿವಿಷನ್) ಗಳಿಗೆ ಎಷ್ಟು ಪ್ರಮಾಣದಲ್ಲಿ ಹಣ ನೀಡಲಾಗಿದೆ ಎನ್ನುವುದನ್ನು ಕೂಡ ಉಪ ನಿರ್ದೇಶಕರು ವಿವರಣೆ ನೀಡಿದ್ದಾರೆ.ಅವರು ನೀಡಿರುವ ಉತ್ತರದಲ್ಲಿ ಪತ್ರಿಕೆಗಳಿಗೆ 27.46 ಕೋಟಿ ಮತ್ತು ವಿದ್ಯುನ್ಮಾನ ಮಾದ್ಯಮ( ನ್ಯೂಸ್ ಚಾನೆಲ್ ಗಳಿಗೆ) 16.96 ಕೋಟಿ ಹಣ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ದೊಡ್ಡ ದೊಡ್ಡ ಪತ್ರಿಕೆಗಳು ಈ ಅವಧಿಯಲ್ಲೇ ಕೋಟ್ಯಾಂತರ ಹಣ ಪಡೆದುಕೊಂಡಿದ್ದರೆ ಹೆಚ್ಚು ಪ್ರಸಾರ ಹೊಂದಿರುವ ಟಿವಿ ಚಾನೆಲ್ ಗಳು ಕೂಡ ಹಣ ಪಡೆದು ದುಂಡಗಾಗಿವೆ ಎನ್ನುವುದು ಮಾಹಿತಿಗಳಿಂದ ತಿಳಿದುಬಂದಿದೆ.
ಇಷ್ಟೊಂದು ಮೊತ್ತದ ಹಣವನ್ನು ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದ್ರೂ ಸಾರ್ವಜನಿಕರ ತೆರಿಗೆ ಹಣವನ್ನು ಈ ಪ್ರಮಾಣದಲ್ಲಿ ಬಳಸಿಕೊಂಡಿರುವುದು ಎಷ್ಟು ಸರಿ.,..ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.ಕೇವಲ 4 ತಿಂಗಳಲ್ಲಿ 44.46 ಕೋಟಿ ಹಣ ಖರ್ಚು ಮಾಡಿರುವ ಸರ್ಕಾರ ತನ್ನ ಅಧಿಕಾರವಧಿ ಯಲ್ಲಿ ಇನ್ನೆಷ್ಟು ಹಣವನ್ನು ಸರ್ಕಾರದ ಪರ ಹಾಗೂ ಪ್ರಚಾರದ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆಯೋ ಎನ್ನುವ ಲೆಕ್ಕಾಚಾರ ಮೂಡೋದು ಸಹಜ..ಅದರ ಅಂಕಿಅಂಶ ಬಹಿರಂಗವಾದ್ರೆ ಜನ ಮತ್ತಷ್ಟು ರೊಚ್ಚಿಗೇಳುವುದಂತೂ ಸತ್ಯ.