ತನ್ನದಲ್ಲದ ಭೂಮಿ ಮೇಲೆ ಒಡೆತನ ಸಾಬೀತುಪಡಿಸಲು ನಕಲಿ ದಾಖಲೆ ನೀಡಿದ ಅಕ್ರಮ ಸಾಬೀತು..?!
ಬೆಂಗಳೂರು: ಹತ್ತಾರು ಕೋಟಿ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಪ್ರತಿಷ್ಟಿತ ಮಂತ್ರಿಮಾಲ್ ಸಂಸ್ಥೆ ವಿರುದ್ದ ಮತ್ತೊಂದು ಪ್ರಕರಣದಲ್ಲಿ ಎಫ್ ಐ ಆರ್ ದಾಖಲಿಸುವಂತೆ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಆದೇಶಿಸಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ಲಭ್ಯವಾಗಿದೆ.ತನ್ನದಲ್ಲದ ಭೂಮಿಯ ಮಾಲೀಕತ್ವವನ್ನು ನಕಲಿ ದಾಖಲೆಗಳ ಮೂಲಕ ತೋರಿಸಿ ಸುಮಾರು 3 ಎಕರೆ ಪ್ರದೇಶಕ್ಕೆ ಟಿಡಿಆರ್ ಪಡೆದಿರುವುದು ತನಿಖೆಯಿಂದ ದೃಢಪಟ್ಟ ಹಿನ್ನಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಹೀಗೊಂದು ಖಡಕ್ ನಿರ್ದಾರ ಕೈಗೊಂಡಿದ್ದಾರೆ ಎನ್ನಲಾಗಿದೆ.ಇಂದು ಸಂಜೆ ಅಥವಾ ನಾಳೆಯೊಳಗೆ ಎಫ್ ಐ ಆರ್ ದಾಖಲಸುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.
ಅಂದ್ಹಾಗೆ ಮಲ್ಲೇಶ್ವರದ ಮಂತ್ರಿಮಾಲ್ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿಯಲ್ಲೇ ಬಿಬಿಎಂಪಿಯನ್ನು ಕತ್ತಲಲ್ಲಿಟ್ಟು ಮಂತ್ರಿ ಡೆವಲಪರ್ಸ್‌ನ ಅಂಗಸಂಸ್ಥೆ ಹಮಾರ ಶೆಲ್ಟರ್ ತಪ್ಪು ಮಾಹಿತಿ ನೀಡಿ ಟಿಡಿಆರ್ ಪಡೆದಿತ್ತು. ಇಂತಹದೊಂದು ಅಕ್ರಮದಲ್ಲಿ ರಾಷ್ಟ್ರೀಯ ಜವಳಿ ನಿಗಮ ಹಾಗೂ ಬಿಬಿಎಂಪಿಯ ಒಂದಷ್ಟು ಕಂದಾಯ ಅಧಿಕಾರಿಗಳು ಕೂಡ ಶಾಮೀಲಾಗಿರುವುದು ದೃಢಪಟ್ಟಿತ್ತು.
ತನಿಖೆ ವೇಳೆ ಅಕ್ರಮ ದೃಢಪಟ್ಟಿದ್ದರಿಂದ ನಿರ್ಮಾಣ ಯೋಜನೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬಿಲ್ಡರ್‌ಗಳು ಮತ್ತು ಜವಳಿ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.ಈ ಬಗ್ಗೆ ಮಾಜಿ ಮೇಯರ್ ಪಿ.ಆರ್.ರಮೇಶ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿ ಪಡೆದಿದ್ದರು.ಬಿಎಂಆರ್‌ಸಿಎಲ್‌ಗೆ ಅನಧಿಕೃತವಾಗಿ ನೀಡಲಾಗಿರುವ 20,400 ಚದುರ ಅಡಿ ವಿಸ್ತೀರ್ಣದ ಜಮೀನಿನ ಖಾತೆಯನ್ನು ರದ್ದುಗೊಳಿಸಬೇಕು. ಜವಳಿ ನಿಗಮಕ್ಕೆ ಯಾವುದೇ ಹಕ್ಕು ಇಲ್ಲದಿದ್ದರೂ ಅದು ಅಕ್ರಮವಾಗಿ ಆಸ್ತಿಯನ್ನು ಹಮಾರಾ ಶೆಲ್ಟರ್ಸ್‌ಗೆ ಪರಭಾರೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಸ್ವಸ್ತಿಕ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಅನ್ವಯವಾಗುವಂತೆ ಬಿಎಂಆರ್ ಸಿಎಲ್ ನಿರ್ಮಾಣ, ಕಾರ್ಯಾಚರಣೆ ಹಾಗೂ ವರ್ಗಾವಣೆ ಆಧಾರದಲ್ಲಿ ಮಂತ್ರಿ ಡೆವಲಪರ್ಸ್ ಜತೆಗೆ 99 ವರ್ಷಗಳ ಒಪ್ಪಂದಕ್ಕೆ ಮುಂದಾಯ್ತು. 18 ಎಕರೆ 27 ಗುಂಟೆ ಜಮೀನಿನ ಪೈಕಿ ಬಿಲ್ಡರ್ 5.4 ಎಕರೆಯಷ್ಟು ಜಾಗದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಬೇಕು ಎಂಬುದು ಒಪ್ಪಂದದಲ್ಲಿತ್ತು.ಅಲ್ಲದೇ ಈ ನಿಲ್ದಾಣವನ್ನು 99 ವರ್ಷಗಳ ನಂತರ ಅದನ್ನು ಬಿಎಂಆರ್‌ಸಿಎಲ್‌ಗೆ ಮರಳಿಸಬೇಕು ಎಂದು ಹೇಳಲಾಗಿತ್ತು.ಆದರೆ ತನಿಖೆಯಲ್ಲಿ ತಿಳಿದುಬಂದಿದ್ದೇ ಬೇರೆ, ಹಮಾರಾ ಶೆಲ್ಟರ್ಸ್ ಹಿಡಿತದಲ್ಲಿರುವ ಐದು ಎಕರೆ 4 ಗುಂಟೆ ಪ್ರದೇಶದಲ್ಲಿ ಸುಮಾರು 2 ಎಕರೆ ಜಾಗ ಹಮಾರ ಶೆಲ್ಟರ್ಸ್ ದ್ದಲ್ಲವೇ ಅಲ್ಲ.ಅದು ಭಾರತೀಯ ರೈಲ್ವೆ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದೆ ಎಂಬುದು.ಆದರೆ ಮುಂದುವರೆದ ತನಿಖೆಯಲ್ಲಿ ಮಂತ್ರಿ ಡೆವಲಪರ್ಸ್‌ಗೆ ಸೇರಿದೆ ಎನ್ನಲಾದ 18.27 ಎಕರೆ ಪ್ರದೇಶದ ಮಾಲೀಕತ್ವದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಏಕಂದರೆ ಒಟ್ಟು 18.27 ಎಕರೆ ಪ್ರದೇಶದಲ್ಲಿ ಕೇವಲ 9.23 ಎಕರೆ ಪ್ರದೇಶ ಮಾತ್ರ ಮಂತ್ರಿ ಡೆವಲಪರ್ಸ್‌ಗೆ ಸೇರಿದ್ದಾಗಿದೆ. ತನ್ನದು ಎಂದು ಹೇಳುತ್ತಿರುವ 2.31 ಗುಂಟೆ ಪ್ರದೇಶ ರಸ್ತೆಗೆ ಸೇರಿದ್ದೆನ್ನುವುದು ಗ್ರಾಮ ನಕ್ಷೆ ಹಾಗೂ ಕಂದಾಯ ಸರ್ವೆಯಿಂದಲೇ ದೃಢಪಟ್ಟಿದೆ. ಅಲ್ಲದೇ ಇದರಲ್ಲಿ ಹನುಮಂತಪುರ ಹಾಗೂ ಕೇತಮಾರನಹಳ್ಳಿ ವ್ಯಾಪ್ತಿಯ 1.27 ಎಕರೆ ಪ್ರದೇಶ ರೈಲ್ವೆ ಇಲಾಖೆಗೆ ಸೇರಿದೆ. ಉಳಿದ 35 ಗುಂಟೆ ಜಾಗ (ಸರ್ವೆ ನಂ 3593/1) ವಾಸ್ತವವಾಗಿ ಜಕ್ಕರಾಯ ಕೆರೆಗೆ ಸೇರಿದೆ. ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿರುವ 32 ಗುಂಟೆ ಪ್ರದೇಶ ಸರ್ಕಾರಕ್ಕೆ ಸೇರಿದೆ.ಆದರೆ ಉಳಿದ 14.21 ಗುಂಟೆ ಪ್ರದೇಶದಲ್ಲಿ 4 ಎಕರೆ 38 ಗುಂಟೆ ಜಾಗ ಯಾರ ಒಡೆತನಕ್ಕೆ ಸೇರಿದೆ ಎಂಬ ಬಗ್ಗೆ ದಾಖಲೆಗಳಿಲ್ಲ ಎಬುದು ತನಿಖೆಯಲ್ಲಿ ದೃಢಪಟ್ಟಿತ್ತು.
ಮಂತ್ರಿಮಾಲ್ ಗೆ ನಕಲಿ ಖಾತೆ ಮಾಡಿಕೊಡಲು ಬಿಬಿಎಂಪಿ ಕಂದಾಯ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳಾದ ಲಕ್ಷ್ಮಮ್ಮ, ಚಿಕ್ಕಣ್ಣ, ಕಂದಾಯ ಅಧಿಕಾರಿಗಳಾದ ಮುನಿಯಪ್ಪ, ಮಂಜಪ್ಪ, ಉಪ ಆಯುಕ್ತ ಲಿಂಗರಾಜು, ಕಂದಾಯ ಅಧಿಕಾರಿ ಬಿ.ಎನ್.ದಯಾನಂದ್ ಹಣ ಪಡೆದಿದ್ದರು ಎನ್ನುವುದು ಕೂಡ ತನಿಖೆಯಲ್ಲಿ ದೃಢಪಟ್ಟಿತ್ತು..ಜತೆಗೆ ಭೂಮಿಯ ಮೇಲೆ ಹಕ್ಕಿಲ್ಲದಿದ್ದರೂ ಸುಮಾರು 3 ಎಕರೆ ಪ್ರದೇಶವನ್ನು ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿಗೆ ನೀಡಿ ಟಿಡಿಆರ್ ಪಡೆದಿರುವುದು ವರದಿಯಿಂದ ಪತ್ತೆಯಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಆಯುಕ್ತರು ಮಂತ್ರಿ ಮಾಲ್ ಗೆ ನೊಟೀಸ್ ನೀಡಿದ್ದರು..ಆದರೆ ಇದೀಗ ಟಿಡಿಆರ್ ನೀಡಿ ಹಣ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಆಯಕ್ತ ತುಷಾರ ಗಿರಿನಾಥ್ ಮಂತ್ರಿ ಸಂಸ್ಥೆ ವಿರುದ್ದ ಎಫ್ ಐ ಆರ್ ದಾಖಲಿಸುವಂತೆ ಸೂಚಿಸಿದ್ದಾರೆನ್ನಲಾಗ್ತಿದೆ.ಇವರ ಸೂಚನೆ ಮೇರೆಗೆ ಪಶ್ಚಿಮ ವಲಯದ ಜಂಟಿ ಆಯುಕ್ತ ಎಫ್ ಐ ಆರ್ ದಾಖಲಿಸಲು ಮುಂದಾಗಿದ್ದಾರೆನ್ನುವುದು ತಿಳಿದುಬಂದಿದೆ.