ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ತೀವ್ರ ಪೈಪೋಟಿ:ರೇಸ್ ನಲ್ಲಿ ರವಿಕುಮಾರ್-ಕರೊಲ್ಲ-ವಂದಿತಾ ಶರ್ಮಾ-ಅನಿಲ್ ಕುಮಾರ್..

0

ಬೆಂಗಳೂರು: ಈ ವರ್ಷಾಂತ್ಯಕ್ಕೆ ತೆರವಾಗಲಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವವರು ಯಾರು..? ಎನ್ನುವ ಪ್ರಶ್ನೆ ವಿಧಾನಸೌಧದ ಪಡಸಾಲೆಯಲ್ಲಿ ಈಗಾಗಲೇ ಗಿರಕಿ ಹೊಡೆಯಲಾರಂಭಿಸಿದ.ಹತ್ತು  ಹಲವು ವಿಶ್ಲೇಷಣೆ-ವ್ಯಾಖ್ಯಾನಗಳ ಜತೆ ಕೆಲ ಹೆಸರುಗಳ ಪ್ರಸ್ತಾಪವಾಗುತ್ತಿದ್ದರೂ   ಅಂತಿಮ ಹಣಾಹಣಿಯಲ್ಲಿ ನಾಲ್ವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

ತ.ಮ.ವಿಜಯಭಾಸ್ಕರ್ ಅವರ ಅವಧಿ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುತ್ತಿದೆ. ಅವರನ್ನೇ ಮುಂದುವರೆಸುವ ಯಾವುದೇ ಆಲೋಚನೆಗಳು ಸರ್ಕಾರಕ್ಕೆ ಇದ್ದಂತಿಲ್ಲ. ಅಲ್ಲದೆ ತಾಂತ್ರಿಕವಾಗಿ ಅದು ಎಷ್ಟರಮಟ್ಟಿಗೆ ಸಾಧ್ಯ ಎನ್ನುವುದ ಸ್ಪಷ್ಟವಾಗಿಲ್ಲ. ಈ ಹಂತದಲ್ಲಿಯೇ ಹಲವು ಹಿರಿಯ ಐಎಎಸ್ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಲು ಲಾಬಿ ಮತ್ತು ಪ್ರಯತ್ನ ಶುರುವಿಟ್ಟುಕೊಂಡಿರುವುದಂತೂ ಸ್ಪಷ್ಟ.

ಹಾಗೆ ನೋಡಿದರೆ ನಿವೃತ್ತಿ ಅಂಚಿನಲ್ಲಿರುವ ಐಎಎಸ್‌ಗಳು ಈ ಹುದ್ದೆಗೆ ಪ್ರಬಲ ಪೈಪೋಟಿ ನಡೆಸುವುದು ಸಾಮಾನ್ಯ. ಆದರೆ ಅಂತಿಮವಾಗಿ ಅದು ಯಾರಿಗೆ ದಕ್ಕುತ್ತದೆ ಎನ್ನುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಈ ಬಾರಿಯೂ ಅಂತಹುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದೇನಲ್ಲ. ಯಾರು ಎಷ್ಟೇ ಮಟ್ಟಿಗೆ ಅರ್ಹರಾಗಿದ್ದರೂ, ಎಂತಹುದೇ ಸಾಮರ್ಥ್ಯವಿದ್ದರೂ ಸರ್ಕಾರವನ್ನು ಆಳುವವರ ಕೃಪಾಕಟಾಕ್ಷವಿಲ್ಲದೆ ಆ ಹುದ್ದೆಯನ್ನು ಅಲಂಕರಿಸುವುದು ಕಷ್ಟಸಾಧ್ಯ. ಹಾಗಾಗಿ ರೇಸ್‌ನಲ್ಲಿರುವ ಬಹುತೇಕರು ಅಂತಹುದೇ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಇನ್ನು ಅಂತಿಮ ಹಣಾಹಣಿಯಲ್ಲಿ 3 ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಪಿ. ರವಿಕುಮಾರ್, ಪ್ರದೀಪ್ ಸಿಂಗ್ ಖರೋಲಾ, ವಂದಿತಾ ಶರ್ಮ ಈ ಪೈಕಿ ಪೈಪೋಟಿಯಲ್ಲಿರುವ ಅಧಿಕಾರಿಗಳು. ಜ್ಯೇಷ್ಠತೆ ಮತ್ತು ಹಿರಿತನದ ಆಧಾರದಲ್ಲಿ 1984 ನೇ ಬ್ಯಾಚ್‌ನ ಪಿ. ರವಿಕುಮಾರ್ ಅಗ್ರಪಂಕ್ತಿಯಲ್ಲಿದ್ದಾರೆ. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿಕುಮಾರ್ ಈಗಾಗಲೇ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದವರು. ಯಾವುದೇ ಹಂತದಲ್ಲೂ ತಮ್ಮ ಹೆಸರಿಗೆ ಮಸಿ ಬಳಿದುಕೊಂಡವರಲ್ಲ. ಹಾಗೆಯೇ ಸರ್ಕಾರದ ಮಂತ್ರಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕೂಡಾ ಇಟ್ಟುಕೊಂಡಿದ್ದಾರೆ.

ಇನ್ನು ರೇಸ್‌ನಲ್ಲಿರುವ 2ನೇ ಹೆಸರು. 1985 ನೇ ಬ್ಯಾಚ್‌ನ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ. ಸದ್ಯಕ್ಕೆ ಕೇಂದ್ರ ಸೇವೆಯಲ್ಲಿರುವ ಖರೋಲಾ ವೈಮಾನಿಕ ಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಖರೋಲಾ ಹತ್ತು ಹಲವು ಇಲಾಖೆಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು.

ವಂದಿತಾ ಶರ್ಮ
      ವಂದಿತಾ ಶರ್ಮ
ರವಿಕುಮಾರ್
                  ರವಿಕುಮಾರ್

ಇನ್ನು ಅಂತಿಮವಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿಬರುತ್ತಿರುವ ಪ್ರಬಲವಾದ ಮತ್ತೊಂದು ಹೆಸರು 1986 ನೇ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮ. ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಂದಿತಾ ಶರ್ಮ ಮಹಿಳಾ ಕೋಟಾದಲ್ಲಿ ಹುದ್ದೆಯನ್ನು ಪಡೆದರೂ ಆಶ್ಚರ್ಯ ಪಡಬೇಕಿಲ್ಲ.

ಬಿ. ಹೆಚ್. ಅನಿಲ್‌ಕುಮಾರ್.
ಬಿ. ಹೆಚ್. ಅನಿಲ್‌ಕುಮಾರ್.
ಪ್ರದೀಪ್ ಸಿಂಗ್ ಖರೋಲಾ
ಪ್ರದೀಪ್ ಸಿಂಗ್ ಖರೋಲಾ

ಹಾಗಾಗಿ ಮೂವರಲ್ಲಿ ಅಂತಿಮವಾಗಿ ಯಾರು ಈ ಹುದ್ದೆಗೆ ಅರ್ಹ, ಸಮರ್ಥ ಹಾಗೂ ಯೋಗ್ಯ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗದಿದ್ದರೂ ಕನ್ನಡ ಫ್ಲಾಶ್ ನ್ಯೂಸ್ ಗೆ  ಲಭ್ಯವಾಗಿರುವ ಸರ್ಕಾರದ ಉನ್ನತ ಮೂಲಗಳ ಪ್ರಕಾರ  ಪಿ. ರವಿಕುಮಾರ್ ಅವರನ್ನೇ ಬಹುತೇಕ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆಯಂತೆ. ಕಾದುನೋಡಬೇಕು. ಅಂತಿಮವಾಗಿ ಸರ್ಕಾರದ ಕೃಪಕಟಾಕ್ಷಕ್ಕೆ ಯಾರು ಒಳಗಾಗುತ್ತಾರೆ..ಯಾರಿಗೆ ಒಲಿಯುತ್ತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆ.. 

ಈ ಮೂವರ ನಡುವೆ ಅಚ್ಚರಿ ರೂಪದಲ್ಲಿ  ತೇಲಿಬರುತ್ತಿರುವ ಮತ್ತೊಂದು ಹೆಸರು ಹಿರಿಯ ಐಎಎಸ್ ಅಧಿಕಾರಿ ಬಿ. ಹೆಚ್. ಅನಿಲ್‌ಕುಮಾರ್. 1987 ರ   ಬ್ಯಾಚ್ IAS  ಅಧಿಕಾರಿಯಾಗಿರುವ ಅನಿಲ್‌ಕುಮಾರ್ ಕೇಂದ್ರದಲ್ಲೂ ಸೇವೆ ಸಲ್ಲಿಸಿರುವ ಅನುಭವಿ. ಇದೇ ಅನುಭವವನ್ನು ಪರಿಗಣಿಸಿ, ಕೊರೊನಾ ಅವಧಿಯಲ್ಲಿ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನಿಯೋಜಿಸಲಾಗಿತ್ತು. ಆದರೆ ಬದಲಾದ ವಿದ್ಯಮಾನದಲ್ಲಿ ಸಾರ್ವಜನಿಕ ಉದ್ದಿಮೆಗಳ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಯಿತು. ದಲಿತ ಕೋಟಾದಲ್ಲಿ ಅನಿಲ್‌ಕುಮಾರ್ ಹೆಸರನ್ನು ರಾಜ್ಯ ಸರ್ಕಾರ ಪರಿಗಣಿಸಿದರೂ ಆಶ್ಚರ್ಯವಿಲ್ಲ. ಹಾಗಾಗಿ ಮೂವರ ಜೊತೆಗೆ ನಾಲ್ಕನೇ ಸ್ಪರ್ಧಿಯಾಗಿ ಅನಿಲ್‌ಕುಮಾರ್ ಕಣದಲ್ಲಿದ್ದಾರೆ ಎನ್ನಲಾಗುತ್ತಿದೆ. 

Spread the love
Leave A Reply

Your email address will not be published.

Flash News