50 ಲಕ್ಷಕ್ಕೆ ಮಹರ್ಷಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್..!?.ಡಿಮ್ಯಾಂಡ್ ಇಟ್ಟವರ ಬಳಿ ಇದೆಯಾ ಗುರೂಜಿಯ ತೀರಾ ಖಾಸಗಿ ವಿಚಾರಗಳ ಸ್ಪೋಟಕ ರಹಸ್ಯ..?!

0

ಬೆಂಗಳೂರು: ಅಧ್ಯಾತ್ಮ ಪ್ರಪಂಚದಲ್ಲಿ ಮಹರ್ಷಿ ಆನಂದ್ ಗುರೂಜಿ ಸಾವಿರಾರು ಭಕ್ತ ಸಮೂಹ-ಅನುಯಾಯಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸೇ ಸರಿ..ಗುರೂಜಿಯ ತೀರಾ ಖಾಸಗಿ ವಿಚಾರಗಳನ್ನು ಇಟ್ಟುಕೊಂಡು ಅವರ ಪರಿಚಯಸ್ಥರೆಂದು ಹೇಳಿಕೊಂಡಿದ್ದ ಮೂವರು ಬ್ಲ್ಯಾಕ್ ಮೇಲ್ ಮಾಡಿದ್ದಷ್ಟೇ ಅಲ್ಲ,50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದಾರಂತೆ.

ಆನಂದ್ ಗುರೂಜಿ ಅವರ ಹೆಸರು ಕೇಳದವರೇ ಕಡಿಮೆ..ನಮ್ಮ ಸಮಾಜದಲ್ಲಿ  ಬಹುದೊಡ್ಡ ಹೆಸರು. ಯಾವುದೇ ಊರು, ಯಾವುದೇ ಮನೆಗಳಲ್ಲಿ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಾದರೆ ಅವರ ಪೌರೋಹಿತ್ಯವನ್ನೇ ಬಯಸುವವರ ಸಂಖ್ಯೆ ಹೆಚ್ಚು. ಆದರೆ ಇದೀಗ ಇದೇ ಆನಂದ ಗುರೂಜಿ ವಿವಾದಕ್ಕೆ ಸಿಲುಕಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ತಮ್ಮನ್ನು ಕೆಲವು ಪಟ್ಟಭದ್ರರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನಿಟ್ಟುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ.

ವೆಂಕಟೇಶ್, ಕೃಷ್ಣಮೂರ್ತಿ, ವೇಲು ಎಂಬ ಮೂವರು ತಮ್ಮನ್ನು ೫೦ ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಆನಂದ್ ಗುರೂಜಿ ಮಾಡಿದ್ದು ಅವರ ಪರವಾಗಿ ನಾಗರಾಜ್ ಬಿ.ಆರ್. ಎನ್ನುವವರು ಗಿರಿನಗರ ಠಾಣೆಯಲ್ಲಿ ಕಳೆದ ಜನವರಿ ೨೮ರಂದು ದೂರು ದಾಖಲಿಸಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.  

ಆನಂದ ಗುರೂಜಿಯವರಿಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳ ಹಿನ್ನೆಲೆಯಲ್ಲಿ ಯಾವ ರೀತಿಯ ಸಂಘರ್ಷ, ಗೊಂದಲಗಳಾಗಿವೆಯೋ ಗೊತ್ತಿಲ್ಲ. ಮೂವರು ಅವರನ್ನು ೫೦ ಲಕ್ಷಕ್ಕೆ ಪದೇ ಪದೇ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಾಟ್ಸಪ್‌ನಲ್ಲಿ ಗುರೂಜಿಯವರ ಬಗ್ಗೆ ಅವಹೇಳನಕಾರಿಯಾಗುವಂತಹ ಸಾಕಷ್ಟು ಸಂದೇಶಗಳನ್ನು ಮೂವರು ಹರಿಯಬಿಟ್ಟು ಸಮಾಜದಲ್ಲಿ ಗುರೂಜಿಯವರಿಗಿರುವ ಘನತೆ, ಮರ್ಯಾದೆ ಹಾಗೂ ಗೌರವವನ್ನು ಮಣ್ಣುಪಾಲು ಮಾಡುವ ದುರುದ್ದೇಶ ಮೂವರಿಗಿತ್ತು ಎನ್ನಲಾಗಿದೆ.

50 ಲಕ್ಷ ಹಣವನ್ನು ನೀಡದಿದ್ದರೆ ನಿಮಗೆ ಸಂಬಂಧಿಸಿದ `ಆ ವೈಯಕ್ತಿಕ’ ವಿಚಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತೇವೆ. ನೀವು ಮುಖ ಎತ್ತಿಕೊಂಡು ತಿರುಗದಂತಹ ಸ್ಥಿತಿಗೆ ನಿಮ್ಮನ್ನು ತರುತ್ತೇವೆ. ಯಾವ ಸಮಾಜ ನಿಮ್ಮನ್ನು ಗೌರವದಿಂದ ಕಾಣುತ್ತಿತ್ತೋ, ಯಾವ ಜನ ನಿಮ್ಮನ್ನು ಉಪ್ಪರಿಗೆಯಲ್ಲಿ ಕೂರಿಸಿ ರಾಜ ಮರ್ಯಾದೆ ನೀಡುತ್ತಿತ್ತೋ ಆ ಸಮಾಜ ಮತ್ತು ವ್ಯಕ್ತಿಗಳ ನಡುವೆ ನಿಮ್ಮ ಬಂಡವಾಳವನ್ನು ಬಟಾಬಯಲು ಮಾಡುತ್ತೇವೆ ಎಂದು ವೆಂಕಟೇಶ್, ಕೃಷ್ಣಮೂರ್ತಿ, ವೇಲು ಎಂಬುವವರು ಮೊಬೈಲ್ ಹಾಗೂ ವಾಟ್ಸಪ್ ಕರೆಗಳಲ್ಲಿ ಬೆದರಿಸುತ್ತಿದ್ದರೆಂದು ಹೇಳಲಾಗಿದೆ.

ಈ ಬಗ್ಗೆ ಗುರೂಜಿ ಪ್ರತಿಕ್ರಿಯಿಸಿದ್ದು ಮೇಲ್ಕಂಡ ಮೂವರು ಯಾರೆಂಬುದೇ ನನಗೆ ಗೊತ್ತಿಲ್ಲ. ಅವರು ಹೇಳುವಂತೆ ನನಗೂ ಅವರಿಗೂ ಯಾವುದೇ ಹತ್ತಿರದ ಸಂಬಂಧ ಅಥವಾ ಸಲುಗೆಯೂ ಇರಲಿಲ್ಲ. ನನಗಿರುವ ಗೌರವವನ್ನು ಮಣ್ಣುಪಾಲು ಮಾಡುವ ದುರುದ್ದೇಶದಿಂದ ಬ್ಲ್ಯಾಕ್‌ಮೇಲ್ ತಂತ್ರಗಾರಿಕೆ ಅನುಸರಿಸಿದ್ದಾರೆ. ಜನತೆ ಇದರ ಬಗ್ಗೆ ವಿಚಲಿತರಾಗಬೇಕಾದ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆನಂದ್ ಗುರೂಜಿಯವರ ಪರವಾಗಿ ದೂರು ದಾಖಲಿಸಿರುವ ಬಿ.ಆರ್.ನಾಗರಾಜ್ ಅವರ ಕಂಪ್ಲೈಂಟ್ ಸಾಕಷ್ಟು ಕುತೂಹಲದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಇಂದಿನ ಆನಂದ್ ಗುರೂಜಿ ಅವರ ಹಿನ್ನೆಲೆ ಹಾಗೂ ಇತಿಹಾಸದ ಬಗ್ಗೆ ಸಾಕಷ್ಟು ರೋಚಕ ಕತೆಗಳಿವೆ…! ಇದು ಅವರನ್ನು ಹತ್ತಿರದಿಂದ ಬಲ್ಲ, ಸಾಕಷ್ಟು ವರ್ಷಗಳಿಂದ ಅವರ ಪೂರ್ವಾಶ್ರಮವನ್ನು ಅರಿತವರಿಗೆ ಚೆನ್ನಾಗಿ ಗೊತ್ತು.

ಕೆಲ ವರ್ಷಗಳ ಹಿಂದೆ ಇದೇ ಆನಂದ್ ಗುರೂಜಿಯವರ ತೀರಾ ವ್ಯಕ್ತಿಗತ ವಿಚಾರಗಳುಳ್ಳ ಸಿ.ಡಿ.ಯೊಂದು ಬಿಡುಗಡೆಯಾಗುವ ಸನ್ನಾಹದಲ್ಲಿತ್ತು. ಒಂದು ದೃಶ್ಯ ಮಾಧ್ಯಮ ಅದರಲ್ಲಿ ಕೆಲವು ಆಯ್ದ ತುಣುಕುಗಳನ್ನು ಕ್ಷಣಕ್ಷಣಕ್ಕೂ ಬ್ಲರ್ ಮಾಡಿ ತೋರಿಸಿ, ಕೆಲವೇ ಕ್ಷಣಗಳಲ್ಲಿ ವೀಕ್ಷಿಸಿ ಎಂದು ಕಮಿಂಗ್ ಅಪ್‌ಗಳನ್ನು ಕೊಟ್ಟಿದ್ದೇ ಕೊಟ್ಟಿದ್ದು. ಆದರೆ ಅದಾದ ಕೆಲವೇ ನಿಮಿಷಗಳಲ್ಲಿ ಸುದ್ದಿಯೂ ಬರಲಿಲ್ಲ. ಆ ಸಿ.ಡಿ.ಯಲ್ಲಿದ್ದಂತಹ ಸಂಗತಿಗಳೂ ಬಯಲಾಗಲಿಲ್ಲ…! ಎನ್ನುವ ಮಾತುಗಳು ಇಂದಿಗೂ ಆನಂದ ಗುರೂಜಿಯ ವಿಷಯ ಬಂದಾಗಲೆಲ್ಲ ಪದೇ ಪದೇ ಪ್ರಸ್ತಾಪವಾಗುತ್ತಲೇ ಇರುತ್ತದೆ.

ಬಹುಶಃ ಅಂತಹುದೇ ಸಂಗತಿಗಳನ್ನು ಒಳಗೊಂಡು ಮೇಲ್ಕಂಡ ಮೂವರು ಆನಂದ ಗುರೂಜಿಯವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಗಿರಿನಗರ ಪೊಲೀಸರು ದೂರನ್ನು ಗಂಭಿರವಾಗಿ ಪರಿಗಣಿಸಿ ವಿಚಾರಣೆಯನ್ನು ಯಾವುದೇ ಒತ್ತಡಕ್ಕೆ ಅಥವಾ ಆಮಿಶಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಮಾಡಿದ್ದಾದಲ್ಲಿ ಗುರೂಜಿ ಹಾಗೂ ಅವರ ವಿರುದ್ಧ ತಿರುಗಿಬಿದ್ದಿರುವವರ ನಡುವೆ ನಿಜವಾಗಿ ನಡೆದಿದ್ದಾದರೂ ಏನು? ಎನ್ನುವ ಸತ್ಯ ಬಯಲಾಗಬಹುದೇನೋ? ರಾಜ್ಯದ ಜನತೆ ಎಲ್ಲಕ್ಕಿಂತ ಹೆಚ್ಚಾಗಿ ಆನಂದ ಗುರೂಜಿಯವರನ್ನು ದೈವ ಸ್ವರೂಪಿಯಾಗಿ ಗೌರವಿಸುವ ಭಕ್ತರು ಹಾಗೂ ಅನುಯಾಯಿಗಳಿಗೆ `ಈ ಸತ್ಯ’ ತಿಳಿಯಲೇಬೇಕಿದೆ. 

Spread the love
Leave A Reply

Your email address will not be published.

Flash News