ವಾರಾಂತ್ಯ ಕರ್ಫ್ಯೂ; ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಟುವಟಿಕೆ ಸ್ತಬ್ಧ..

0

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂವನ್ನು ಕೋವಿಡ್-19 ಸೋಂಕು ಹರಡುವ ಸರಪಳಿಯನ್ನು ಮುರಿಯಲು ರಾಜ್ಯ ಸರ್ಕಾರ ಹೇರಿದ್ದು ನಿನ್ನೆ ರಾತ್ರಿಯಿಂದ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಅಗತ್ಯ ವಸ್ತುಗಳ ಸೇವೆಗಳು ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳು ರಾಜ್ಯಾದ್ಯಂತ ಸ್ತಬ್ಧವಾಗಿದೆ. ತುರ್ತು ಸೇವೆಗಳಿಗೆ ಮಾತ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಇಂದು ಮತ್ತು ನಾಳೆ ಬಳಕೆಯಾಗುತ್ತಿವೆ. ಯಾವಾಗಲೂ ಜನದಟ್ಟಣೆಯಿಂದ ವ್ಯಾಪಾರ-ವಹಿವಾಟು, ಜನಸಂಚಾರ, ವಾಹನ ಸಂಚಾರಗಳಿಂದ ಗಿಜಿಗಿಡುವ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಇಂದು ನೀರವ ಮೌನ.  ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯ ಕರ್ಫ್ಯೂನಿಂದಾಗಿ ಇಂದಿನಿಂದ ಎಲ್ಲಾ ಶನಿವಾರಗಳಂದು ರಾಜ್ಯದಲ್ಲಿರುವ ಎಲ್ಲಾ ಅಂಚೆ ಕಚೇರಿಗಳು ಬಂದ್ ಆಗಿರುತ್ತವೆ ಎಂದು ಕರ್ನಾಟಕ ಅಂಚೆ ಇಲಾಖೆ ವೃತ್ತ ತಿಳಿಸಿದೆ.
ಕೋವಿಡ್ ಸೋಂಕು ಅನೇಕ ಸಿಬ್ಬಂದಿಗೆ ತಗುಲಿರುವುದು ಕೂಡ ಇಲಾಖೆಯ ನಿರ್ಧಾರಕ್ಕೆ ಮತ್ತೊಂದು ಕಾರಣವಾಗಿದೆ. ಮೇ 4ರವರೆಗೆ ಬೆಂಗಳೂರಿನಲ್ಲಿ ವಾರಾಂತ್ಯಗಳಲ್ಲಿ ಮೆಟ್ರೊ ರೈಲು ಕೂಡ ಸಂಚರಿಸುವುದಿಲ್ಲ. ನಾಡಿದ್ದು ಸೋಮವಾರದಿಂದ ಮೆಟ್ರೊ ಸಂಚಾರ ವಾರದ ದಿನಗಳಲ್ಲಿ 90 ನಿಮಿಷ ಬೇಗನೆ ಬಂದ್ ಆಗುತ್ತದೆ. ಕೊನೆಯ ಮೆಟ್ರೊ ರೈಲು ಬೈಯಪ್ಪನಹಳ್ಳಿಯಿಂದ, ಮೈಸೂರು ರಸ್ತೆ, ನಾಗಸಂದ್ರ ಮತ್ತು ಟಾಟಾ ಸಿಲ್ಕ್ ಇನ್ಸ್ಟಿಟ್ಯೂಟ್ ಗೆ ಸಂಚರಿಸಲಿದೆ. ಕರ್ನಾಟಕ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದು, ಕೆಎಸ್ ಆರ್ ಟಿಸಿ ಸಂಚಾರ ದಟ್ಟಣೆ ಮತ್ತು ಅಗತ್ಯಗಳನ್ನು ನೋಡಿಕೊಂಡು ಸಂಚಾರ ನಡೆಸುತ್ತಿದೆ. ಪ್ರಯಾಣಿಕರು ತೀರಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಪ್ರಯಾಣ ಮಾಡುವಾಗ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೆಎಸ್ ಆರ್ ಟಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ಮಧ್ಯೆ ಬಿಎಂಟಿಸಿ 450ರಿಂದ 500 ಅಗತ್ಯ ಸಾಮಾನ್ಯ ಸೇವೆಗಳ ಬಸ್ಸುಗಳನ್ನು ಮಾತ್ರ ಸಂಚಾರಕ್ಕೆ ಬಿಟ್ಟಿದೆ. ಅನುಮತಿ ಹೊಂದಿರುವ ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಕರ್ಫ್ಯೂ ಸಮಯದಲ್ಲಿ ಮನೆಯಿಂದ ಹೊರಬಹುದಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಿ ಬರಲು ವಾಯುವಜ್ರ ಬಸ್ಸುಗಳ ಸೇವೆಯಿರುತ್ತದೆ. ಬಸ್ಸುಗಳಲ್ಲಿ ಕೇವಲ ಶೇಕಡಾ 50ರಷ್ಟು ಮಾತ್ರ ಪ್ರಯಾಣಿಕರು ಕುಳಿತುಕೊಂಡು ಹೋಗಬಹುದಾಗಿದೆ. ವಾರಾಂತ್ಯ ಕರ್ಫ್ಯೂನಲ್ಲಿ ರಾಜ್ಯದಲ್ಲಿ ಯಾವೆಲ್ಲಾ ಸೇವೆಗಳು, ಚಟುವಟಿಕೆಗಳು ಇರುತ್ತವೆ, ಯಾವುದಕ್ಕೆಲ್ಲಾ ನಿರ್ಬಂಧವಿದೆ ಎಂಬ ಬಗ್ಗೆ ಇನ್ನೂ ಕೆಲವರಲ್ಲಿ ಗೊಂದಲವಿದೆ ಎಂಬ ಕಾರಣಕ್ಕೆ ವಾಣಿಜ್ಯ ಇಲಾಖೆ ಅಗತ್ಯ ಮತ್ತು ತುರ್ತು ಸೇವೆಗಳಿಗೆ ಯಾವುದಾವುದಕ್ಕೆ ಬೆಳಗ್ಗೆ 10 ಗಂಟೆಯವರೆಗೆ ಅನುಮತಿಯಿದೆ ಎಂದು ಪಟ್ಟಿ ಮಾಡಿದೆ. ಔಷಧಿಗಳು, ಸ್ಯಾನಿಟೈಸರ್, ಆಮ್ಲಜನಕ, ವೈದ್ಯಕೀಯ ಉಪಕರಣಗಳು, ವೈದ್ಯಕೀಯ ಬಳಕೆಯ ಬಟ್ಟೆಗಳು ಮತ್ತು ಅವುಗಳ ಉತ್ಪಾದನೆಗೆ ಪೂರಕವಾದ ಕಚ್ಚಾ ವಸ್ತುಗಳ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತವೆ. ಅಕ್ಕಿ ಗಿರಣಿ, ಎಣ್ಣೆ ಮಿಲ್, ಬೇಳೆಕಾಳು ಸಂಸ್ಕರಣಾ ಮಿಲ್ ಗಳು, ಡೇರಿ ಉತ್ಪನ್ನಗಳು, ಆರ್ ಒ ಮತ್ತು ಡಿಸ್ಟಿಲ್ಡ್ ನೀರು ಘಟಕ, ಪ್ಯಾಕೇಜ್ಡ್ ನೀರು ಘಟಕ, ಹಿಟ್ಟಿನ ಗಿರಣಿಗಳು, ಆಹಾರ ಸಂಸ್ಕರಣಾ ಘಟಕ, ಬೇಕರಿ ಉತ್ಪನ್ನಗಳು, ಮೀನು, ಕೋಳಿ, ಪಶು ಆಹಾರ ತಯಾರಿಕೆ, ಮಂಜುಗಡ್ಡೆ ತಯಾರಿಕೆ ಘಟಕ, ಮೆಣಸಿನ ಪುಡಿ, ಅರಶಿನ ಪುಡಿ, ಉಪ್ಪು ತಯಾರಿಕೆ ಮತ್ತಿತರ ಕೃಷಿ ಸಂಬಂಧಿ ಉತ್ಪಾದನಾ ಘಟಕಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.
ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್ ಮೆಂಟ್ ಪಾರ್ಕ್ ಗಳು, ಬಾರ್, ಕ್ಲಬ್, ಆಡಿಟೋರಿಯಂಗಳು, ಸಮಾವೇಶದ ತಾಣಗಳನ್ನು ಬಂದ್ ಮಾಡಲಾಗಿದೆ. ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶವಿಲ್ಲ. ತುರ್ತು ಮತ್ತು ಅಗತ್ಯ ಚಟುವಟಿಕೆ ಹೊರತುಪಡಿಸಿ ಬೇರೆಯದಕ್ಕೆ ಅವಕಾಶವಿಲ್ಲ.
ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಬರಲು ಅವಕಾಶವಿದೆಯಷ್ಟೆ. ಹೀಗಾಗಿ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.

Spread the love
Leave A Reply

Your email address will not be published.

Flash News