ಮುಷ್ಕರ ನಡೆಸಿದ್ದ ಸಾರಿಗೆ ನಿಗಮಗಳ ನೌಕರರೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕು: ಹೈಕೋರ್ಟ್​ ನಿರ್ದೇಶನ

0

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ಮಂಗಳವಾರ ವಿಚಾರಣೆ ನಡೆಸಿತು. ಮುಷ್ಕರ ಹಿಂಪಡೆದು ನೌಕರರು ಪಟ್ಟು ಸಡಿಲಿಸಿದ್ದಾರೆ. ಸರ್ಕಾರವೂ ಈಗ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರಿದ್ದ ನ್ಯಾಯಪೀಠವು ಸೂಚನೆ ನೀಡಿತು.ಅಮಾನತಾಗಿರುವ ಸಿಬ್ಬಂದಿ ಅಮಾನತು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳು ಸಲ್ಲಿಕೆಯಾದ 2 ವಾರಗಳ ಒಳಗೆ ಪ್ರಾಧಿಕಾರವು ಇತ್ಯರ್ಥಪಡಿಸಬೇಕು. ವಜಾಗೊಂಡ‌ ನೌಕರರೂ ಮೇಲ್ಮನವಿ ಸಲ್ಲಿಸಬೇಕು. ಈ ಅರ್ಜಿಗಳನ್ನು 2 ತಿಂಗಳಲ್ಲಿ ಮೇಲ್ಮನವಿ ಪ್ರಾಧಿಕಾರ ತೀರ್ಮಾನಿಸಬೇಕು. ಮೇ 12ರೊಳಗೆ ಸರ್ಕಾರ ಮಾತುಕತೆ ನಡೆಸಬೇಕು. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಬೇಕು. ಮಾತುಕತೆಯ ಬಳಿಕ ಸಮಸ್ಯೆ ಮುಂದುವರಿಯಬಾರದು. ಪ್ರಯಾಣಿಕರಿಗೆ ತೊಂದರೆಯಾಗಬಾರದು. ಮೇ 12ರೊಳಗೆ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಗೆ ‌ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಹೈಕೋರ್ಟ್​ ವಿಭಾಗೀಯ ಪೀಠವು ಹೇಳಿತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಲ್ಲಿ ಈಚೆಗೆ ಸಾರಿಗೆ ನಿಗಮಗಳ ನೌಕರರು ನಡೆಸಿದ್ದ ಮುಷ್ಕರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನೌಕರರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಮುಷ್ಕರ ನಿರತ ಹಲವು ನೌಕರರನ್ನು ಅಮಾನತು, ವಜಾ ಮಾಡಿತ್ತು. ನಂತರದ ದಿನಗಳಲ್ಲಿ ಹೈಕೋರ್ಟ್​ ಆದೇಶಕ್ಕೆ ತಲೆಬಾಗಿ ನೌಕರರು ಕೆಲಸಕ್ಕೆ ಹಾಜರಾಗಿದ್ದರು.

Spread the love
Leave A Reply

Your email address will not be published.

Flash News