ಬೆಡ್‌ಗಾಗಿ ಬಿಬಿಎಂಪಿ-ಹಾಸ್ಪಿಟಲ್ ಗಳ ಹಗ್ಗಜಗ್ಗಾಟ..!

0

ಬೆಂಗಳೂರು: ರಾಜಧಾನಿಯಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಒದಗಿಸಲು ಪರದಾಡುತ್ತಿರುವ ಸರ್ಕಾರ, ತಮ್ಮಲ್ಲಿರುವ ಶೇಕಡ 50ರಷ್ಟು ಹಾಸಿಗೆ ನೀಡಬೇಕೆಂದು ಆದೇಶ ಹೊರಡಿಸಿದ್ದರೂ ಖಾಸಗಿ ಆಸ್ಪತ್ರೆಗಳು ಈ ಆದೇಶವನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಹಗ್ಗಜಗ್ಗಾಟ ನಡೆಸುವಂತಾಗಿದೆ.
ಬಿಬಿಎಂಪಿ ಮಾಹಿತಿ ಪ್ರಕಾರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 850 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 876, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 4,604, ಖಾಸಗಿ ಆಸ್ಪತ್ರೆಗಳಲ್ಲಿ 3,701 ಹಾಗೂ ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 1,660 ಸೇರಿದಂತೆ ಒಟ್ಟು 11,691 ಹಾಸಿಗೆಗಳಿವೆ. ಈಗಾಗಲೇ 8,406 ಹಾಸಿಗೆಗಳು ಭರ್ತಿಯಾಗಿದ್ದು, ಕೇವಲ 3,282 ಹಾಸಿಗೆಗಳು ಮಾತ್ರ ಖಾಲಿ ಉಳಿದಿವೆ. ಇದರಲ್ಲಿ ಐಸಿಯು, ಐಸಿಯು ವೆಂಟಿಲೇಟರ್‌ ಹಾಸಿಗೆಗಳನ್ನು ಕೂಡ ಇವೆ. ರಾಜ್ಯ ಸರ್ಕಾರ ಈ ಹಿಂದೆ ಮಾಡಿದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟುಹಾಸಿಗೆಯನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಅದರಂತೆ ಇನ್ನೂ ಎರಡು ಸಾವಿರ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳು ಹಸ್ತಾಂತರಿಸಲು ಕಳ್ಳಾಟವಾಡುತ್ತಿವೆ. ಈ ನಡುವೆ ಸರ್ಕಾರ ಪುನಃ ಮತ್ತೊಂದು ಆದೇಶ ಮಾಡಿದ್ದು, ಶೇ.75ರಷ್ಟುಹಾಸಿಗೆ ಕೋವಿಡ್‌ಗೆ ಖಾಸಗಿ ಕಂಪನಿಗಳು ಕೊಡಬೇಕು. ಅಂದರೆ, ಎರಡು ಸಾವಿರದೊಂದಿಗೆ ಮತ್ತೆ ಮೂರು ಸಾವಿರ ಸೇರಿ ಒಟ್ಟು 5 ಸಾವಿರ ಹಾಸಿಗೆಗಳನ್ನು ಕೊಡಬೇಕಾಗಿದೆ.
ಕಳೆದ ವರ್ಷ ಕೋವಿಡ್‌ಗೆಂದು ಹಾಸಿಗೆ ಕೊಟ್ಟಿದ್ದ ಆಸ್ಪತ್ರೆಗಳಿಗೆ ಈವರೆಗೂ ಸರ್ಕಾರ ಬಿಲ್‌ ಪಾವತಿಸಿಲ್ಲ. ಅಲ್ಲದೇ ಸರ್ಕಾರ ಚಿಕಿತ್ಸೆಗೆ ಅತ್ಯಲ್ಪ ಶುಲ್ಕ ನಿಗದಿ ಮಾಡುತ್ತಿದ್ದು, ಇದರಿಂದ ಆಸ್ಪತ್ರೆಗಳಿಗೆ ನಷ್ಟವಾಗುತ್ತಿದೆ ಎಂಬ ಆರೋಪ ಖಾಸಗಿ ಆಸ್ಪತ್ರೆಗಳದ್ದು. ಸರ್ಕಾರ ನಿಗದಿತ ಸಮಯಕ್ಕೆ ಬಿಲ್ಲು ಪಾವತಿಸಿದರೆ ಹಾಸಿಗೆ ಕೊಡಲು ಅಭ್ಯಂತರವಿಲ್ಲ ಎನ್ನುತ್ತಿವೆ ಕೆಲ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು. ಜತೆಗೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸರಿಯಾಗಿ ಆಕ್ಸಿಜನ್‌, ರೆಮ್‌ಡೆಸಿವಿರ್‌ ಪೂರೈಕೆ ಮಾಡುತ್ತಿಲ್ಲ ಎಂಬ ವಾದ ಮಾಡುತ್ತಿವೆ.
ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ಜನ ಸಾಮಾನ್ಯರಿಗೂ ಕೂಡ ಉಚಿತವಾಗಿ ಚಿಕಿತ್ಸೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಹಾಸಿಗೆ ಮೀಸಲಿಡುತ್ತಿದೆ. ಇದು ಖಾಸಗಿ ಆಸ್ಪತ್ರೆಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಈ ಕಾರಣಕ್ಕಾಗಿಯೇ ಅನೇಕ ಖಾಸಗಿ ಆಸ್ಪತ್ರೆಗಳು ಬಿಯು ಸಂಖ್ಯೆ ಇದ್ದು, ಸಹಾಯವಾಣಿ ಮೂಲಕ ಹಾಸಿಗೆಗಳನ್ನು ಕಾಯ್ದಿರಿಸಿದ್ದರೂ ಸೋಂಕಿತ ವ್ಯಕ್ತಿಗಳನ್ನು ತಾಸುಗಟ್ಟಲೆ ಕಾಯಿಸಿ ಹಾಸಿಗೆ ಇಲ್ಲ ಎಂದು ವಾಪಸ್‌ ಕಳುಹಿಸುತ್ತಿರುವ ಪ್ರಕರಣಗಳು ಸಾಕಷ್ಟುನಡೆಯುತ್ತಿವೆ. ಸೋಂಕಿತರು ಹಾಸಿಗೆ ಇಲ್ಲವೆಂದು ವಾಪಸ್‌ ಆಗುತ್ತಿದ್ದಂತೆ ಅದೇ ಹಾಸಿಗೆಗೆ ತಮಗೆ ಬೇಕಾದ ರೋಗಿಯನ್ನು ದಾಖಲಿಸಿ ಅವರಿಂದ ಲಕ್ಷಾಂತರ ರುಪಾಯಿಗಳ ಬಿಲ್‌ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಕೇವಲ 9 ದಿನದ ಚಿಕಿತ್ಸೆಗೆ 6ರಿಂದ 9 ಲಕ್ಷ ರುಪಾಯಿ ಶುಲ್ಕ ವಿಧಿಸಲಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ.

Spread the love
Leave A Reply

Your email address will not be published.

Flash News