ಕೊರೊನಾ ವೈರಸ್ ನ ರೂಪಾಂತರಿ “ಡೆಲ್ಟಾ ಪ್ಲಸ್” ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು; ಸಿಎಂ ಯಡಿಯೂರಪ್ಪ..

0

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ರೂಪಾಂತರಿ ವೈರಸ್ ಡೆಲ್ಟಾಪ್ಲಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಿನ್ನೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಡೆಲ್ಟಾಪ್ಲಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮಹಾರಾಷ್ಟ್ರ ಹಾಗೂ ಕೇರಳದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆ ಕೂಡ ಹೆಚ್ಚು ನಿಗಾ ವಹಿಸಿ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂದು ಯಡಿಯೂರಪ್ಪ ಸೂಚಿಸಿದರು.

ಇನ್ನು ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದರೂ ಎಚ್ಚರಿಕೆಯಿಂದ ಇರಬೇಕು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಮನವಿ ಮಾಡಿದರು. ಇನ್ನು ಲಾಕ್‌ಡೌನ್ ನಿಂದ ಮಕ್ಕಳು ಅಪೌಷ್ಠಿಕತೆಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲದೇ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಅಪೌಷ್ಠಿಕತೆ ಇರುವ ಮಕ್ಕಳಿಗೆ ಸೂಕ್ತ ಪೌಷ್ಟಿಕ ಆಹಾರವನ್ನು ಒದಗಿಸಿ ವೈದ್ಯಕೀಯ ನಿಗಾ ವಹಿಸಬೇಕೆಂದು ಯಡಿಯೂರಪ್ಪ ಸೂಚಿಸಿದರು.

ಇನ್ನು ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕೇರಳದಲ್ಲಿ ಪಾಸಿಟಿವಿಟಿ ದರ ಶೇಕಡಾ ಹತ್ತರಷ್ಟಿದೆ. ಮಹಾರಾಷ್ಟ್ರದಲ್ಲೂ ಸಹ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಹಾರಾಷ್ಟ್ರದಿಂದ ಬರುವವರಿಗೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಅಂತರ್‌ರಾಜ್ಯ ಗಡಿ ಬಂದ್ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ ಎಂದು ಹೇಳಿದರು.

Spread the love
Leave A Reply

Your email address will not be published.

Flash News