“100 ಕೋಟಿ ವೆಚ್ಚದಲ್ಲಿ 2022ರ ನವೆಂಬರ್ ನೊಳಗೆ ಬೆಳ್ಳಂದೂರು ಸಂಪೂರ್ಣ ಕ್ಲೀನ್ ಆಗುತ್ತಂತೆ”..!

0

ಬೆಂಗಳೂರು: ಅರಣ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಅವರು, ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳ್ಳಂದೂರು ಕೆರೆಯ ಹೂಳೆತ್ತುವುದರ ಜೊತೆಗೆ ಇತರೆ ಕಾಮಗಾರಿಗಳಿಗೆಂದು ಬರೋಬ್ಬರಿ 100 ಕೋಟಿ ವೆಚ್ಚ ಮಾಡಲಾಗುತ್ತಿದೆ, ಹೆಚ್ಚು ಯಂತ್ರೋಪಕರಣಗಳು ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು, 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ವಿಶ್ವನಾಥ್ ಅವರು ನಿರ್ದೇಶನ ನೀಡಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು, ಬೆಳ್ಳಂದೂರು, ವರ್ತೂರು,  ದೊಡ್ಡಬನಹಳ್ಳಿ ಹಾಗೂ ಗುಂಜೂರು ಕೆರೆಗಳು ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ತೆಗೆದುಕೊಂಡ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಸ ವಿಲೇವಾರಿ, ಶಾಶ್ವತ ವಿದ್ಯುತ್ ಸಂಪರ್ಕ, ಕಾಂಪೌಂಡ್ ನಿರ್ಮಾಣ, ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದ ವಿಶ್ವನಾಥ್ ಅವರು, ಕಾಮಗಾರಿಯಲ್ಲಿ ತಡ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಹಾಗೆಯೇ ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ಕೊಟ್ಟ ವಿಶ್ವನಾಥ್ ಅವರು, ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿ, ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಎಂದು ಭರವಸೆ ನೀಡಿದ್ದರಲ್ಲದೇ, ತಕ್ಷಣ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Spread the love
Leave A Reply

Your email address will not be published.

Flash News