ಮೈಸೂರಿನಲ್ಲಿ “ಕೆಎಸ್ಆರ್ ಟಿಸಿ” ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ..
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಘೋಷಿಸಿದ್ದ ಲಾಕ್ಡೌನ್ ಇದೀಗ ಹಂತಹಂತವಾಗಿ ಸಡಿಲಿಕೆಯಾಗ್ತಿದೆ. ಸರ್ಕಾರ ಕಳೆದ ವಾರವಷ್ಟೇ ಕರ್ನಾಟಕದಲ್ಲಿ ಎರಡನೇ ಹಂತದ ಅನ್ಲಾಕ್ ಅನ್ನು ಜಾರಿಗೆ ತಂದಿದ್ದು, ಕೊರೊನಾ ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ.
ಆದರೆ ಕೊವಿಡ್ ಪಾಸಿಟಿವಿಟಿ ರೇಟ್ ಹೆಚ್ಚಿದ್ದ ಮೈಸೂರು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರ ಇರಲಿಲ್ಲ. ಆದರೆ ಈಗ ಮೈಸೂರಿನ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಸೋಮವಾರದಿಂದ ಮೈಸೂರಿನಲ್ಲಿ ಬಸ್ ಸೇವೆ ಆರಂಭಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಹೀಗಾಗಿ ಸೋಮವಾರ ಬೆಳಗ್ಗೆ ಆರು ಗಂಟೆಯಿಂದಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ನಡೆಸಲಿವೆ.
ಕೋವಿಡ್ ನಿಯಮದ ಪ್ರಕಾರ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಲಿದೆ. ನಿಗಮದ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಕೋವಿಡ್ 19 ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲನೆ ಮಾಡಲು ಸಹ ಕೋರಲಾಗಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ ಸಂಖ್ಯೆಯನ್ನ ಹೆಚ್ಚು ಮಾಡಲು ಸಾರಿಗೆ ಸಂಸ್ಥೆ ಪ್ಲಾನ್ ಮಾಡಿದೆ.
ಪಾಸಿಟಿವಿಟಿ ರೇಟ್ ಹೆಚ್ಚಿದ್ದ ಕಾರಣ ಸರ್ಕಾರ ಅನ್ಲಾಕ್ ನಿಂದ ಮೈಸೂರು ಜಿಲ್ಲೆಗೆ ವಿನಾಯ್ತಿ ಕೊಟ್ಟಿರಲಿಲ್ಲ. ಈಗ ಮೈಸೂರು ಪಾಸಿಟಿವಿಟಿ ರೇಟ್ ಕಡಿಮೆಯಾದ ಕಾರಣ ಕೆಲವನ್ನ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿತ್ತು. ಇದರಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ ಮಾಡಲು ಕೆಎಸ್ಆರ್ ಟಿಸಿ ನಿರ್ಧಸಿದೆ.