ಅಂದು 12ರ ವಯಸ್ಸಿನಲ್ಲಿ 92 ಕೆಜಿ ಮೈ ತೂಗುತ್ತಿದ್ದ ಸ್ಥೂಲಕಾಯದ ಬಾಲಕ,ಇಂದು 140 ಕೋಟಿ ಭಾರತೀಯರ ಹೆಮ್ಮೆಯ “ಬಂಗಾರ”
ತಿನ್ನೋದನ್ನು ಬಿಟ್ಟರೆ ಬೇರೇನೂ ಗೊತ್ತಿರದ ಆ ಬಾಲಕ, 12ರ ವಯಸ್ಸಿನಲ್ಲೇ 92 ಕೆಜಿ ತೂಗುತ್ತಿದ್ದ. ಆ ಸ್ಥೂಲಕಾಯವೇ ಪೋಷಕರಿಗೆ ದೊಡ್ಡ ತಲೆನೋವಾಗಿತ್ತು.. ಏನಪ್ಪಾ ಈ ಮಗುವಿನ ಭವಿಷ್ಯ.. ಮೈ ಭಾರ ಕಡ್ಮೆ ಮಾಡೊಕ್ಕೆ ಏನ್ ಮಾಡೋದಪ್ಪಾ.. ಎನ್ನುವ ಚಿಂತೆಗೆ ದೂಡಿತ್ತು. ಅನೇಕ ವರ್ಷಗಳವರೆಗೆ ಇಡೀ ಕುಟುಂಬವನ್ನು ಚಿಂತೆಯಲ್ಲಿ ಕೊಳೆಯುವಂತೆ ಮಾಡಿದ್ದ ಆ ಬಾಲಕ ಕೇವಲ 11 ವರ್ಷ ಕಳೆಯೋದ್ರಲ್ಲೇ ಸ್ಥೂಲಕಾಯ ಕಳ್ಕೊಂಡು ದೇಶವೇ ಹೆಮ್ಮೆ ಪಡುವಂಥ ಸಾಧನೆ ಮಾಡುತ್ತಾನೆಂದ್ರೆ ಅದೇನು ಕಡ್ಮೆ ಸಾಧನೆನಾ..?ಅಂದ್ಹಾಗೆ ಅಂದಿನ ಆ ಸ್ಥೂಲಕಾಯದ ದೈತ್ಯ ಬಾಲಕನೇ ಇವತ್ತಿನ ಚಿನ್ನದ ಸಾಧಕ, ನೀರಜ್ ಚೋಪ್ರಾ.
ಯೆಸ್…23 ವರ್ಷದ ನೀರಜ್ ಚೋಪ್ರಾ..ನಮ್ಮೆಲ್ಲರ ಹೆಮ್ಮೆ..120 ಕೋಟಿ ಭಾರತೀಯರು ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾನೆ.ಈ ಸಂದರ್ಭದ ಸಂಭ್ರಮವನ್ನು ಪದಗಳಲ್ಲಿ ಕಟ್ಟಿಡಲು ಸಾಧ್ಯವೇ ಇಲ್ಲ ಬಿಡಿ..ಅದೊಂದು ಅವಿಸ್ಮರಣೀಯ ಸನ್ನಿವೇಶ. ಭಾರತೀಯರು ಸಂಭ್ರಮಿಸೊಕ್ಕೆ ಕಾರಣವಾದ ಸನ್ನಿವೇಶ..ಪ್ರತಿಯೋರ್ವ ಭಾರತೀಯ ಅಂತದ್ದೊಂದು ಸಂದರ್ಭಕ್ಕೆ ಚಾತಕ ಪಕ್ಷಿಯಂತಾಗಿದ್ದ.ಕೊನೆಗೂ ಆ ಕಾತರ-ಕನಸು-ತಪಸ್ಸು ಎಲ್ಲಾ ಫಲಿಸಿದೆ.ಚಿನ್ನದ ಪದಕವನ್ನು ಗಳಿಸುವ ಮೂಲಕ ಭಾರತೀಯನ ನೈಜ ಸಂಭ್ರಮಕ್ಕೆ ಕಾರಣವಾಗಿದ್ದಾರೆ ಜಾವೆಲಿನ್ ಹೀರೋ ನೀರಜ್ ಚೋಪ್ರಾ.
ಯಾರೂ ಊಹಿಸದೇ ಇದ್ದ ಸನ್ನಿವೇಶದಲ್ಲಿ ಚಿನ್ನದ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ನೀರಜ್ ಚೋಪ್ರಾ.ಒಲಂಪಿಕ್ ಕೊನೆಗೊ ಳ್ಳೊಕ್ಕೆ ದಿನಗಣನೆ ಶುರುವಾಗಿದ್ದಾಗ್ಲೇ ಚಿನ್ನದ ಬರವನ್ನು ನೀಗಿಸುವ ಮೂಲಕ ಭಾರತೀಯರ ಚಿಂತೆ ದೂರ ಮಾಡಿದ್ದಾರೆ. ಅರ್ಹತಾ ಸುತ್ತಿನಲ್ಲೇ 86.59 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ನೇರವಾಗಿ ಫೈನಲ್ ಗೆ ಅರ್ಹತೆ ಪಡೆದಿದ್ದ ನೀರಜ್ 120 ಕೋಟಿ ಭಾರತೀಯರ ಪದಕದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.ತನ್ನ ಮುಂದಿದ್ದ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.
100 ವರ್ಷಗಳ ಬಳಿಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಹೊಸ ಇತಿಹಾಸವನ್ನು ನೀರಜ್ ಸೃಷ್ಟಿಸಿದ್ದಾರೆ.ಈ ಋತುವಿನಲ್ಲಿದ್ದ 5 ಅಗ್ರ ಅಥ್ಲೀಟ್ ಗಳ ಪೈಕಿ ಫೈನಲ್ ಪ್ರವೇಶಿಸಿದ ಇಬ್ಬರು ಅದೃಷ್ಟಶಾಲಿ ಅಥ್ಲೀಟ್ ಗಳಲ್ಲಿ ನೀರಜ್ ಮೊದಲಿಗರಾಗಿದ್ದರು.1900ರ ಒಲಂಪಿಕ್ಸ್ ನಲ್ಲಿ ನಾರ್ಮನ್ ಫ್ರಿಡ್ ಚಾರ್ಡ್ 200 ಮೀಟರ್ ಓಟ ಹಾಗು ಹರ್ಡಲ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದೇ ಕೊನೆ,ಆಮೇಲೆ ಭಾರತದ ಪಾಲಿಗೆ ಚಿನ್ನದ ಕನಸು ಕನಸಾಗೇ ಉಳಿದಿತ್ತು.ಏಕೆಂದ್ರೆ ನಾರ್ಮನ್ ಪ್ರತಿನಿಧಿಸಿದ್ದು ಗ್ರೇಟ್ ಬ್ರಿಟನ್ ಆಗಿದ್ದರಿಂದ ಆ ಗೆಲುವು ನಮ್ಮದೇನಿಸಿಯೇ ಇರಲಿಲ್ಲ..ಆ ಕೊರತೆಯನ್ನು ನೀರಜ್ ಚೋಪ್ರಾ ನೀಗಿಸಿದ್ದಾರೆ.ಈ ಮೂಲಕ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ ನೀರಜ್ ಚೋಪ್ರಾ.
ನೀರಜ್ ಮೊದಲ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀಟರ್, 87.58 ಮೀಟರ್, ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ನಾಲ್ಕನೇ ಹಾಗೂ ಐದನೇ ಯತ್ನ ‘ಫೌಲ್’ ಆದರೂ ನೀರಜ್ ಗರಿಷ್ಠ ಸಾಧನೆಯನ್ನು ಪದಕ ಸುತ್ತಿನಲ್ಲಿದ್ದ ಯಾವ ಸ್ಪರ್ಧಿಯಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ.
ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನಕ್ಕೆ ಮುತ್ತಿಟ್ಟು ಹೊಸ ಸಾಧನೆ ಮೆರೆದರು. ಅಂದ್ಹಾಗೆ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳು ಗೆದ್ದಂತಾಯಿತು. ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಭಾರತ ಮಹತ್ವದ ಕ್ರೀಡಾಕೂಟದಲ್ಲಿ ಶ್ರೇಷ್ಠ ಸಾಧನೆ ಮಾಡಿತು. 2012 ಲಂಡನ್ ಒಲಿಂಪಿಕ್ಸ್ನಲ್ಲಿ ಒಟ್ಟು 6 ಪದಕಗಳನ್ನು ಗೆದ್ದಿದ್ದ ಭಾರತ, ಇದೀಗ ಒಂದು ಹೆಚ್ಚಿನ ಪದಕವನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
ಇಡೀ ದೇಶದ ಬಹುತೇಕ ರಾಜ್ಯಗಳು ಕ್ರಿಕೆಟ್ ಕೆಲ ರಾಜ್ಯಗಳು ಫುಟ್ಬಾಲ್ ಗೆ ತನ್ನ ಪ್ರತಿಭೆಗಳಿಗೆ ತಾಲೀಮು ಕೊಡುವಲ್ಲಿ ನಿರತವಾಗಿದ್ದರೆ ಅವೆರೆಡೇ ರಾಜ್ಯಗಳು ನೋಡಿ, ನಮ್ಮ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಹಾಗೂ ಇತರೆ ತ್ರಾಸದಾಯಕ ಕ್ರೀಡೆಗಳಲ್ಲಿ ಆಟಗಾರರನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಸದಾ ಮುಂದಿರುತ್ತವೆ.,ಮೊದಲನೇಯದು ಪಂಜಾಬ್ ಹಾಗೂ ಎರಡನೇಯದು ಅದರ ಪಕ್ಕದ ಹರ್ಯಾಣ.ಇವತ್ತು ಇಡೀ ದೇಶ ಹೆಮ್ಮೆ ಪಡುವಂಥ ಸಾಧನೆ ಮಾಡೊಕ್ಕೆ ಕಾರಣವಾದ ನೀರಜ್ ಚೋಪ್ರಾ ಕೂಡ ಹರ್ಯಾಣದ ಪಾಣಿಪಟ್ ಊರಿನ ಪ್ರತಿಭೆ.ಮನಸು ಮಾಡಿದ್ರೆ,ಶ್ರಮವನ್ನು ತಪಸ್ಸೆಂದುಕೊಂಡು ಮುಂದುವರುದ್ರೆ ಭಾರತದ ಕ್ರೀಡಾಕ್ಷೇತ್ರಕ್ಕೆ ಸದಾ ಸವಾಲಾಗಿರುವ ಅಥ್ಲೆಟಿಕ್ಸ್ ನಲ್ಲೂ ಪದಕ ಗಳಿಸಬಹುದೆನ್ನುವುದನ್ನು ನೀರಜ್ ಚೋಪ್ರಾ ನನಸು ಮಾಡಿದ್ದಾರೆ.

ನೀರಜ್ ಚೋಪ್ರಾ ಅವರದು ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮ,. ಜಾವೆಲಿನ್ ಅನ್ನೇ ನೋಡಿರದ ಹುಡುಗ ಇಂದು ಇಡೀ ದೇಶದ ಭಾರತೀಯ ಪ್ರತಿಭೆಗಳು ಜಾವೆಲಿನ್ ಕಡೆಗೆ ಆಕರ್ಷಿತರಾಗುವಂತೆ ಮಾಡಿದ್ದಾರೆಂದ್ರೆ ಅದೇನು ಕಡಿಮೆ ಸಾಧನೇನಾ..ಹಾಗೆ ನೋಡಿದ್ರೆ,2020ರ ಟೋಕಿಯೋ ಒಲಂಪಿಕ್ನಲ್ಲಿ ಭಾರತವನ್ನು ಎಲ್ಲರಂತೆ ನೀರಜ್ ಕೂಡ ಪ್ರತನಿಧಿಸಿದ್ದರು.ಆದ್ರೆ ಅನೇಕರ ಮೇಲೆ ಪದಕದ ಭರವಸೆ ಇತ್ತಾದ್ರೂ ಆ ಲೀಸ್ಟ್ ನಲ್ಲಿ ನೀರಜ್ ಇರಲೇ ಇಲ್ಲ.ಆದರೆ ಆ ನಿರೀಕ್ಷೆಯನ್ನು ಕೆಲವರು ಹುಸಿಗೊಳಿಸಿದ್ರೂ ನೀರಜ್ ಮಾತ್ರ ನನಸು ಮಾಡಿ, 1.3 ಬಿಲಿಯನ್ ಜನರ ಕನಸುಗಳನ್ನು ಈಡೇರಿಸಿದ್ದಾರೆ.
ನೀರಜ್ ಚೋಪ್ರಾ,ಭಾರತದ ಏಕೈಕ ವಿಶ್ವದಾಖಲೆ ಹೊಂದಿರುವ ಜಾವೆಲಿನ್ ಎಸೆತದ ಕ್ರೀಡಾಪಟು ಎನ್ನುವ ಹೆಗ್ಗಳಿಕೆ ಕೂಡ ಪಡೆದಿದ್ದಾರೆ.ಈ ಸಾಧನೆ ಮೂಲಕ 2016ರಲ್ಲಿ ಏಕಾಏಕಿ ಪ್ರಸಿದ್ದಿಗೆ ಬಂದ್ರು.ಆ ವರ್ಷ ಅಂದ್ರೆ .2016ರಲ್ಲಿ ಪೋಲ್ಯಾಂಡ್ನಲ್ಲಿ ನಡೆದ ಐಎಎಎಫ್ ವಿಶ್ವ ಯು20 ಚಾಂಪಿಯನ್ಶಿಪ್ನಲ್ಲಿ 18 ವರ್ಷದ ನೀರಜ್ 86.48 ಮೀ ಈಟಿಯನ್ನು ಎಸೆದು ಹೊಸ ಜೂನಿಯರ್ ವಿಶ್ವ ದಾಖಲೆ ಮೂಲಕ ಚಿನ್ನದ ಪದಕ ಪಡೆದರು. ಕಿರಿಯ ವಯಸ್ಸಿನ ಆ ಯುವಕನ ಸಾಧನೆ ಅಂದೇ ಹಿರಿಯರ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿರಿಸಿತ್ತು.
ಅಷ್ಟೇ ಅಲ್ಲ,ಇಂಡೋನೇಷ್ಯಾದ ಜಕಾರ್ತದಲ್ಲಿ 2018ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು, 88.06ಮೀ ಭಾರತೀಯ ಹೊಸ ದಾಖಲೆ ಸೃಷ್ಟಿಸಿದ್ದರು. 2021ರಲ್ಲಿ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ನಲ್ಲಿ 88.07ಮೀ ಎಸೆತದ ಮೂಲಕ ತಾವೇ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದರು. ಗೋಲ್ಡ್ ಕೋಸ್ಟ್ 2018 ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2016ರ ಐಎಎಎಫ್ ವಿಶ್ವ ಯು20ನಲ್ಲಿ 86.48ಮೀ ಎಸೆತದ ಮೂಲಕ ವಿಶ್ವ ಜೂನಿಯರ್ ದಾಖಲೆ ನಿರ್ಮಿಸಿದ ಕೀರ್ತಿ ಕೂಡ ನೀರಜ್ ಚೋಪ್ರಾ ಅವರದು.
ನೀರಜ್ ಚೋಪ್ರಾ ಬಾಲ್ಯದಲ್ಲಿ ತುಂಟ ಹುಡುಗ.ಸ್ನೇಹಿತರೊಂದಿಗೆ ಸೇರಿ ಜೇನುಗೂಡು ಕೀಳುವುದು, ಮಾವಿನ ಹಣ್ಣು ಕದಿಯುವುದು ಮತ್ತು ಸ್ನೇಹಿತರೊಂದಿಗೆ ಜಗಳವಾಡುವುದು ನಿತ್ಯದ ಅಭ್ಯಾಸವಾಗಿತ್ತು ಬಾಲ್ಯದಲ್ಲಿ ತಿಂಡಿಪೋತನಾಗಿದ್ದರಿಂದ. 12ನೇ ವಯಸ್ಸಿಗೆ 90ಕೆಜಿ ತೂಗುತ್ತಿದ್ದರು.ಅವರ ಮನೆಯವರಿಗೇ ಇದು ಅತ್ಯಂತ ತಲೆಬೇನೆ ಹಾಗೂ ಚಿಂತೆಯ ವಿಷಯವಾಗೋಗಿತ್ತು.ಆದರೆ ಸಾಧನೆ ಮನಸು ಇದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ತಮ್ಮ ಸಾಧನೆ ಮೂಲಕ ಸಾದಿಸಿ ತೋರಿಸಿದ್ದಾರೆ.ಕ್ರೀಡೆಯ ಜತೆಗೆ ದೇಶಸೇವೆಯ ಆಸೆ ನೀರಜ್ ಚೋಪ್ರಾ ಅವರಲ್ಲಿತ್ತು.ಸೇವೆಯ ಜತೆ ಜತೆಗೆ ಕ್ರೀಡೆಯ ಆಸಕ್ತಿಯನ್ನು ಮೈಗೂಡಿಸಿಕೊಂಡು ಎರಡಕ್ಕೂ ನ್ಯಾಯ ಒದಗಿಸಿದ್ದರು. ಭಾರತೀಯ ಸೇನೆಯಲ್ಲಿ ಕಿರಿಯ ನಿಯೋಜಿತ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಚೋಪ್ರಾ ಯುವೆ ಹೋನ್ ಅವರ ಮೂಲಕ ತರಬೇತಿ ಪಡೆಯುತ್ತಿದ್ದಾರೆ.
ನೀರಜ್ ಚೋಪ್ರಾ ಚಿನ್ನದ ಸಾಧನೆ ಮಾಡುತ್ತಿದ್ದಂಗೆ ಪ್ರಶಂಸೆ-ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.ಹರ್ಯಾಣ ಸರ್ಕಾರ 6 ಕೋಟಿ ನಗದು ಬಹುಮಾನ ಘೋಷಿಸಿದ್ದರೆ,ಕೇಂದ್ರ ಸರ್ಕಾರ 75 ಲಕ್ಷ ಬಹುಮಾನ ನೀಡುವುದಾಗಿ ಹೇಳಿದೆ.ಈ ಸಾಧನೆಗೆ ಕೋಟಿ ಕೋಟಿ ಹಣ ಹರಿದು ಬರುವ ಸಾಧ್ಯತೆಗಳಿದ್ದು ಅನೇಕ ಜಾಹಿರಾತು ಪ್ರಾಡಕ್ಟ್ ಗಳು ಈಗಾಗ್ಲೇ ತಮ್ಮ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗುವಂತೆ ಅವರಿಗೆ ಆಫರ್ ನೀಡಲು ಶುರುಮಾಡಿವೆಯಂತೆ.ಅದೇನೇ ಆಗಲಿ ತನ್ನ 23 ಹರೆಯದಲ್ಲಿ ದೇಶವೇ ಹೆಮ್ಮೆ ಪಡುವಂಥ ಸಾಧನೆ ಮಾಡಿರುವ ನೀರಜ್ ಚೋಪ್ರಾ ಒಲಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.