PROTEST AGAINST NATIONAL EDUCATION POLICY:ಹಿಂಸೆಗೆ ತಿರುಗಿದ ಪ್ರೊಟೆಸ್ಟ್-ಮಾತಿನ ಚಕಮಕಿ-ಲಾಠಿ ಚಾರ್ಜ್-ವಿಧಾನಸೌಧ ಮುತ್ತಿಗೆ ಯತ್ನ-ಅರೆಸ್ಟ್..

ರಾಷ್ಟ್ರೀಯ ಶಿಕ್ಷಣ ನೀತಿಗೆ ಬೆಂಗಳೂರಲ್ಲಿ CFI ಪ್ರತಿಭಟನೆ-ವಿಧ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್.!!

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಶಿಕ್ಷಣ ನೀತಿ ಜಾರಿ ಗೆ ವಿರೋಧಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದರು.ಒಂದು ಹಂತದಲ್ಲಿ ಪ್ರತಿಭಟನೆ  ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ವಿಧಾನಸೌಧ ಚಲೋ ಮೂಲಕ ನಡೆದ ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ ಕಾರಣ ಕೆಲ ಕಾಲ ಉದ್ವಿಗ್ನವಾತಾವರಣಕ್ಕೆ ತಿರುಗಿತ್ತು.

ಒಂದು ಕಡೆಯಿಂದ ಸರ್ಕಾರದ ವಿರುದ್ಧ ದಿಕ್ಕಾರ.. ಮತ್ತೊಂದು ಕಡೆಯಿಂದ ನೂಕುನುಗ್ಗಲು.. ಮಗದೊಂದು ಕಡೆಯಿಂದ ನೂರು ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ಲಾಟಿ ಏಟು. ಇದರಿಂದಾಗಿ ಎದ್ನೋ ಬಿದ್ನೋ ಅಂತ ಸ್ಥಳದಿಂದ ಕಾಲ್ಕಿಳ್ಳುತ್ತಿರುವ ವಿದ್ಯಾರ್ಥಿಗಳು.. ನಿಜ.. ಇಷ್ಟೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್.

ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ದ ಇವತ್ತು ನೂರಾರು ಸ್ಟೂಡೆಂಟ್ಸ್ ತಿರುಗಿಬಿದ್ದಿದ್ರು. ಸರ್ಕಾರದ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು, ಎಲ್ಲಾ ಕಾಲೇಜು ಗಳನ್ನು ಅಟೊನಮಸ್ ಮಾಡಿ ಖಾಸಗಿಕರಣ ಮಾಡುವುದು ಸರಿಯಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಆನ್ ಲೈನ್ ತರಗತಿಗೆ ಹೆಚ್ಚಿನ ಆದ್ಯತೆ ಇದೆ. ಅಂಗನವಾಡಿ ಶಿಕ್ಷಣಕ್ಕೆ ಪೂರ್ತಿ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ  ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ನಿರ್ಧಾರವನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆಗೆ ಮುಂದಾಗಿದ್ರು.

ಮೈಸೂರು, ಮಂಗಳೂರು, ಗುಲ್ಬರ್ಗಾ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಸೆಂಟ್ ಮರ್ಥಾಸ್ ಆಸ್ಪತ್ರೆ ಬಳಿಯಿಂದ ವಿದ್ಯಾರ್ಥಿಗಳ ಜಾಥಾ ಆರಂಭವಾಗಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಇದರಿಂದ ಮೈಸೂರು ಬ್ಯಾಂಕ್ ಸುತ್ತಲಿನ ಪ್ರಮುಖ ರಸ್ತೆಗಳೂ ಟ್ರಾಫಿಕ್ ಜಾಮ್‌ ಗೆ ಸಿಲುಕಿದ್ದವು. ವಿಧಾನಸೌಧ ಚಲೋಗೆ ಮುಂದಾದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಾಗ, ನಿಯಂತ್ರಣಕ್ಕೆ ಬಾರದ ಹಿನ್ನಲೆ ಪೊಲೀಸ್ ಹಿರಿಯ ಅಧಿಕಾರಿಗಳು ಲಾಟಿ ಚಾರ್ಜ್ ಗೆ ಆದೇಶ ನೀಡಿದರು. ಈ ವೇಳೆ ಹೆಚ್ಚು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಯಿತು. 200ಕ್ಕೂ ಹೆಚ್ಚು  ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಯ್ತು.

 ಬಳಿಕ  ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಮಾತನಾಡಿ, ವಿದ್ಯಾರ್ಥಿಗಳು ಶಾಂತಿಯುವಾಗಿಯೇ ಪ್ರತಿಭಟನೆ ನಡೆಸಿದ್ರೂ, ನಮ್ಮ ಮೇಲೆ ಲಾಠಿಚಾರ್ಜ್ ಆಗಿದೆ. ಸಾಕಷ್ಟು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ನಮ್ಮ ಮನವಿಯನ್ನೂ ಸ್ವೀಕರಿಸಿಲ್ಲ. ಈ ಹಿಂದೆ ಸಚಿವ ಅಶ್ವಥ್ ನಾರಾಯಣ್ ನೀತಿ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ ಎಂದು ಹೇಳಿದ್ರೂ ಚರ್ಚೆಗೆ ಕರೆಯಲು ಸಿದ್ಧರಿಲ್ಲ ಎಂದ್ರು.   ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರಹೊಂದಿದೆ. 2016 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಬ್ರಮಣ್ಯಂ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ಆಪಾದಿಸಿರು.

 ತದನಂತರ ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ಸಮಸ್ಯೆಗಳ ಕುರಿತು 2019 ರಲ್ಲಿಯೇ ಕ್ಯಾಂಪಸ್ ಫ್ರಂಟ್ ವಿರೋಧ ವ್ಯಕ್ತಪಡಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯಕ್ಕೆ ಶಿಫಾರಸ್ಸು ವರದಿ ನೀಡಿತ್ತು. ಆದರೆ ನಮ್ಮ ಹಾಗೂ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ, ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಒತ್ತಾಯ. ಒಟ್ನಲ್ಲಿ ಹೋರಾಟಕ್ಕೆ ಇಳಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದು ಎಷ್ಟು ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

PROTEST AGAINST NATIONAL EDUCATION POLICY:ಹಿಂಸೆಗೆ ತಿರುಗಿದ ಪ್ರೊಟೆಸ್ಟ್-ಮಾತಿನ ಚಕಮಕಿ-ಲಾಠಿ ಚಾರ್ಜ್-ವಿಧಾನಸೌಧ ಮುತ್ತಿಗೆ ಯತ್ನ-ಅರೆಸ್ಟ್..

Spread the love
Leave A Reply

Your email address will not be published.

Flash News