IS SRIRAMLU A “LIAR”…?! “ಸಾರಿಗೆ” ಕಾರ್ಮಿಕರಿಗೆ ಕೊಟ್ಟ ಮಾತು-ನೀಡಿದ ಭರವಸೆಯನ್ನೇ ಮರೆತ್ರಾ ಸಚಿವ ಶ್ರೀರಾಮುಲು : ತಾವು ಕೊಟ್ಟ ಮಾತಿಗೆ ತಾವೇ “ಎಳ್ಳು ನೀರು ಬಿಟ್ರಾ”!!

ಬೀದಿಗೆ ಬಿದ್ದಿವೆ 6 ಸಾವಿರ ಕಾರ್ಮಿಕರ ಕುಟುಂಬ-ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ…ಬಾಡಿಗೆ-ದಿನಸಿ ಖರ್ಚನ್ನು ಹೊಂದಿಸಲಿಕ್ಕೂ ಅಸಾಧ್ಯ ಸ್ಥಿತಿ…

0

ಅಕ್ಟೋಬರ್-1….

ಬೆಂಗಳೂರು.. ಯಾರೇ ಸಚಿವರಾದ್ರೂ ಅವರ ಹಣೇಬರಹವೇ ಇಷ್ಟೆನಿಸುತ್ತದೆ.ಅದಕ್ಕೆ ಹಾಲಿ ಸಚಿವ ಶ್ರೀರಾಮುಲು ಅವರೇನು ಹೊರತಲ್ಲ.

ಅಂದು, ಮುಷ್ಕರದಲ್ಲಿ ಭಾಗಿಯಾದ ತಪ್ಪಿಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಕೆಂಗಣ್ಣಿಗೆ ಗುರಿಯಾಗಿ  ಅಮಾನತು ಹಾಗೂ ವಜಾಗೊಂಡಿದ್ದ ಸಾವಿರಾರು ಕಾರ್ಮಿಕರಿಗೆ ಮರು ಹುಟ್ಟು ನೀಡುವ ನಿಟ್ಟಿನಲ್ಲಿ    ಸಾರಿಗೆ ಸಚಿವ ಶ್ರೀರಾಮುಲು ಮಾತನ್ನಾಡಿದ್ದರು.ಆ ವೇಳೆ ಆರು ಸಾವಿರ ಕಾರ್ಮಿಕರ ಬೆನ್ನಿಗೆ ನಾವಿದ್ದೇವೆ..ಅವರು ಕೆಲಸ ಕಳೆದುಕೊಳ್ಳುವಂತೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದರಲ್ಲದೇ ಸ್ಥಳದಲ್ಲೇ ಇದ್ದ ನಾಲ್ಕು ನಿಗಮಗಳ ಅಧಿಕಾರಿಗಳಿಗೆ ಶೀಘ್ರವೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದರು.

ಆಶಾವಾದವನ್ನೇ ಕಳಕೊಂಡಿದ್ದ ಆರು ಸಾವಿರ ಕಾರ್ಮಿಕರಿಗೆ ಆಕ್ಸಿಜನ್ ನೀಡಿದಂತ ಆ ಹೇಳಿಕೆ ಹೇಳಿಕೆಯಾಗೇ ಉಳಿದೋಗಿದೆ.ಕಾರ್ಮಿಕರನ್ನು ಕೆಲಸಕ್ಕೆ ಮರುನಿಯೋಜಿಸಿಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳು-ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ನಡುವೆ ಯಾವುದೇ ವ್ಯವಹಾರಗಳೇ ನಡೆದಿಲ್ಲ.

ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗಳು ಈ ವಿಷಯದಲ್ಲಿ ಮುಕ್ತವಾಗಿದ್ರೂ ನಾಲ್ಕು ನಿಗಮಗಳ ಅಧಿಕಾರಿಗಳು ಮಾತ್ರ ಆರ್ಥಿಕ ಹೊರೆಯ ನೆವವನ್ನು ಮುಂದಿಟ್ಟುಕೊಂಡು ಕಾರ್ಮಿಕರು ಎಂಟ್ರಿಯಾಗೊಕ್ಕೆ ಅವಕಾಶವನ್ನೇ ಮಾಡಿಕೊಡುತ್ತಿಲ್ಲ..ದುರಂತ ಎಂದ್ರೆ ಈ ಪೈಕಿ ಅಧಿಕಾರಿಗಳಾಗಿರುವವರಲ್ಲಿ ಶೇಕಡಾ 30 ರಷ್ಟು ಮಂದಿ ಕೆಳ ಹಂತದ ಕಾರ್ಮಿಕರಾಗಿ ದುಡಿದು ಭಡ್ತಿ ಹೊಂದಿದವರು.ಕಾರ್ಮಿಕರ ಸಂಕಷ್ಟಗಳನ್ನು ಅನುಭವಿಸಿದ ಇವರೇ ಅಧಿಕಾರಿಗಳಾಗುತ್ತಿದ್ದಂತೆ ಇತರೆ ಕಾರ್ಮಿಕರ ಬವಣೆ-ಸಂಕಷ್ಟಕ್ಕೆ ಕಿವಿ-ಕಣ್ಣುಗಳನ್ನು ಕಲ್ಲಾಗಿಸಿಕೊಂಡಿರುವುದು ಮಾತ್ರ ವಿಪರ್ಯಾಸ.

ಸಾರಿಗೆ ಸಚಿವ ಶ್ರೀರಾಮಲು ಅಕ್ಟೋಬರ್ 1 ರಂದು ಕಾರ್ಮಿಕರ ಮೇಲಿನ ಕೇಸ್ ಗಳನ್ನು ಹಿಂಪಡೆಯುವ ವಿಚಾರವಾಗಿ ಮಾತನಾಡುವಾಗ ಇನ್ಮುಂದೆ ಕಾರ್ಮಿಕರು ಅನಗತ್ಯವಾಗಿ ಬೀದಿಗೆ ಇಳಿಯಬಾರದು.ಅಧಿಕಾರಿಗಳ ವಿರುದ್ಧ ಸಂಘರ್ಷಕ್ಕಿಳಿಯಬಾರದು.ಶಿಸ್ತು ಮರೆಯಬಾರದು ಎಂದೆಲ್ಲಾ ಹೇಳಿದಾಗ ಅದರ ಬಗ್ಗೆ ಬೇಕಾದ್ರೆ ಮುಚ್ಛಳಿಕೆ ಬರೆದುಕೊಡಲು ಸಿದ್ಧವಿರುವುದಾಗಿ ಕೂಡ ಹೇಳಿದ್ದರು.

ಕೆಲಸ ಎನ್ನೋದು ಅಷ್ಟೊಂದು ಅನಿವಾರ್ಯ ಎನ್ನೋದನ್ನು ಸಚಿವ ಶ್ರೀರಾಮಲು ಅರಿತ ಹೊರತಾಗ್ಯೂ ತಾವು ಕೊಟ್ಟ ಆದೇಶ-ನೀಡಿದ ಭರವಸೆ ಯಾವ ಪ್ರಮಾಣದಲ್ಲಿ ಈಡೇರಿದೆ ಎನ್ನುವುದನ್ನು ಕನಿಷ್ಠಕ್ಕಾದ್ರೂ ಪರಿಶೀಲಿಸುವ ಕೆಲಸ ಮಾಡಬೇಕಿತ್ತು.

ಆದರೆ ಆ ಕೆಲಸವನ್ನೇ ಮಾಡಿಲ್ಲ.. ಸಚಿವರು ಹೇಳಿಯೇ ಅಧಿಕಾರಿಗಳು ಇಷ್ಟೊಂದು ಉಡಾಫೆ-ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರಬೇಕಾದ್ರೆ ಇನ್ನು ಹೇಳದೆ ಸುಮ್ಮನಿದ್ದರೆ ಇನ್ನೆಷ್ಟು ದಕ್ಷತೆಯಿಂದ ಕೆಲಸ ಮಾಡುತ್ತಾರೆನ್ನುವುದನ್ನು ಅಂದಾಜಿಸಬಹುದು.ಸಚಿವರು ಹೇಳಿದ ದಿನ..ಅವರು ಸಭೆ ಕರೆದಾಗ..ಮಾದ್ಯಮಗಳು ಪ್ರಶ್ನಿಸಿದಾಗ ಅದಕ್ಕೆ ಸ್ಪಷ್ಟನೆ ನೀಡುವ ವೇಳೆಗಷ್ಟೇ  ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆನ್ನುವ ರೇಂಜ್ ನಲ್ಲಿ ಫೋಸ್ ಕೊಡುವುದಕ್ಕಷ್ಟೇ   ಲಾಯಕ್ ಎನ್ನುವಂತ ಸನ್ನಿವೇಶ ಸೃಷ್ಟಿಸಿದ್ದಾರೆ ಕೆಲವು ಹೊಣೆಗೇಡಿ ಸಾರಿಗೆ ಅಧಿಕಾರಿಗಳು.

ಸಚಿವ ಶ್ರೀರಾಮಲು ಅವರಿಗೆ ಮುಷ್ಕರದ ನಂತರ  ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸುಮಾರು ಆರು ಸಾವಿರ ನೌಕರರ ಜೀವನಗಳು ಬೀದಿಗೆ ಬಿದ್ದಿವೆ.ಅದರಲ್ಲಿ ನಾಲ್ಕು ಸಾವಿರದಷ್ಟು ಕಾರ್ಮಿಕರು ಬಿಎಂಟಿಸಿ ಅವರೇ ಆಗಿದ್ದಾರೆನ್ನುವುದು ಕೂಡ ಚೆನ್ನಾಗಿ ಗೊತ್ತು.ದಿನಂಪ್ರತಿ ವರದಿಯಾಗುತ್ತಿರುವ ವಿಷಾದನೀಯ ವರ್ತಮಾನಗಳ ಬಗ್ಗೆಯೂ ಮಾಹಿತಿ ಇದೆ.ಆದಾಗ್ಯೂ ಏಕೆ ಶ್ರೀರಾಮುಲು ಕಾರ್ಮಿಕರ ವಿಚಾರದಲ್ಲಿ ಮುಗುಮ್ಮಾಗಿದ್ದಾರೋ ಗೊತ್ತಾಗುತ್ತಿಲ್ಲ.

ಅಂದ್ಹಾಗೆ ವಜಾಗೊಂಡು-ಅಮಾನತಾಗಿ ಸೇವೆಯಿಂದ ಹೊರಗಿರುವ ಕಾರ್ಮಿಕರನ್ನು ಒಳಗೆ ತೆಗೆದುಕೊಳ್ಳೊದು ಕಷ್ಟವೇನಲ್ಲ.ಅದು ಸರ್ಕಾರ ಹಾಗು ಕಾರ್ಮಿಕ ಇಲಾಖೆ ಮನಸು ಮಾಡುವ ವಿಚಾರದ ಮೇಲೆ ನಿರ್ದಾರವಾಗುತ್ತದೆ.ಏಕೆಂದರೆ 1998ರ ಮಾದರಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಈ ಪ್ರಕರಣಗಳನ್ನು ಸಾರಿಗೆ ನಿಗಮಗಳ ಆಡಳಿತ ಮಂಡಳಿಯ ಸಭೆ ಎದುರು ಇರಿಸಿ ಬಗೆಹರಿಸಲು ಅವಕಾಶವಿದೆ.

ಕಾರ್ಮಿಕ ನ್ಯಾಯಾಲಯಕ್ಕೆ ಪ್ರಕರಣ ತಂದು ರಾಜಿಯಾಗಿ ಪುನರ್‌ ನೇಮಕ ಮಾಡಿಕೊಳ್ಳುವ ಮತ್ತೊಂದು ಅವಕಾಶವೂ ಸರ್ಕಾರಕ್ಕಿದೆ.ಆದಾಗ್ಯೂ ಏಕೆ ನೊಂದ ಸಾರಿಗೆ ಕಾರ್ಮಿಕರ ವಿಚಾರದಲ್ಲಿ ಸಚಿವ ಶ್ರೀರಾಮಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲವೋ..ಅದಕ್ಕಾಗಿ ಸಾರಿಗೆ ನಿಗಮಗಳ ಆಡಳಿತ ಯಂತ್ರವನ್ನು ಚುರುಕುಗೊಳಿಸುತ್ತಿಲ್ಲವೋ ಗೊತ್ತಾಗುತ್ತಿಲ್ಲ.

ಸಾರಿಗೆ ಸಚಿವ ಶ್ರೀರಾಮುಲು ಅವರ ಬಗ್ಗೆ ಸಾರಿಗೆ ಕಾರ್ಮಿಕರ ಭರವಸೆ ಇನ್ನೂ ಕಡಿಮೆಯಾಗಿಲ್ಲ..ಇವತ್ತಲ್ಲ ನಾಳೆಯಾದ್ರೂ ಅವರಿಂದಾಗಿ ನಾವು ಸೇವೆಗೆ ವಾಪಸ್ಸಾಗಬಹುದೆನ್ನುವ ನಿರೀಕ್ಷೆಯಲ್ಲೇ ಇನ್ನೂ ಇದ್ದಾರೆ.ಆದ್ರೆ ಶ್ರೀರಾಮುಲು ಅವರಿಗೇ ಈ ಬಗ್ಗೆ ಮನಸಿದ್ದಂತಿಲ್ಲ..ಅಂಥಾ ಕಾಳಜಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಈ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಾವೇ ಮಾಹಿತಿ ಪಡೆದು ತಡವಾಗುತ್ತಿದ್ದರೆ ಅದನ್ನು ಶೀಘ್ರವೇ ವಿಲೇವಾರಿ ಮಾಡುವಂತ ಕೆಲಸ ಮಾಡುತ್ತಿದ್ದರು.ಆದ್ರೆ ಯಾಕೆ ಹೀಗೆ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ.

ಸಾರಿಗೆ ಕಾರ್ಮಿಕರ ಜೀವನಗಳು ಶಿಕ್ಷೆಗೊಳಪಟ್ಟು ಕೆಲಸ ಕಳೆದುಕೊಂಡ ಮೇಲೆ ಸಾಕಷ್ಟು ದುಸ್ತರವಾಗಿದೆ.ಜೀವನ ನಿರ್ವಹಣೆಗೆ ಬೇರೆ ದಾರಿಯೇ ಇಲ್ಲವಾಗುತ್ತಿದೆ.ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ…ಬಾಡಿಗೆ-ದಿನಸಿಗಳ ಖರ್ಚನ್ನು ಹೊಂದಿಸಲಿಕ್ಕೂ ಹೆಣಗಾಡಬೇಕಾದ ಸ್ಥಿತಿಯಿದೆ.ಇದೆಲ್ಲದರ ಮಾಹಿತಿ ಶ್ರೀರಾಮುಲು ಅವರಿಗೆ ಸ್ಪಷ್ಟವಾಗಿದ್ದರೂ ಅವರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ..

ಕಾರ್ಮಿಕರು ಜೀವನವೇ ಬೇಡ ಎನ್ನುವಷ್ಟು ರೋಸಿ ಹೋಗಿದ್ದಾರೆ.ಅದು ಬೇರೆಯದೇ ನಿರ್ದಾರಗಳಿಗೆ ಎಡೆ ಮಾಡಿಕೊಟ್ಟರೆ ಅದಕ್ಕೆ ಶ್ರೀರಾಮುಲು ಕೂಡ ನೈತಿಕ ಹೊಣೆ ಹೊರಬೇಕಾಗುತ್ತದೆಯಷ್ಟೇ..ಪ್ರತಿಯೊಬ್ಬ ಕಾರ್ಮಿಕ ಹಾಗು ಆತನ ಕುಟುಂಬಗಳ ಹಿಡಿಶಾಪ-ನಿಟ್ಟುಸಿರುಗೆ ತುತ್ತಾಗಬೇಕಾಗುತ್ತದೆ..ಇದು ಶ್ರೀರಾಮುಲು ಅವರಿಗೆ ಬೇಕಿದೆಯಾ..ಖಂಡಿತಾ ಇಲ್ಲ..

Spread the love
Leave A Reply

Your email address will not be published.

Flash News