TRANSPORT STRIKE AGAIN ..?! ಮತ್ತೆ ಸಾರಿಗೆ ಮುಷ್ಕರ..?! “ಕಾರ್ಮಿಕ ವಿರೋಧಿ” ಸುತ್ತೋಲೆಗೆ ಸಾರಿಗೆ ಕಾರ್ಮಿಕರು ಕೆಂಡಾಮಂಡಲ.. ಒಗ್ಗಟ್ಟಿನ ಹೋರಾಟಕ್ಕೆ ವೇದಿಕೆ ಸಜ್ಜು..

ಸಾರಿಗೆ ಕಾರ್ಮಿಕರನ್ನು ಬೆಂಕಿಯಿಂದ ಬಾಣಲೆಗೆ ದೂಡಿದ ಸರ್ಕಾರ.ಷರತ್ತುಗಳಿಗೆ ಒಪ್ಪಿದರಷ್ಟೇ ಕೆಲಸ..ಇಲ್ಲದಿದ್ದರೆ ಕೇರ್ ಆಫ್ ಫುಟ್ಪಾತ್ ಅಂತೆ..?!

0

ಬೆಂಗಳೂರು:ಸಾರಿಗೆ ಕಾರ್ಮಿಕರು ಹಾಗೂ ಆಡಳಿತ ಮಂಡಳಿಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಕ್ಕೆ ವೇದಿಕೆ ಸಜ್ಜುಗೊಳಿಸಿಕೊಟ್ಟಿದೆ ಸರ್ಕಾರದ ಈ ಸುತ್ತೋಲೆ.ಕೆಲಸ ಕಳೆದುಕೊಂಡು ಅದರ ನಿರೀಕ್ಷೆಯಲ್ಲಿ ಕಾದ ಕಾವಲಿಯಂತಾಗಿದ್ದ ಸಾರಿಗೆ ಕಾರ್ಮಿಕರು ಕೊತ ಕೊತ ಕುದಿಯುವಂತೆ ಮಾಡಿದೆ ಸರ್ಕಾರದ ಸುತ್ತೋಲೆ.ಇಷ್ಟು ದಿನ ತಾಳ್ಮೆಯಿಂದ ಸುಮ್ಮನಿದ್ದುದು ಈ ಪುರುಷಾರ್ಥಕ್ಕಾ ಎಂದು ಕನಲಿ ಹೋಗಿರುವ ಕಾರ್ಮಿಕರು ಕೆಲಸವನ್ನೇ ಕಳೆದುಕೊಂಡಾಗಿದೆ..ಇನ್ನುಳಿದಿರೋದು ಪ್ರಾಣ,ಅದನ್ನು ಕಳಕೊಂಡ್ರೂ ಪರ್ವಾಗಿಲ್ಲ,,ಹೋರಾಟಕ್ಕೆ ಧುಮುಕುತ್ತೇವೆ ಎಂದು ಪರಸ್ಪರ ಮಾತನಾಡಿಕೊಳ್ಳುವಂತೆ ಮಾಡಿದೆ ಒನ್ಸ್ ಅಗೈನ್ ಸರ್ಕಾರದ ಆ ಸುತ್ತೋಲೆ.

ಹಸಿದವನಿಗೆ ಅನ್ನ ಕೊಡುತ್ತೇವೆಂದು ಹೇಳಿ ಬಾಯಿಗೆ ಅದನ್ನು ಇರಿಸುತ್ತಲೇ ಹಠಾತ್ ಕಸಿದುಕೊಂಡ್ರೆ ಏನಾಗಬಹುದು ಹೇಳಿ.. ಅದೇ ಸ್ಥಿತಿ ಇವತ್ತು ಕಾರ್ಮಿಕರದ್ದಾಗಿದೆ.ಕೆಲಸ ಕಳೆದುಕೊಂಡು ಆಕ್ರೋಶದಿಂದ ಕುದಿಯುತ್ತಿದ್ದ ಕಾರ್ಮಿಕರು ಇದೀಗ ಕಂಡೀಷನ್ ಗಳಿಗೆ ಒಪ್ಪಿದ್ರೆ ಮಾತ್ರ ಕೆಲಸ..ಇಲ್ಲದಿದ್ದರೆ ಕೇರ್ ಆಫ್ ಫುಟ್ಪಾತ್ ಎನ್ನುವಂತಿರುವ ಸುತ್ತೋಲೆಗೆ ಮತ್ತೆ ನಿಗಿನಿಗಿ ಕೆಂಡವಾಗಿದ್ದಾರೆ.ನಮ್ಮ ಹಕ್ಕುಗಳನ್ನು ಕಸಿದುಕೊಂಡು ಶಾಶ್ವತವಾಗಿ ಗುಲಾಮರನ್ನಾಗಿಸಿಕೊಳ್ಳೊಕ್ಕೆ ಸರ್ಕಾರ ಸುತ್ತೋಲೆಯ ನಾಟಕವಾಡಿದೆ ಎನ್ನುವುದು ನೊಂದ ಕಾರ್ಮಿಕರ ಆಕ್ರೋಶ.

ನಾಲ್ಕು ವಾರಗಳೊಳಗೆ ಎಲ್ಲಾ ಕಾರ್ಮಿಕರಿಗು ಕೆಲಸ ಪಕ್ಕಾ..ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸಾರಿಗೆ ಸಚಿವರು ನಾಲ್ಕು ನಿಗಮಗಳ ಎಂಡಿಗಳಿಗೆ ಸೂಚಿಸಿದ್ದಾರೆ ಎನ್ನುವ ಸುದ್ದಿ ಬೆಳಗ್ಗೆಯಿಂದಲೇ ಹಬ್ಬಿ,ಕಾರ್ಮಿಕರು ಸಂತಸದಲ್ಲಿ ತೇಲುವಂತಾಗಿದ್ದು ಎಲ್ಲರಿಗೂ ಗೊತ್ತಿರೋದೆ..ಆದ್ರೆ ಕೆಲಸ ಗಿಟ್ಟಿಸಿಕೊಳ್ಳೊಕ್ಕೆ ಸರ್ಕಾರ ಕಾರ್ಮಿಕರಿಗೆ ಹಾಕಿರುವ ಒಂದಷ್ಟು ಕಂಡಿಷನ್ಸ್ ಬಗ್ಗೆ ಮಾತ್ರ ಯಾರೂ ಬೆಳಕು ಚೆಲ್ಲುವ ಯತ್ನವನ್ನೇ ಮಾಡಿಲ್ಲ.ಕನ್ನಡ ಫ್ಲಾಶ್ ನ್ಯೂಸ್ ಅದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡುತ್ತಿದೆ.

ಬೇಷರತ್ ಕೆಲಸ ನೀಡುವ ಮಾತನ್ನಾಡಿದ್ರೆ ಅಥವಾ ಸಣ್ಣಪುಟ್ಟ ಕಂಡೀಷನ್ಸ್ ಹಾಕಿದಿದ್ರೆ ಒಪ್ಪಿಕೊಂಡು ಸಮ್ಮತಿ ಸೂಚಿಸಬಹುದಿತ್ತು.ಆದ್ರೆ ಸರ್ಕಾರ ಹಾಕಿರುವ ಕಂಡೀಷನ್ಸ್ ಕಾರ್ಮಿಕರ ಪಾಲಿಗೆ ಮರಣಶಾಸನದಂತಿವೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ.ಅಷ್ಟೇ ಅಲ್ಲ ನಮ್ಮನ್ನು ಧ್ವನಿ ಇಲ್ಲದವರಂತಾಗಿಸುವ ಹುನ್ನಾರದಂತಿದೆ.ಇದನ್ನು ಒಪ್ಪಿಕೊಂಡು ಗುಲಾಮಾಗಿರುವುದಕ್ಕಿಂತ ಕೆಲಸವಿಲ್ಲದೆ ಸ್ವಾಭಿಮಾನಿಗಳಾಗಿ ಬದುಕೋದೇ ಉತ್ತಮ ಎನ್ನುವುದು ಶಿವಮೊಗ್ಗ ಮೂಲದ ಸಾರಿಗೆ ಕಾರ್ಮಿಕ ಮಾದೇಶ್ವರಪ್ಪ ಅವರ ಖಡಕ್ ಮಾತು.

ಮುಷ್ಕರ ಮಾಡಿದ ತಪ್ಪಿಗೆ ಅನೇಕ ತಿಂಗಳಿಂದ ಕೆಲಸವಿಲ್ಲದೆ ಕೂತಿದ್ದ ಸಾರಿಗೆ ಕಾರ್ಮಿಕರಿಗೆ ಸರ್ಕಾರದ ಈ ನ್ಯೂಸ್ ಅಷ್ಟೇನು ಖುಷಿ ತಂದಿಲ್ಲದಂತೆ ಕಾಣಿಸುತ್ತದೆ.ಸರ್ಕಾರ ಕೊಟ್ಟಾಗ ಸಂಬಳ ಪಡೆಯಬೇಕು..ವೇತನ ಪರಿಷ್ಕರಿಸಿದಾಗ ಅದನ್ನು ಒಪ್ಪಬೇಕು.ಕಿರುಕುಳದಿಂದ ತುಂಬೋಗಿರುವ ನಿಗಮದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡೋದೇ ನಿಷಿದ್ಧವಾಗಲಿದೆ.ಹಿಟ್ಲರ್ ನ ಕುಟುಂಬದ ಸದಸ್ಯರಂತಿರುವ ಬಹುತೇಕ ಡಿಪೋಗಳಲ್ಲಿನ ಅಧಿಕಾರಿಗಳಿಗೆ ಇದರಿಂದ ಲಂಗು ಲಗಾಮಿಲ್ಲದಂತೆ ಆಗಲಿದೆ..ಈಗ ನಡೆಯುತ್ತಿರುವ ದೌರ್ಜನ್ಯ ತಾರಕಕ್ಕೇರಬಹುದು..ಆಗಲೂ ಅನ್ಯಾಯದ ವಿರುದ್ದ ಧ್ವನಿ ಎತ್ತದಂತಾಗುತ್ತದೆ. ಸುತ್ತೋಲೆ ಒಪ್ಪಿಕೊಂಡು ಷರತ್ತುಗಳಿಗೆ ಸಹಿ ಹಾಕೋದು ಒಂದೇ,ನಮ್ಮ ಸ್ವಂತಿಕೆ-ಸ್ವಾಭಿಮಾನವನ್ನು ಅಡವಿಡುತ್ತೇವೆಂದು ಬರೆದುಕೊಡುವುದು ಒಂದೇ ಎನ್ನುತ್ತಾರೆ ಸಾರಿಗೆ ಕಾರ್ಮಿಕರು.

ಕಂಡೀಷನ್ ಗಳಿಗೆ ಒಪ್ಪಿಕೊಳ್ಳುವುದು ಎಂದರೆ ನಾವೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳೋದು..ನಮ್ಮ ಕುತ್ತಿಗೆಯನ್ನು ಬಲಿಪೀಠಕ್ಕೆ  ನೀಡುವುದು..ಎಲ್ಲಕ್ಕಿಂತ ಹೆಚ್ಚಾಗಿ ಆಡಳಿತ ಮಂಡಳಿ ಕಾರ್ಮಿಕರ ವಿಷಯದಲ್ಲಿ ಎಂತಹುದೇ ನಿರ್ದಾರ,ನಿರ್ಣಯ ಕೈಗೊಂಡರೂ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವುದು ಎಂದರ್ಥ ಎನ್ನುವ ಸಾರಿಗೆ ಮುಖಂಡರು ಸರ್ಕಾರದ ಜತೆ ಮಾತುಕತೆ ನಡೆಸುವವರೆಗೂ ಯಾವುದೇ ಕಂಡೀಷನ್ ಒಪ್ಪಿಕೊಳ್ಳೊಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಸರ್ಕಾರ  ಹೊರಡಿಸಿರುವ ಸುತ್ತೋಲೆಯಿಂದ  ಕಕ್ಕಾಬಿಕ್ಕಿಯಾಗಿರುವ ಕಾರ್ಮಿಕರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಶಪಿಸಿಕೊಳ್ಳಲಾರಂಭಿಸಿದ್ದಾರೆ.ಆದರೆ ಈ ಕಂಡೀಷನ್ ಗಳನ್ನು ಒಪ್ಪಿಕೊಂಡು ಹೋದರೂ ಏನ್ ಪ್ರಯೋಜನ ಎನ್ನುವ ಮನಸ್ತಿತಿಯಲ್ಲಿದ್ದಾರೆ. ಮುಷ್ಕರ ನಡೆಸುವಂತಿಲ್ಲ,ಯಾವುದೇ ಆರ್ಥಿಕ ಸೌಲಭ್ಯ ಕೇಳುವಂತಿಲ್ಲ,ಮ್ಯಾನೇಜ್ಮೆಂಟ್ ಗಳೊಂದಿಗೆ ತಿಕ್ಕಾಟಕ್ಕಿಳಿಯುವಂತಿಲ್ಲ ಎನ್ನುವಂತ ಕಂಡೀಷನ್  ಗಳಿಗೆ ಒಪ್ಪೋದೆಂದ್ರೆ, ನಮ್ಮ ಹಕ್ಕೊತ್ತಾಯಗಳಿಗಾಗಿ ಪ್ರಶ್ನಿಸುವ-ಹಕ್ಕುಗಳಿಗಾಗಿ ಧ್ವನಿ ಎತ್ತುವ ಅವಕಾಶವನ್ನೇ ಕಸಿದುಕೊಂಡಂತಾಗುತ್ತದೆ.ಇದೊಂದ್ ರೀತಿ ಸ್ವಾಭಿಮಾನ ಅಡವಿಡುವಂಥ ಕಾರ್ಯ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಸಾರಿಗೆ ಕಾರ್ಮಿಕರ ಇತಿಹಾಸ ಗಮನಿಸಿ ನೋಡಿ, ಮ್ಯಾನೇಜ್ಮೆಂಟ್ ಗಳು ಯಾವತ್ತಿಗೂ ಸ್ವ ಇಚ್ಛೆಯಿಂದ ಕಾರ್ಮಿಕರಿಗೆ ಸವಲತ್ತು ಕೊಟ್ಟ ಉದಾಹರಣೆಯಿಲ್ಲ.ಕಾರ್ಮಿಕರು ಈವರೆಗೆ ಆ ಎಲ್ಲವನ್ನೂ ಹೋರಾಡಿಯೇ. ಅದಕ್ಕೇನೆ ಕಡಿವಾಣ ಹಾಕಿಬಿಟ್ರೆ ಶಾಶ್ವತವಾಗಿ ತಮ್ಮ ಅಡಿಯಾಳಾಗಿ ಕಾರ್ಮಿಕರನ್ನು ಒತ್ತೆ ಇಟ್ಟುಕೊಳ್ಳಬಹುದೆನ್ನುವುದು ಸರ್ಕಾರದ ಆಲೋಚನೆ ಇರಬಹುದು..ಆದ್ರೆ   ಸಾರಿಗೆ ಕಾರ್ಮಿಕರನ್ನು ಶೋಷಿತರನ್ನಾಗಿಸುವುದು, ಅವಕಾಶಶೂನ್ಯರನ್ನಾಗಿಸುವಂಥ ಸರ್ಕಾರದ ಸುತ್ತೊಲೆಯನ್ನು ಯಾವುದೇ ಕಾರಣಕ್ಕೂ ಒಪ್ಪೊಲ್ಲ ಎಂದಿರುವ ಬಹುತೇಕ ಸಾರಿಗೆ ಕಾರ್ಮಿಕರು ಸರ್ಕಾರದ ವಿರುದ್ದ ಸಮರ ಸಾರೊಕ್ಕೆ ಮುಂದಾಗಿದ್ದಾರೆ.

ಇದೆಲ್ಲವನ್ನು ಗಮನಿಸಿದ್ರೆ ಸಾರಿಗೆ ಕಾರ್ಮಿಕರು ತಮ್ಮ ಹಕ್ಕೊತ್ತಾಯಗಳಿಗೆ ಮತ್ತೆ ಸಂಘಟಿತರಾಗುವ ಲಕ್ಷಣ ಕಾಣಿಸುತ್ತಿದೆ.ಆದ್ರೆ  ಈ ಬಾರಿ ಯ ಹೋರಾಟ ಸಾಂಘಿಕ ಹೋರಾಟವಾಗಲಿದೆ ಎನ್ನುವ ಅಭಿಪ್ರಾಯ ಸಾರಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರದ್ದು.ಕೆಲಸ ಕಳೆದುಕೊಂಡು ಇಷ್ಟು ದಿನಗಳವರೆಗೆ ಅನುಭವಿಸಿದ ನೋವು-ಆಕ್ರೋಶ ತಣಿಸಬೇಕಿದ್ದ ಸರ್ಕಾರ ಅವೈಜ್ಞಾನಿಕ ಎಂದೇ ವಿಶ್ಲೇಷಿಸಲಾಗುತ್ತಿರುವ ಸುತ್ತೋಲೆ ಪ್ರಕಟಿಸಿ ಸಾರಿಗೆ ಕಾರ್ಮಿಕರ ಸ್ಥಿತಿಯನ್ನು ಬೆಂಕಿಯಿಂದ ಬಾಣಲೆಗೆ ದೂಡಿದೆ..ಕೆಂಡಾಮಂಡಲವಾಗಿರುವ ಸಾರಿಗೆ ಕಾರ್ಮಿಕರು ಸರ್ಕಾರದ ವಿರುದ್ಧ  ಹಿಂದೆಂದಿಗಿಂತಲೂ ಈ ಬಾರಿ ಉಗ್ರಸ್ವರೂಪದಲ್ಲಿ ಪ್ರತಿಭಟನೆಗಿಳಿದ್ರೂ ಆಶ್ಚರ್ಯಪಡಬೇಕಿಲ್ಲವೇನೋ ಎನ್ನುವ ಸಂದೇಶ ಸಾರುವಂತಿದೆ ಬೂದಿಮುಚ್ಚಿದ ಕೆಂಡದಂತಿರುವ ಕಾರ್ಮಿಕರ ಮನಸ್ಥಿತಿ.

Spread the love
Leave A Reply

Your email address will not be published.

Flash News