Top News

SHOCKING NEWS, CCTV CAMERA’S INFRONT OF BMTC MD OFFICE OUT OF ORDER.: ಇದೇನ್ ಕರ್ಮನೋ..?! “BMTC” ಮುಖ್ಯಸ್ಥರಿಗೇನೆ CCTV ಭದ್ರತೆಯಿಲ್ಲವಂತೆ..?!

ಬೆಂಗಳೂರು:ಇದನ್ನು ವಿಪರ್ಯಾಸ ಎನ್ನಬೇಕೋ… ಹಾಸ್ಯಾಸ್ಪದ ಎನ್ನಬೇಕೊ …ವಿಷಾದನೀಯ ಎನ್ನಬೇಕೋ.. ಮೂರ್ಖತನ ಎನ್ನಬೇಕೋ… ಅಥವಾ ಇಡೀ ಸಾರಿಗೆ ಆಡಳಿತ ವ್ಯವಸ್ಥೆಯ ಬೇಜವಬ್ದಾರಿತನ ಎನ್ನಬೇಕೋ ಖಂಡಿತಾ  ಗೊತ್ತಾಗುತ್ತಿಲ್ಲ .ಇಷ್ಟನ್ನೆಲ್ಲಾ ಹೇಳೋಕ್ಕೆ ಗಂಭೀರವಾದ ಕಾರಣವೂ ಇದೆ..ಅದೇನ್ ಗೊತ್ತಾ ಇಲ್ಲಿದೆ ನೋಡಿ ಆ ಅಘಾತಕಾರಿ‌ ಸುದ್ದಿ..

ನಿಮಗೆ ಇದನ್ನು ಕೇಳಿ‌ ಆಶ್ಚರ್ಯ ಆಗಬಹುದು…ನಗು ಬರಬಹುದು..ನೆತ್ತಿ ಸುಡುವಂಥ ಕೋಪವೂ ಬರಬಹುದು..ಆದರೆ ಇದು‌ ಸತ್ಯ..ಯಾವ ಕ್ಷಣದಲ್ಲಿ ಹೇಗಾದರೂ, ಯಾವ ರೂಪದಲ್ಲಾದರೂ,ಯಾರು ಬೇಕಾದರೂ, ಬಿಎಂಟಿಸಿಯ ಎಂಡಿ ಅನ್ಬುಕುಮಾರ್ ಅವರ ಕಛೇರಿಯ ಮುಂದೆ ಹಾಗೆಯೇ  ಮುಖ್ಯ  ಭದ್ರತಾ ಹಾಗೂ ಜಾಗೃತ ದಳದ ಅಧಿಕಾರಿಗಳ ಕಚೇರಿಯ ಮುಂದೆ ಏನು ಬೇಕಾದರೂ ಅಹಿತಕರವಾದ ಘಟನೆ ಸೃಷ್ಟಿಸಬಹುದು..ಅಥವಾ ಅವರ ಕಚೇರಿಗಳಿಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಬಹುದು..ಅದಕ್ಕಿಂತ ಮೀರಿದ ಅಚಾತುರ್ಯಕ್ಕೂ ಕಾರಣವಾಗಬಹುದು..(ಹಾಗಾಗುವುದು ಖಂಡಿತಾ ಬೇಡ.. ) ಹಾಗಾದರೂ ಕೂಡ ಅದ್ಯಾವ ಸನ್ನಿವೇಶದ ಸಾಕ್ಷ್ಯಗಳು ಕೂಡ ಸಿಗಲಿಕ್ಕಿಲ್ಲ. ಏಕೆಂದರೆ ಆ  ಸಾಕ್ಷ್ಯವನ್ನು ಸೆರೆಹಿಡಿಯಲು ಇರುವ ಪ್ರಮುಖ ಹಾಗೂ ಮುಖ್ಯವಾದ ಸಾಧನವಾದ ಸಿಸಿಟಿವಿಗಳೇ  ಕೆಲಸ ಮಾಡುತ್ತಿಲ್ಲ.ಇದನ್ನು ನಾವ್ ಹೇಳುತ್ತಿಲ್ಲ.ಸಾರಿಗೆ ಇಲಾಖೆ ಅಧಿಕಾರಿಗಳೇ ಆರ್ ಟಿಐ ನಲ್ಲಿ ಇಂತದ್ದೊಂದು ಮಾಹಿತಿ ನೀಡಿದ್ದಾರೆ.

ಹೌದು.. ಇದು ಆಶ್ಚರ್ಯವೆನಿಸಿದರೂ ಸತ್ಯ ಕೂಡ. ಬಿಎಂಟಿಸಿಯ ಎಂಡಿ ಕಚೇರಿ ಹಾಗೂ ಭದ್ರತಾ ಜಾಗೃತಾಧಿಕಾರಿಗಳ ಕಚೇರಿಯ ಮುಂದೆ ಅಳವಡಿಸಲಾಗಿರುವ ಯಾವುದೇ  ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನುವ ಮಾಹಿತಿಯನ್ನು ಬಿಎಂಟಿಸಿ ಅಧಿಕಾರಿಗಳೇ‌  ವೆಂಕಟೇಶ್ ಎನ್ನುವವರಿಗೆ ಆರ್ ಟಿಇನಲ್ಲಿ  ನೀಡಿರುತ್ತಾರೆ.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ವೆಂಕಟೇಶ್ ಅವರು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ವಜಾಗೊಂಡಿದ್ದರು.ಆ ಬಗ್ಗೆ ಕಾನೂ‌ನಾತ್ಮಕ‌ ಹೋರಾಟವನ್ನು ನಡೆಸುತ್ತಿದ್ದಾರೆ.

ಈ ನಡುವೆ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕೆಂದು ವೆಂಕಟೇಶ್ 28-01-2022 ರಂದು ವೆಂಕಟೇಶರವರು ಎಂಡಿ ಅವರನ್ನು ಭೇಟಿ ಮಾಡಲು ಕೇಂದ್ರ ಕಚೇರಿಗೆ ತೆರಳಿದ್ದರು.ಆ ಸನ್ನಿವೇಶದಲ್ಲಿ ದೂರು ಸ್ವೀಕರಿಸಬೇಕಾದ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ ಕಳುಹಿಸಿದ್ದರು.ಆ ಘಟನೆಯನ್ನು ವೆಂಕಟೇಶ್ ತಮ್ಮ‌ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.ಇದರಿಂದ ವ್ಯಗ್ರಗೊಂಡ ಸೆಕ್ಯೂರಿಟಿ ಸಿಬ್ಬಂದಿ ಹಲ್ಲೆಗೆ ಯತ್ನಿಸಿದ್ದರಲ್ಲದೆ ಅವರಿಂದ ಮೊಬೈಲ್  ಕೂಡ ಕಸಿದುಕೊಂಡು ದೃಶ್ಯಗಳನ್ನು ಡಿಲೀಟ್ ಮಾಡಿದ್ದರಂತೆ.

ಅಷ್ಟೇ ಅಲ್ಲ ಬಿಎಂಟಿಸಿಯ ಸಿಬ್ಬಂದಿ,ವೆಂಕಟೇಶ್ ರವರನ್ನು ಕಾನೂನಾತ್ಮಕವಾಗಿ ಸಿಲುಕಿಸಲು ಅವರ ವಿರುದ್ಧ ಮಹಿಳಾ ಸಿಬ್ಬಂದಿಯನ್ನು ಎತ್ತುಕಟ್ಟಿ ಅವರಿಂದ “ಮಾನಭಂಗ”ಯತ್ನದ  ಒಕ್ಕಣೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಕೂಡ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಇದನ್ನು ಅರಿತ ವೆಂಕಟೇಶ್ ರವರು ಅಂದು ಘಟನೆಯ ಬಗ್ಗೆ ಪ್ರತಿದೂರು ಕೊಡಲು ಸಿದ್ದವಾಗಿದ್ದರಂತೆ.ಆದರೆ ಕಾರ್ಮಿಕ ಮುಖಂಡರೊಬ್ಬರ ಮಧ್ಯಸ್ಥಿಕೆಯಿಂದ ಅದೆಲ್ಲಾ ತಿಳಿಗೊಂಡಿತ್ತಂತೆ.

ಆದರೆ ಬಿಎಂಟಿಸಿ ಆಡಳಿತದ ಬಗ್ಗೆ ನಂಬಿಕೆ ಇರದ ವೆಂಕಟೇಶ್, ಆಡಳಿತ ಮಂಡಳಿ ಯಾವ ಸಂದರ್ಭದಲ್ಲಿ ಬೇಕಾದರೂ ಈ ಪ್ರಕರಣದಲ್ಲಿ ತನ್ನನ್ನು ತಪ್ಪಿತಸ್ಥ ಎನ್ನುವಂತೆ ಬಿಂಬಿಸಬಹುದು ಎನ್ನುವ ಕಾರಣಕ್ಕೆ, ಅಂದು ನಡೆದ ಘಟನಾವಳಿಗಳು ಬಿಎಂಟಿಸಿ ಎಂಡಿ ಕಚೇರಿ ಆಸುಪಾಸಿನಲ್ಲಿ ನಡೆದಿದ್ದರ   ಸಾಕ್ಷ್ಯ ಕಲೆ ಹಾಕಲು ಸಿಸಿ ಟಿವಿ ದೃಶ್ಯಾವಳಿಗಳನ್ನು ಕೇಳಿ  ಆರ್ ಟಿಐನಲ್ಲಿ ಅರ್ಜಿ ಹಾಕಿದ್ದರು.

ಭದ್ರತಾ ವ್ಯವಸ್ಥಾಪಕರ ಕಚೇರಿಯು ಅಕ್ಕಪಕ್ಕದಲ್ಲೇ ಇರುವುದರಿಂದ ಆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರಬಹುದು ಎನ್ನುವ ಕಾರಣಕ್ಕೆ ಸಿಸಿಟಿವಿಯ ದೃಶ್ಯಾವಳಿಗಳು ಬೇಕೆಂದು ಆರ್ ಟಿಐನಲ್ಲಿ ಅರ್ಜಿ ಹಾಕಿದ್ದರು. ಆದರೆ ವಿಚಿತ್ರ ಎಂದರೆ ಎಂಡಿ ಹಾಗೂ ಭದ್ರತಾ ಜಾಗೃತಾಧಿಕಾರಿಗಳ ಕಛೇರಿಯ ಮುಂದೆ ಸಿಸಿಟಿವಿ ಇದ್ದರೂ ಕೂಡ ಅವು ಕೆಲಸ ಮಾಡುತ್ತಿಲ್ಲ, ನಿಷ್ಕ್ರಿಯವಾಗಿವೆ ಎನ್ನುವ ಮಾಹಿತಿ ನೀಡಲಾಗಿದೆ.

ವೆಂಕಟೇಶ್ ಕೇಳಿರುವ ಮಾಹಿತಿಗೆ ಬಿಎಂಟಿಸಿಯ ಆಡಳಿತ ವ್ಯವಸ್ಥೆ  ಸದರಿ ಕಚೇರಿಗಳ ವ್ಯಾಪ್ತಿಯಲ್ಲಿರುವಂತಹ  ಕ್ಯಾಮೆರಾಗಳು ದುರಸ್ತಿಯಲ್ಲಿರುವುದರಿಂದ ದೃಶ್ಯಾವಳಿಗಳು ಸೆರೆಯ ಯಾಗಿಲ್ಲ ಎನ್ನುವ ಮಾಹಿತಿಯನ್ನು ನೀಡಿವೆ. ಈ ಮಾಹಿತಿಯನ್ನು ಕೇಳಿ ವೆಂಕಟೇಶ್ ರವರಿಗೆ  ದಂಗುಬಡಿದಂತಾಗಿದೆ.

ಬಿಎಂಟಿಸಿಯ ಆಯಕಟ್ಟಿನ ಸ್ಥಳದಲ್ಲಿ ಕೆಲಸ ಮಾಡುವ ಎಂಡಿ ಹಾಗೂ ಮುಖ್ಯ ಭದ್ರತಾ ಜಾಗೃತಾಧಿಕಾರಿಗಳ ಕಚೇರಿ ಮುಂದೆ ಇರುವಂಥ ಸಿಸಿಟಿವಿಗಳೇ  ಸರಿಯಾಗಿ ಕೆಲಸಮಾಡುತ್ತಿಲ್ಲ ಎಂದರೆ ಇನ್ನುಳಿದಂತಹ ಕಚೇರಿಗಳ ಮುಂದೆ ಇರೋ  ಕ್ಯಾಮೆರಾಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿರಬಹುದು ಎಂದಿ   ಸಾರಿಗೆ ಮುಖಂಡರು ಪ್ರಶ್ನಿಸಿದ್ದಾರೆ.ಇದು ಆಡಳಿತ ವ್ಯವಸ್ಥೆಯ ಲೋಪಕ್ಕೆ ಹಿಡಿದ  ಕನ್ನಡಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಹಾಡಹಗಲೇ ಲೋಕಾಯುಕ್ತ ಕಚೇರಿಗೆ ನುಗ್ಗಿ ಲೋಕಾಯುಕ್ತರಿಗೆ ಚಾಕು ಇರಿದ ಘಟನೆಗಳು ನಮ್ಮ ಕಣ್ಮುಂದಿವೆ.ಎಂಡಿ ಕಚೇರಿ ಅದೇ ರೀತಿ ಮುಖ್ಯ ಭದ್ರತಾ ಜಾಗ್ರತಾ ಧಿಕಾರಿಗಳ ಕಚೇರಿಯಲ್ಲೂ ಹೀಗೆಯೇ ಆಗೊಲ್ಲ ಎಂದು ಊಹಿಸಲಾಗದು.ಅಪರಿಚಿತರು  ನುಗ್ಗಿ ಯಾವ ರೀತಿಯ ಕೆಲಸವನ್ನು ಬೇಕಾದ್ರೂ ಮಾಡಬಹುದು. ಅಂಥ ಸನ್ನಿವೇಶದಲ್ಲಿ ಸಿಸಿಟಿವಿಗಳೇ ಸರಿಯಾಗಿ ಕೆಲಸ ಮಾಡುವುದಿಲ್ಲ   ಎನ್ನುವುದಾದರೆ ಬಿಎಂಟಿಸಿಯಲ್ಲಿ‌ ಇನ್ನೆಂಥ ಆಡಳಿತ ಜಾರಿಯಲ್ಲಿದೆ ಎನ್ನೋದನ್ನು ಅರ್ಥಮಾಡಿಕೊಳ್ಳಬಹುದು..ಇಂಥ ಘಟನೆ ನಡೆಯಬಾರದೆನ್ನುವ ಕಾರಣಕ್ಕೇ ಸಿಸಿ ಟಿವಿಗಳನ್ನು ಅಳವಡಿಸಲಾಗುತ್ತದೆ.ಇದೆಲ್ಲ ಬಹುಷಃ ಎಂಡಿ ಗಮನಕ್ಕೆ ಇರಲಿಕ್ಕಿಲ್ಲವೇನೋ..ಇದನ್ನು ಮಾನಿಟರ್ ಮಾಡಬೇಕಾಗಿರುವಂತವರನ್ನು ಮನೆಗೆ ಕಳುಹಿಸಿದರೆ ವ್ಯವಸ್ಥೆ ಸರಿಯಾಗಬಹುದೇನೋ ಎನ್ನುತ್ತಾರೆ ಸಾರಿಗೆ ಕಾರ್ಮಿಕರು.

ಸಾರಿಗೆ ನಿಗಮಗಳ ಮುಖ್ಯಸ್ಥರ ಕಚೇರಿಗಳ ಮುಂದಿರುವ ಕ್ಯಾಮೆರಾಗಳ ಕಥೆಯೇ ಹೀಗಾದರೆ ಉಳಿದ ಕಚೇರಿಗಳ ಕಥೆ ಇನ್ನೇನಾಗಿರಬೇಕು..? ನಾಮಾಕವಸ್ಥೆಗೆ ಅವನ್ನು ಅಳವಡಿಸಲಾಗಿದೆ ಎನಿಸುತ್ತೆ..ಹಾಗಾದರೆ  ಅವುಗಳ ಮೆಂಟೆನೆನ್ಸ್ ಗೆ ಖರ್ಚು  ಮಾಡಲಾಗುತ್ತಿದೆ ಎನ್ನಲಾಗಿರುವ ಸಾವಿರಾರು ಹಣ ಎಲ್ಲೋಯ್ತು..? ಸಿಸಿ ಟಿವಿಗಳಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ನಡೆಯುತ್ತಿರಬಹುದಾದ ಶಂಕೆಯನ್ನು ಇದು ಮೂಡಿಸುತ್ತದೆ.

ಹಗರಣ..ಭ್ರಷ್ಟಾಚಾರ..ಅಕ್ರಮ..ಎಲ್ಲವನ್ನೂ ಒತ್ತಟ್ಟಿಗೆ ಇರಲಿ ಬಿಡಿ..ಆದ್ರೆ ಬಿಎಂಟಿಸಿ ಮುಖ್ಯಸ್ಥರಾಗಿರುವ ಎಂಡಿ ಅನ್ಬು ಕುಮಾರ್ ಅವರ ಭದ್ರತೆ..ಸುರಕ್ಷತೆ..ರಕ್ಷಣೆ ವಿಚಾರದಲ್ಲಿ ಅದಕ್ಕೆಂದೇ ಇರುವ ಭದ್ರತಾ ಶಾಖೆ ಇಷ್ಟೊಂದು ಪ್ರಮಾಣದ ನಿರ್ಲಕ್ಷ್ಯ ವಹಿಸಿರೋದು ಮಾತ್ರ ಖಂಡನಾರ್ಹ..ಹಾಗೆಯೇ ನಾಚಿಕೆಗೇಡು ಕೂಡ..ತಮ್ಮ ಕಚೇರಿ ಮುಂದಿರುವ ಸಿಸಿ ಟಿವಿಯೇ ಸರಿಯಾಗಿ ಕೆಲಸ ಮಾಡುತ್ತಿದೆಯೋ..ಇಲ್ವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಲಾರದಷ್ಟು ನಿರ್ಲಕ್ಷ್ಯ ವಹಿಸಿರುವ ಮುಖ್ಯ ಭದ್ರತಾಧಿಕಾರಿಯನ್ನೇ ಈ ನಿರ್ಲಕ್ಷ್ಯಕ್ಕೆ ನೈತಿಕವಾಗಿ ಹೊಣೆ ಮಾಡಬೇಕಾಗುತ್ತದೆ‌.ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾದ ಅಗತ್ಯವಿದೆ.

Spread the love

Related Articles

Leave a Reply

Your email address will not be published.

Back to top button
Flash News