BJP MINISTER’S SPECIAL OFFICER “ABSORPTION” CONTROVERSY…?! COMPLAINT AGAINST PCB TO GOVERNMENT BY ACTIVISE SAIDATTA….BJP “ಸಚಿವ”ರ “ವಿಶೇಷಾಧಿಕಾರಿ”ಗಾಗಿ ನಿಯಮ ಗಾಳಿಗೆ..!? ಹುದ್ದೆ “ವಿಲೀನ”ದಲ್ಲಿ ಮಹಾ “ಯಡವಟ್ಟು..?!
ಬಿಎಂಟಿಸಿಯಲ್ಲಿ ಟಿ.ಮುನಿರಾಜು ವೇತನ ಶ್ರೇಣಿ 18000 : ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 43100 ರೂ… ತತ್ಸಮಾನ ಹೇಗಾಯ್ತು..?! ಸರ್ಕಾರಕ್ಕೆ ಸಾಯಿದತ್ತಾ ದೂರು ..

ಬೆಂಗಳೂರು: ಪರಿಸರ ಸಚಿವ ಆನಂದ್ ಸಿಂಗ್ ವಿರುದ್ದ ಕೇಳಿಬಂದಿರುವ ಗಂಭೀರ ಹಾಗೂ ಗುರುತರ ಆರೋಪ ಇದು.ಇದಕ್ಕೆ ಸಂಬಂಧಿಸಿದ ದೂರು ಸರ್ಕಾರದ ಮಟ್ಟದಲ್ಲೂ ಸಲ್ಲಿಕೆಯಾಗಿದೆ.ಒಂದ್ವೇಳೆ ಮೇಲ್ಕಂಡ ಆಡಳಿತಾತ್ಮಕ ಲೋಪದಲ್ಲಿ ಸಚಿವ ಆನಂದ್ ಸಿಂಗ್ ಅವರ ನೇರ-ಪರೋಕ್ಷ ಹಸ್ತಕ್ಷೇಪ ಇದ್ದರೂ ಅದಕ್ಕೆ ಅವರು ಬೆಲೆ ತೆರಬೇಕಾಗಬಹುದೇನೋ..? ಏಕೆಂದರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಚಿವರ ವಿಶೇಷ ಕರ್ತವ್ಯಾಧಿಕಾರಿಯ ಹುದ್ದೆಯನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳ ಹಿಂದಿನ ಉದ್ದೇಶ ಹಾಗೂ ಅಸಲಿಯತ್ತನ್ನು ಪ್ರಶ್ನಿಸಿದ್ದಾರೆ.ಸರ್ಕಾರದ ವಿರುದ್ದ ಕೋರ್ಟ್ ಮಟ್ಟದಲ್ಲಿ ಹೋರಾಡುವುದಾಗಿಯೂ ಎಚ್ಚರಿಸಿದ್ದಾರೆ.

ಅಂದ್ಹಾಗೆ ನೇಮಕಾತಿ-ನಿಯೋಜನೆ ಹಾಗೂ ವಿಲೀನಕ್ಕೆ ಸಂಬಂಧಿಸಿದಂತೆ ಇರುವ ಕಾಯ್ದೆ-ಕಾನೂನು-ನಿಯಾಮವಳಿಗಳನ್ನು ಸಚಿವ ಆನಂದ್ ಸಿಂಗ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಟಿ.ಮುನಿರಾಜು ವಿಚಾರದಲ್ಲಿ ಗಾಳಿಗೆ ತೂರಲಾಗಿದೆ ಎಂದು ದಾಖಲೆಗಳ ಜತೆಗೆ ಸಾಯಿದತ್ತಾ ಪರಿಸರ-ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ತತ್ಸಮಾನ ಅಲ್ಲದ ಹುದ್ದೆಗೆ ಮುನಿರಾಜು ಅವರನ್ನು ವಿಲೀನ ಮಾಡಲಾಗಿದೆ ಎನ್ನುವುದು ಸಾಯಿದತ್ತಾ ದೂರಿನ ಸಾರಾಂಶ.

ರಾಜ್ಯ ಬಿಜೆಪಿ ಸರ್ಕಾರದ ಪರಿಸರ-ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರ ಆಪ್ತ ಹಾಗೂ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಟಿ.ಮುನಿರಾಜು ಅವರದು ಕೆಎಸ್ ಆರ್ ಟಿಸಿ ಮಾತೃ ಇಲಾಖೆ.ಸಚಿವರಾಗುವುದಕ್ಕಿಂತ ಮುನ್ನ ಶಾಸಕರಾಗಿದ್ದಾಗಿನಿಂದಲೂ ಮುನಿರಾಜು ಅವರು ಆನಂದ್ ಸಿಂಗ್ ಅವರ ಜತೆಗಿದ್ದಾರೆನ್ನಲಾಗುತ್ತಿದೆ.ಈ ಕಾರಣಕ್ಕೆ ಕೆಎಸ್ ಆರ್ ಟಿಸಿಯಿಂದ ಸಚಿವರ ವಿಶೇಷ ಕರ್ತವ್ಯಾಧಿಕಾರಿಯ ಹುದ್ದೆಗೆ ನಿಯೋಜನೆ(DEPUTATION) ಮೇಲೆ ಕೆಲಸ ಮಾಡುತ್ತಿದ್ದಾರೆ.
ಆದರೆ ಟಿ.ಮುನಿರಾಜು ಅವರನ್ನು ಕೆಎಸ್ ಆರ್ ಟಿಸಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಲೀನಗೊಳಿಸುವ ವಿಚಿತ್ರ ಹಾಗೂ ದೋಷಪೂರಿತ ಎನ್ನಲಾಗುತ್ತಿರುವ ನಿರ್ದಾರ ಇದೀಗ ಕೋಲಾಹಲವನ್ನೇ ಸೃಷ್ಟಿಸಿದೆ.ಇಂತದ್ದೊಂದು ನಿರ್ಣಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಬೋರ್ಡ್ ತೆಗೆದುಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.ಈ ವಿಲೀನ ಪ್ರಕ್ರಿಯೆ ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಸಾಕಷ್ಟು ವಿರೋದಾಭಾಸ ಹಾಗು ಗೊಂದಲಗಳಿಂದ ಕೂಡಿದೆ ಎನ್ನುವುದು ದೂರುದಾರ ಸಾಯಿದತ್ತಾ ಅವರ ಆರೋಪ ಹಾಗೂ ವಾದ.

ಟಿ.ಮುನಿರಾಜು ಅವರ ಮಾತೃ ಇಲಾಖೆಯಾದ ಬಿಎಂಟಿಸಿ ಉತ್ತರ ವಲಯದ ಡಿಪೋ 8 ರಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಎಸ್ ಎಸ್ ಎಲ್ ಸಿ ಮೇಲೆ ಕೆಲಸಕ್ಕೆ ಸೇರಿದ ಟಿ.ಮುನಿರಾಜು ಅವರ ಮೂಲ ವೇತನ 18000-32000 ರೂ ಎನ್ನುವುದು ಆರ್ ಟಿಐ ನಲ್ಲಿ ನೀಡಿರುವ ದಾಖಲೆಗಳಿಂದಲೇ ತಿಳಿದುಬಂದಿದೆ.
ಒಂದ್ವೇಳೆ ಟಿ.ಮುನಿರಾಜು ಅವರನ್ನು “ಡೆಪ್ಯುಟೇಷನ್” ನಿಂದ “ವಿಲೀನ”ವ್ಯಾಪ್ತಿಗೆ ತಂದ್ರೂ ಕೂಡ ಬಿಎಂಟಿಸಿಯಲ್ಲಿರೋ ಹುದ್ದೆಯಲ್ಲೇ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮುಂದುವರೆಸಬೇಕಾಗುತ್ತದಂತೆ.ಆದರೆ ಅದಕ್ಕೆ ತತ್ಸಮಾನವಾದ ಹುದ್ದೆ ಮಂಡಳಿಯಲ್ಲಿ ಇಲ್ಲವಂತೆ. ಮುನಿರಾಜು ಅವರಿಗಾಗಿ ದಿಢೀರ್ ..ಅದನ್ನು ಸೃಷ್ಟಿಸುವುದು ಕೂಡ ಕಷ್ಟಕರ ಎನ್ನಲಾಗುತ್ತಿದೆ.
ಇದೆಲ್ಲಾ ಒತ್ತಟ್ಟಿಗಿರಲಿ,ಇದೆಲ್ಲಕ್ಕಿಂತ ದೊಡ್ಡ ದುರಂತ ಎಂದರೆ ಮಂಡಳಿಯಲ್ಲಿ ಮುನಿರಾಜು ವಿಲೀನ ಗೊಳ್ಳುತ್ತಿದ್ದಾರೆ ಎನ್ನಲಾಗುತ್ತಿರುವುದು ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಎನ್ನಲಾಗ್ತಿದೆ.ಅಂದ್ಹಾಗೆ ಈ ಹುದ್ದೆಗೆ ನಿಗಧಿಯಾಗಿರುವ ವೇತನಶ್ರೇಣಿ 43100-83900 ರೂ.. ಬಿಎಂಟಿಸಿ ವೇತನಶ್ರೇಣಿ 18000-32000 ರೂ ಗು 43,100-83,900 ರೂ ವೇತನಶ್ರೇಣಿಗು ಎಷ್ಟೊಂದು ವ್ಯತ್ಯಾಸವಿದೆ ಅಲ್ವಾ..?

ಮುನಿರಾಜು ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಲೀನಗೊಳಿಸಿದ್ದೇ ಆದಲ್ಲಿ ಅವರು ಬಿಎಂಟಿಸಿಯಲ್ಲಿ ಪಡೆಯುತ್ತಿರುವ 18000-32000 ರೂ ವೇತನಶ್ರೇಣಿ ಹಾಗೂ ಅಧೀಕ್ಷಕ ತತ್ಸಮಾನ ಹುದ್ದೆ ಕಲ್ಪಿಸಬೇಕಾಗಿರುವುದು ನಿಯಮ.ಆದರೆ ಅಗಾಧ ವ್ಯತ್ಯಾಸ ಇರುವ ವೇತನಶ್ರೇಣಿಯ ಹುದ್ದೆಗೆ ಟಿ.ಮುನಿರಾಜು ಅವರನ್ನು ಪರ್ಮನೆಂಟಾಗಿ ಮಂಡಳಿಯಲ್ಲಿ ವಿಲೀನಗೊಳಿಸುತ್ತಿರುವುದು ಲೋಪದಿಂದ ಕೂಡಿದೆ ಎನ್ನುವುದು ಎಂಥಾ ಜನಸಾಮಾನ್ಯನಿಗೂ ಅರ್ಥವಾಗುವ ವಿಚಾರ ಎನ್ನುವುದು ಸಾಯಿದತ್ತಾ ವಾದ.
ಎಲ್ಲಕ್ಕಿಂತ ಹೆಚ್ಚಾಗಿ ಮೇಲ್ಕಂಡ ವಿಲೀನ ಪ್ರಕ್ರಿಯೆಗೆ ಕೆಸಿಎಸ್( ಸಾಮಾನ್ಯ ನೇಮಕಾತಿ) 1977ರ ರೂಲ್ 16 ಅವಕಾಶ ನೀಡುತ್ತದೆಯೇ? ಎನ್ನುವುದು ಸಾಯಿದತ್ತಾ ಪ್ರಶ್ನೆ. ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಹುದ್ದೆಗೆ ತತ್ಸಮಾನವಾದ ಹುದ್ದೆಯಲ್ಲೇ ಮಂಡಳಿಯಲ್ಲಿ ಟಿ.ಮುನಿರಾಜು ಅವರನ್ನು ವಿಲೀನ ಮಾಡಬೇಕಾಗುತ್ತದೆ.
ವಿಲೀನ ಪ್ರಕ್ರಿಯೆಗೆ ಮಂಡಳಿ ಸಭೆಯಲ್ಲಿ ಕೆಲವು ತಿದ್ದುಪಡಿಗಳ ನ್ನೇನೋ ತರಲಾಗಿದೆ.ಆದರೆ ಏನೇ ತಿದ್ದುಪಡಿಗಳಾಗಿದ್ರೂ ತತ್ಸಮಾನ ಎನ್ನುವ ಗಂಭೀರವಾದ ಮಾನದಂಡವನ್ನೇ ನಿರ್ಲಕ್ಷ್ಯಿಸಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ನಿಯಮಬಾಹಿರವಾಗಿ ನಡೆದಿದೆ ಎನ್ನಲಾಗುತ್ತಿರುವ ಟಿ.ಮುನಿರಾಜು ವಿಲೀನಕಾರ್ಯದ ಹಿಂದೆ ಅನೇಕರ ಹಿತಾಸಕ್ತಿ-ಅತ್ಯಾಸಕ್ತಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.ಇದರಲ್ಲಿ ಹೆಚ್ಚು ನಿರ್ಣಾಯಕ ಎನ್ನುವ ಪಾತ್ರ ವಹಿಸಿರುವುದು ಸಚಿವ ಆನಂದ್ ಸಿಂಗ್ ಎನ್ನುವ ಮಾತಿದೆ.ಏಕೆಂದ್ರೆ ಹೇಳಿ ಕೇಳಿ ಮುನಿರಾಜು ಸಚಿವ ಆನಂದ್ ಸಿಂಗ್ ಜತೆ ಅನೇಕ ವರ್ಷಗಳಿಂದ ಇದ್ದಾರಂತೆ. ತನ್ನ ಆಪ್ತನಿಗೆ ತನ್ನ ಕರ್ತವ್ಯದ ಅವಧಿಯಲ್ಲಿ ಏನಾದರೊಂದು “ಒಳ್ಳೇದು.” ಮಾಡಬೇಕೆನ್ನುವ ಕಾರಣಕ್ಕೆ ಮಂಡಳಿ ಮೇಲೆ ಒತ್ತಡ ತಂದು ವಿಲೀನ ಪ್ರಕ್ರಿಯೆ ಅವಸರದಲ್ಲಿ ಮಾಡಿ ಮುಗಿಸಲಿಕ್ಕೆ ಕಾರಣವಾದರೇನೋ..? ಗೊತ್ತಿಲ್ಲ.
ಆದರೆ ಯಾರೇ ಒತ್ತಡ ಹಾಕಿರಲಿ,ಪ್ರಭಾವ ಬೀರಲಿ, ಅಧಿಕಾರಿಗಳು ನಿಯಮ ಮೀರಿ ವಿಲೀನ ಪ್ರಕ್ರಿಯೆ ಮಾಡಿದ್ದಾರೆನ್ನುವುದು ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಸಮಂಜಸವಲ್ಲ.ಅಲ್ಲದೇ ಇದು ಬೇರೆಯದೇ ಅಕ್ರಮಗಳಿಗೆ ಭವಿಷ್ಯದಲ್ಲಿ ನಾಂದಿ ಹಾಡುವ ಸಾಧ್ಯತೆಗಳಿವೆ. ಅಧಿಕಾರಿಗಳಿಗೆ ಇದೇ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿದ್ರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.ಯಾರದೋ ಹಿತಾಸಕ್ತಿಗೆ ಈಡಾಗಿ ಟಿ.ಮುನಿರಾಜು ಅವರನ್ನು ವಿಲೀನಗೊಳಿಸುವ ಅತಿಯಾದ ಆತುರದಲ್ಲಿ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆನ್ನುವುದು ಅಧಿಕಾರಿಗಳಿಗೇ ತಿರುಗುಬಾಣವಾದರೂ ಆಶ್ಚರ್ಯವಿಲ್ಲ.