KANNADA COMEDIAN MOHAN JUNEJA NOMORE “ಮೋಹನ್” ಎಂಬ ಹಾಸ್ಯ ನಟನ ದಯನೀಯ ಅಂತ್ಯ…

ನಿರ್ಮಾಪಕರು ಬಾಕಿ ಉಳಿಸಿಕೊಂಡ ಕೂಲಿ ಕೊಟ್ಟಿದ್ರೂ ಬದುಕುಳಿದುಬಿಡ್ತಿದ್ದರೇನೋ ಮೋಹನ್ ಜುನೇಜಾ-ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ನರಳಾಡಿದ ದಿನಗಳು ಅದೆಷ್ಟೋ.. ಹೊಟ್ಟೆಯ ಹಸಿವು- ಉಮ್ಮಳಿಸುವ ದುಃಖ ಅದುಮಿಡಿದು ಕ್ಯಾಮೆರಾ ಮುಂದೆ ನಟಿಸಿದ ಚಿತ್ರಗಳು ಅವೆಷ್ಟೋ..

0

ಮೋಹನ್ ಜುನೇಜಾ..ತುಂಬಾ ಜನಕ್ಕೆ ತಿಳಿದಿರದ ಹೆಸರಿದು..ಆದ್ರೆ ತೆರೆ ಮೇಲೆ ನೋಡಿರೋರು ಮಾತ್ರ ಆ ಚಹರೆಯನ್ನು ಮರೆಯೊಕ್ಕೆ ಸಾಧ್ಯವೇ ಇಲ್ಲ.. ತೆರೆಯ ಮೇಲೆ ಎಲ್ಲರನ್ನು ನಗಿಸುತ್ತಾ..ಕಚಗುಳಿ ಇಡುತ್ತಿದ್ದ ನಟ ಮೋಹನ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದು.. ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದುದು..ಕೊನೆ ಉಸಿರೆಳೆದಿದ್ದು ಯಾವುದೂ ದೊಡ್ಡ ಸುದ್ದಿಯಾಗೇ ಇಲ್ಲ. ಏಕಂದ್ರೆ ಮೋಹನ್ ದೊಡ್ಡ ನಾಯಕ ನಟ ಅಲ್ಲ,ಟಿಆರ್ ಪಿ ಕೊಡುವಂತ ಕ್ಯಾರೆಕ್ಟರ್ ಆಗಿರಲಿಲ್ಲ  ನೋಡಿ.. ಹಾಗಾಗಿ ಮೋಹನ್ ಸಾವು ಮಾದ್ಯಮಗಳಲ್ಲಿ  ದೊಡ್ಡ ಪ್ರಚಾರವನ್ನೂ ಪಡೆಯಲಿಲ್ಲ-ಅಂತದ್ದೊಂದು ಸುದ್ದಿಗೆ ಹೆಚ್ಚಿನ ಮಹತ್ವ ಕೊಡಬೇಕೆಂದೂ ಅನಿಸಲಿಲ್ಲ….ನಾಚಿಕೆಯಾಗಬೇಕು ನಮ್ಮ ಮಾದ್ಯಮಗಳು ಹಾಗು ಅವುಗಳ ಹೀನ ಮನಸ್ಥಿತಿಗೆ.

ತೆರೆ ಮೇಲೆ ಹಾಗೆ ಬಂದು ಹೀಗೆ ಹೋಗುವ ಕೆಲ ಪಾತ್ರಗಳು ಹಾಗು ಕಲಾವಿದರು ಕೊನೆವರೆಗು ಸರಿದೋಗುವ ಕ್ಯಾರೆಕ್ಟರ್ ಗಳಾಗೆ ಉಳಿದುಬಿಡುತ್ತಾರೆ.ಅವರು ಯಾವಾಗ ಚಿತ್ರರಂಗಕ್ಕೆ ಬಂದ್ರು… ಎಷ್ಟು ಚಿತ್ರಗಳಲ್ಲಿ ನಟಿಸಿದ್ರು..ಯಾವೆಲ್ಲಾ ಪಾತ್ರಗಳಲ್ಲಿ ನಟಿಸಿದ್ರು..ಅವರ ಪೂರ್ವಾಪರ ಏನು..? ಎನ್ನುವುದು ಹಾಗೊಮ್ಮೆ ಹೀಗೊಮ್ಮೆ ಕೇಳಿಬರುವ ವರ್ತಮಾನಗಳಿಂದ ತಿಳಿಯುತ್ತದಷ್ಟೆ..  ಹೌದಾ..ಆ ಕಲಾವಿದರು ಹೀಗಾ..ಅವರ ಹಿನ್ನಲೆ ಹೀಗಿತ್ತಾ..ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದಾರಾ..?ಎನ್ನುವ ಆಶ್ಚರ್ಯದ ಪ್ರಶ್ನೆಗಳನ್ನು ನಮ್ಮಲ್ಲೇ ನಾವು ಕೇಳಿಕೊಳ್ಳುತ್ತೇವೆ.

ಅಂಥಾ ಪಾತ್ರಗಳ ಸಾಲಿಗೆ ಸೇರಿದ್ದ ನಟ ಮೋಹನ್ ಜುನೇಜಾ.ತೆರೆ ಮೇಲೆ ಹೇಳಿಕೊಳ್ಳುವಂತ ಪಾತ್ರಗಳಲ್ಲಿ ನಟಿಸದಿದ್ದರೂ( ಅಂತದ್ದೊಂದು ಅವಕಾಶ ಚಿತ್ರರಂಗ ನೀಡಲಿಲ್ಲ ಎನ್ನುವುದು ಕೂಡ ಸತ್ಯ) ಸಿಕ್ಕ ಪಾತ್ರಗಳಿಗೆ ಜೀವ ತುಂಬಿ ಅದು ಪ್ರೇಕ್ಷಕರ ಮಾನಸದಲ್ಲಿ ಮುದ್ರೆ ಒತ್ತುವ ರೀತಿಯಲ್ಲಿ ಶೃದ್ದೆಯಿಂದ ನಟಿಸಿದ್ದರು ಮೋಹನ್ ಜುನೇಜಾ.ಹಾಗಾಗಿಯೇ ಅವರ ಬಗ್ಗೆ ಗಣೇಶ್ ಕಾಸರಗೋಡು ಅವರಂಥ ಸಿನಿಪತ್ರಕರ್ತರು ಕೂಡ ಭಾವುಕತೆಯಿಂದ ಮಾತನಾಡುತ್ತಾರೆ.ಅವರ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುತ್ತಾರೆ.( ಇಂಥಾ ಎಷ್ಟೋ ಕಲಾವಿದರ ಬದುಕಿನ ಕಥಾನಕವನ್ನು ತಮ್ಮ “ಚೆದುರಿದ ಚಿತ್ರಗಳು” ಅಂಕಣದಲ್ಲಿ ಬರೆದ ಹೆಗ್ಗಳಿಕೆ ಗಣೇಶ್ ಕಾಸರಗೋಡು ಅವರದು.)

ಕ್ಯಾಮೆರಾ ಮುಂದೆ ನಿಂತರೇನೇ ಹೊಟ್ಟೆಪಾಡು..ತುತ್ತಿನ ಚೀಲ ತುಂಬೋದು ಎನ್ನುವ ಸ್ಥಿತಿ ಮೋಹನ್ ಅವರದಾಗಿತ್ತು. ಚಿತ್ರರಂಗಕ್ಕೆ ಬಂದ ದಿನದಿಂದಲೂ ಕಿತ್ತು ತಿನ್ನುವ ಬಡತನದ ಹಿನ್ನಲೆ ಮೋಹನ್ ದು.ಪಾತ್ರಗಳಿಗಾಗಿ ಗಾಂಧೀನಗರದಲ್ಲಿ ಅವರು ಸವೆಸಿದ ಚಪ್ಪಲಿಗಳು ಅದೆಷ್ಟೋ..ದಢೂತಿ ದೇಹ-ಕೃಷ್ಣವರ್ಣವೇ ಅದೆಷ್ಟೋ ಬಾರಿ ಅವರಿಗೆ ಮಾರಕವಾಗಿದ್ದಿದೆಯಂತೆ.ಆದರೆ ಅದನ್ನೇ ಪಾಸಿಟಿವ್ ತೆಗೆದುಕೊಂಡು ಸಿಕ್ಕ ಸಣ್ಣಪುಟ್ಟ ಪಾತ್ರಗಳಲ್ಲಿ ಗಮನಸೆಳೆದ ಕೀರ್ತಿ ಮೋಹನ್ ಅವರದು.

ನಿಮಗೆ ಆಶ್ಚರ್ಯವಾಗಬಹುದು..ಮೋಹನ್ 100ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.ಅಷ್ಟೊಂದು ಚಿತ್ರಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂಥ ಪ್ರಚಾರ ಸಿಗಲಿಲ್ಲ..ಮೋಹನ್ ಎನ್ನುವಂಥ ಕ್ಯಾರೆಕ್ಟರ್ ಇದೆ ಎನ್ನೋ RECOGNISATION ಸಿಗಲಿಲ್ಲ.ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬರೋ ಸಾವಿರಾರು ಕಲಾವಿದರ ಕಥೆ ಹೀಗೆಯೇ ಇರುತ್ತೆ.

ಜೀವನದ ಬಂಡಿ ಎಳೆಯೋದೇ ಕಷ್ಟವಾಗಿರುವಾಗಲೇ ವಕ್ಕರಿಸಿಕೊಂಡ ಹೃದಯ ಸಂಬಂಧಿ ಸಮಸ್ಯೆ ಮೋಹನ್ ಅವರನ್ನು ಹಿಂಡಿಬಿಡ್ತು.ನೋವಿನ ನಡುವೆಯು ಕ್ಯಾಮೆರಾದ ಮುಂದೆ ನಟಿಸಿ ಕೈಗೆ ಸಿಕ್ಕಷ್ಟು ಪುಡಿಗಾಸಿನ ಸಂಭಾವನೆಯಲ್ಲೇ ಜೀವನ ನಡೆಸಬೇಕಾದ ಪರಿಸ್ತಿತಿಯಿತ್ತು.ಆದರೆ ಇದ್ಯಾವುದನ್ನು ಬಹಿರಂಗಗೊಳಿಸದೆ ತನ್ನ ನೋವನ್ನು ತಾನೇ ನುಂಗಿಕೊಳ್ಳುತ್ತಿದ್ದರಂತೆ ಮೋಹನ್.

ನಟಿಸಿದ್ದು 100ಕ್ಕೂ ಹೆಚ್ಚು ಚಿತ್ರಗಳಾದರೂ ಶೇಕಡಾ 50 ರಷ್ಟು ಚಿತ್ರಗಳಿಂದ ಸಂಭಾವನೆಯೇ ಸಿಕ್ಕಿರಲಿಲ್ಲ ಎಂದು ಆತ್ಮೀಯರ ಬಳಿ ಹೇಳಿಕೊಂಡಿದ್ದರಂತೆ.ಮಾಡಿದ ಪಾತ್ರಕ್ಕೆ ಕೂಲಿಯನ್ನು ಧೈರ್ಯವಾಗಿ ಕೇಳಿದ್ರೆ ಪಾತ್ರಗಳೆಲ್ಲಿ ಕೈ ತಪ್ಪಿ ಬಿಡ್ತವೋ ಎನ್ನುವ ಅಳುಕಿಗೆ ಎಷ್ಟೋ ನಿರ್ಮಾಪಕರಿಂದ ಹಣವನ್ನೇ ಕೇಳಿ ಪಡೆಯಲಿಲ್ಲವಂತೆ.ಕೈಯಲ್ಲಿ ಕಾಸಿಲ್ಲದೆ ಅದೆಷ್ಟೋ ದಿನ ಊಟವನ್ನೇ ಮಾಡದೆ ನೀರು ಕುಡಿದ ದಿನಗಳಿದ್ದವಂತೆ.ನೆಲಮಂಗಲದಿಂದ ಅವರಿವರನ್ನು ಕಾಡಿಬೇಡಿ ರೈಲು-ಲಾರಿ-ಬೈಕ್-ಬಸ್ಸು-ಗೂಡ್ಸ್ ಆಟೋಗಳನ್ನು ಹೊತ್ತಲ್ಲದ ಹೊತ್ತಲ್ಲಿ ಏರಿ ಗಾಂಧೀನಗರವನ್ನು ಸೇರಿ ಅಣ್ನಮ್ಮ ದೇವಿಗೊಂದು ಸಲಾಂ ಹಾಕಿ ಅಮ್ಮ ಇಂದಿನ ಬದುಕಿನ ಬಂಡಿಯನ್ನು ಹೇಗಾದ್ರೂ ಸಾಗಿಸಮ್ಮ ಎಂದು ಕಣ್ಣೀರಿಟ್ಟು ಕೇಳಿಕೊಂಡ ದಿನಗಳು ಅದೆಷ್ಟೋ

ನಟನೆಯ ನಡುವೆ ಆಗಾಗ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಮೋಹನ್,ಹಣವೇ ಇಲ್ಲದ ಸನ್ನಿವೇಶಗಳಲ್ಲಿ ಆರೋಗ್ಯದ ಕಾಳಜಿಯನ್ನೇ ಮರೆತುಬಿಟ್ಟರು,.ನಿ ರ್ಮಾಪಕ ರಿಂದ ಬರಬೇಕಿರೋ ಬಾಕಿ ಬಂದರೇ ಅದೆಷ್ಟೋ ಲಕ್ಷಗಳಾಗುತ್ವೆ…ಆದರೆ ಕೊಡೋ ಔದಾರ್ಯ ಅವರಿಗೆ ಇಲ್ಲ.ಕೇಳೋ ಧೈರ್ಯ ನನಗೂ ಇಲ್ಲವಾಗಿದೆ ಎಂದು ಆತ್ಮೀಯರ ಬಳಿ ಹೇಳಿಕೊಳ್ಳುತ್ತಿ ದ್ದರು. ಚಿಕಿತ್ಸೆ ಪಡೆಯೊಕ್ಕೆ ಹಣವಿಲ್ಲದ ಕಾರಣದಿಂದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಮೋಹನ್ ಅವರನ್ನು ಅದೇ ಸಮಸ್ಯೆ ಆಪೋಷನ ಪಡೆದುಬಿಡ್ತು.

ಸತ್ತ ಮೇಲೆ ಹೃದಯವಂತನನ್ನು ಕಳೆದುಕೊಂಡ್ವಿ…ಸಹೃದಯ ನಟ..ಒಳ್ಳೆಯ ನಟ..ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ ಎಂದು ಶೋ ಅಪ್ ಮಾತುಗಳನ್ನಾಡುವ ಚಿತ್ರರಂಗ ಒಪ್ಪತ್ತಿನ ಊಟಕ್ಕೂ ತತ್ವಾರ ಪಡುತ್ತಿರುವ, ಜೀವನ ನಡೆಸಲಿಕ್ಕೆ ಕನಿಷ್ಟ ಸೌಲಭ್ಯಗಳಿಲ್ಲದ ಬಳಲುತ್ತಿರುವ  ಅದೆಷ್ಟೋ ನಟರ ನೆರವಿಗೆ ಬರೋ ಕೆಲಸ ಮಾಡಿದ್ರೆ ಮೋಹನ್ ಜುನೇಜಾ ಅವರಂಥ ಬದುಕಿಬಾಳಬೇಕಾದ..ತೆರೆಯಲ್ಲಿ ಮಿಂಚಬೇಕಿದ್ದ ನಟರು ವಯಸ್ಸಲ್ಲದ ವಯಸ್ಸಲ್ಲಿ…ದಾರುಣ-ದಯನೀಯ ಸ್ಥಿತಿಯಲ್ಲಿ ನಮ್ಮನ್ನೆಲ್ಲಾ ಅಗಲಿ ಹೋಗಬೇಕಾದ ಸ್ತಿತಿ ಸೃಷ್ಟಿಯಾಗುತ್ತಿರಲಿಲ್ಲ ಅಲ್ಲವೇ..? ಚಿತ್ರರಂಗ ಆ ಮನುಷ್ಯತ್ವ ಬೆಳೆಸಿಕೊಳ್ಳೊಕ್ಕೆ ಮೋಹನ್ ಜುನೇಜಾ ಅವರಂಥ ಇನ್ನೆಷ್ಟು ನಿಷ್ಪಾಪಿ ಕಲಾವಿದರ ಸಾವುಗಳಾಗಬೇಕೋ ಗೊತ್ತಾಗ್ತಿಲ್ಲ.

Spread the love
Leave A Reply

Your email address will not be published.

Flash News