BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಮಾಹಿತಿ/ತಂತ್ರಜ್ಞಾನರಾಜ್ಯ-ರಾಜಧಾನಿ

MOTHER’S DAY SPECIAL :ಅಗಲಿದ “ಅಮ್ಮ”ನ ನೆನಪುಗಳಲ್ಲಿ.. “ಹತಭಾಗ್ಯ ಮಗ”ನ ಆತ್ಮನಿವೇದನೆ….

ಏಯ್ ಹುಷಾರ್…ಬಿದ್ದೀಯ..ಜೋಕೆ..ಅಮ್ಮನ ಕಾಳಜಿಗೆ ಇದಕ್ಕಿಂತ ಮೇರು ಉದಾಹರಣೆ ಬೇಕಾ..
ಏಯ್ ಹುಷಾರ್…ಬಿದ್ದೀಯ..ಜೋಕೆ..ಅಮ್ಮನ ಕಾಳಜಿಗೆ ಇದಕ್ಕಿಂತ ಮೇರು ಉದಾಹರಣೆ ಬೇಕಾ…
ಅಮ್ಮನ ಮುಗುಳ್ನಗೆಗೆ ಯಾವ ಹಾಲ ಬೆಳದಿಂಗಳು ಸಾಟಿ..
ಅಮ್ಮನ ಮುಗುಳ್ನಗೆಗೆ ಯಾವ ಹಾಲ ಬೆಳದಿಂಗಳು ಸಾಟಿ..

ಅಮ್ಮ ಕ್ಷಮಿಸಿಬಿಡು..ಅಮ್ಮ ಕ್ಷಮಿಸಿಬಿಡು.. ಇದು ಬಿನ್ನಹವಲ್ಲ..ಮನವಿಯಲ್ಲ..ಆಗ್ರಹವಲ್ಲ..ಬುದ್ಧಿ ಬಲಿತಾಗಿನಿಂದ ಸಾವಿನ ಕ್ಷಣದವರೆಗೂ ತಿಳಿದೋ ತಿಳಿಯದೆಯೋ ನಾನು(ವು) ಮಾಡಿದ ತಪ್ಪುಗಳಿಗಾಗಿ, ನಿನ್ನ ಮನಸು-ಹೃದಯ ಘಾಸಿಗೊಳಿಸಿದ್ದಕ್ಕೆ.. ನಿನ್ನ ಘನತೆಗೆ ಕುಂದು ತಂದಿದ್ದಕ್ಕೆ.. ನಿನ್ನ ಮಹತ್ವ ಅರಿಯದೆ ತೋರಿದ ಸಣ್ಣತನಕ್ಕಾಗಿ.. ನಿನ್ನ ವ್ಯಕ್ತಿತ್ವವನ್ನು ಅವಮಾನಿಸಿದ್ದಕ್ಕಾಗಿ.. ಭಾವನೆಗಳನ್ನು ಗೌರವಿಸದಕ್ಕಾಗಿ.. ಇಡಿಯ ಬದುಕನ್ನು ಅವಮಾನಿಸಿರಬಹುದಾದ ಅಹಂಗಾಗಿ.. ಇದು ನಿನ್ನಲ್ಲಿ ನನ್ನ “ಆತ್ಮನಿವೇದನೆ..ಅರಿಕೆ”..

ಕ್ಷಮಿಸು ಎನ್ನುವ ಅರ್ಹತೆ ನನಗಿಲ್ಲವಾದರೂ ನೀನು ಕ್ಷಮಯಾಧರಿತ್ರಿ-ಮಮತಾಮಯಿ ಎನ್ನೋ ಬಲವಾದ-ಅಚಲವಾದ ನಂಬಿಕೆ ನನ್ನದು.. ಅದಕ್ಕಾಗಿ ಕ್ಷಮಿಸಿಬಿಡು..ಅಮ್ಮ.. ನಿನಗೆ ನೀಡಿದ ನೋವು-ದುಃಖ-ಅವಮಾನಕ್ಕೆ, ಮೌನಿಯಾಗಿ ಕೋಣೆಯಲ್ಲಿ ಅಡಗಿ,ಉಮ್ಮಳಿಸಿ ಬರೋ ನೋವನ್ನು ಗಂಟಲಲ್ಲೇ ನುಂಗಿ,ಸೆರಗಿನಲ್ಲಿ ಒದ್ದೆಯಾದ ನಿನ್ನ ಕಣ್ಣಾಲಿಗಳನ್ನು ಒರೆಸಿಕೊಳ್ಳುವಂತೆ ಮಾಡಿದ ಎಲ್ಲಾ ಸನ್ನಿವೇಶಗಳಿಗಾಗಿ ಕ್ಷಮೆ ಯಾಚಿಸುತ್ತೇನೆ. –

ನನ್ನ ಅದೆಷ್ಟೋ ಸಂತೋಷದ ಕ್ಷಣಗಳಲ್ಲಿ ನಿನ್ನನ್ನು ಶಾಮೀಲುಗೊಳಿಸಿಕೊಳ್ಳದೆ ಸಂಭ್ರಮಿಸಿದ ಮರೆತ ನನ್ನ ಅಹಂಕಾರಕ್ಕಾಗಿ ಅಮ್ಮ ಕ್ಷಮಿಸು. .ನನ್ನ ಶ್ರೇಯಸ್ಸಿಗಾಗಿ ನೀ ಮಾಡಿದ ಎಷ್ಟೋ ತ್ಯಾಗ ಮರೆತು, ನಿನ್ನ ಮಮಕಾರ-ಕಾಳಜಿ ಅರ್ಥ ಮಾಡಿಕೊಳ್ಳದೆ ಸಿಡುಕಿದ್ದಕ್ಕಾಗಿ ಅಮ್ಮ ಕ್ಷಮಿಸು. ದಿನವಿಡೀ ದಣಿದ ದೇಹವನ್ನು ರಾತ್ರಿಯೂ ಕಚೇರಿ ಕೆಲಸಕ್ಕಾಗಿ ದಂಡಿಸಬೇಡ..ನೆಮ್ಮದಿಯಲ್ಲಿ ನಿದ್ರಿಸು ಎಂದ ಕಾಳಜಿ ಮಾತಿಗೆ ರೇಗಿದ್ದಕ್ಕೆ ಅಮ್ಮ ಕ್ಷಮಿಸು.

ಅದೆಷ್ಟೋ ರಾತ್ರಿಗಳ ನಿದ್ರೆಯನ್ನೇ ಕಳಕೊಂಡು ನನ್ನ ಮುಂದೆ ಕೂತಿರುತ್ತಿದ್ದ ನಿನ್ನ ತಾಯಿಗರುಳಿನ ತುಡಿತ ಅರಿಯದೆ ಹೋಗಿ ಮಲಗಿಕೋ ನನ್ನನ್ನೇಕೆ ಕಾಯುತ್ತಿದ್ದೀಯಾ ಎಂದು ಅಬ್ಬರಿಸಿದ್ದಕ್ಕೆ ಅಮ್ಮ ಕ್ಷಮಿಸು. ಬುದ್ದಿ ಮಾತು ಅತಿಯೆನಿಸಿ, ಗೊಣಗಿದ್ದಕ್ಕೆ…ಮಗನೆಂಬ ಸಲಿಗೆಯಲ್ಲಿ ಕೊಂಚ ಹೆಚ್ಚಾಗಿಯೇ ಮಾತನಾಡಿದಾಗ “ಎಲ್ಲಾ ತಿಳಿದವಳಂತೆ ಅದೆಷ್ಟ್ ಮಾತಾಡ್ತೀಯ ಸುಮ್ನಿರಮ್ಮ.. ಎಂದು ರೇಗಿದ್ದಕ್ಕೆ ಅಮ್ಮ ಕ್ಷಮಿಸು.

ಸದಾ ನನ್ನ ಇಷ್ಟ ಕಷ್ಟಗಳನ್ನು ಕೇಳುತ್ತಲೇ ದಶಕಗಳಷ್ಟು ಆಯಸ್ಸನ್ನು ಸವೆಸಿದ ನಿನ್ನನ್ನು ಒಮ್ಮೆಯೂ ನಿನಗೇನು ಇಷ್ಟ ಹೇಳಮ್ಮ ಎಂದು ಕಾಳಜಿ ತೋರದ..ನಿನ್ನ ಸಣ್ಣಪುಟ್ಟ ಆಸೆಗಳನ್ನು ಈಡೈರಿಸಲಿಕ್ಕಾಗದ.. ಸಣ್ಣಪುಟ್ಟ ನಿರೀಕ್ಷೆಗಳಿಗೂ ಸ್ಪಂದಿಸಲಾಗದ ನನ್ನ ಅಯೋಗ್ಯತನವನ್ನು ಅಮ್ಮ ಕ್ಷಮಿಸು.

ಅಮ್ಮ ಗಂಭೀರಳಾದಾಗ ಹೀಗೂ ಕಾಣುತ್ತಿದ್ದಳು
ಅಮ್ಮ ಗಂಭೀರಳಾದಾಗ ಹೀಗೂ ಕಾಣುತ್ತಿದ್ದಳು….

ಸ್ವಲ್ಪ ಏರುಪೇರುಗಳಾದ್ರೂ ವಿಲವಿಲನೆ ಒದ್ದಾಡಿ,ರಾತ್ರಿಯೆಲ್ಲಾ ಕಾಳಜಿ ಮಾಡಿದ ನಿನ್ನನ್ನು ತಾತ್ಸಾರ ಮಾಡಿರಬಹುದಾದ ನಿರ್ಲಕ್ಷ್ಯವನ್ನು ಅಮ್ಮ ಕ್ಷಮಿಸು. “ಯಾಕೋ ಕಣೋ ಸುಸ್ತು..” ಎಂದಾಗ.., ಆಸ್ಪತ್ರೆಗೆ ಕರ್ಕೊಂಡ್ ಹೋಗಿ ಬಾ, ಎಂದು ಹೆಂಡತಿಗೆ ಹೇಳಿದ್ದಕ್ಕೆ.. “ಮೆಸೇಜ್ ಮಾಡು ಸಂಜೆ ಬರುವಾಗ ಮೆಡಿಸಿನ್ ತರುವೆ ಎಂದ ಉಡಾಫೆತನಕ್ಕೆ.. ಹಾಗೆ ಹೇಳಿಯೂ ಮನೆಗೆ ಬರಿಗೈಯಲ್ಲಿ ಬಂದಾಗ “ಅಯ್ಯೋ ಮರೆತೆ..ನಾಳೆ ತಂದ್ರೆ ಆಯ್ತು…” ಎಂದು ಸ್ವಲ್ಪವೂ ಪಾಪಪ್ರಜ್ಞೆಯಿಂದ ಮರುಗದಿದ್ದಕ್ಕೆ ಅಮ್ಮ ಕ್ಷಮಿಸು. ಬಾಯಿ ಚಪಲಕ್ಕೆ ತಿನ್ನಬೇಕೆನಿಸಿದ್ದನ್ನು “”ಆರೋಗ್ಯ””ದ ಕಾಳಜಿಗಾಗಿ ಆಗೊಲ್ಲ ಎಂದು ಖಂಡಾತುಂಡವಾಗಿ ನಿರಾಕರಿಸಿ ನಿನ್ನನ್ನು ನಿರಾಶೆಗೊಳಿಸಿದ್ದಕ್ಕೆ ಅಮ್ಮ ಕ್ಷಮಿಸು.

ಕೆಲಸದ ವಿಷಯದಲ್ಲಿ ಒಮ್ಮೆಯೂ ಹಾಸಿಗೆ ಹಿಡಿದವಳಲ್ಲ..ಆಸಕ್ತಿ ಕಳೆದುಕೊಂಡವಳಲ್ಲ......
ಕೆಲಸದ ವಿಷಯದಲ್ಲಿ ಒಮ್ಮೆಯೂ ಹಾಸಿಗೆ ಹಿಡಿ ದವಳಲ್ಲ..ಆಸಕ್ತಿ ಕಳೆದುಕೊಂಡವಳಲ್ಲ……

ಕೆಲಸ ಹುಷಾರು ಮಗಾ ಎಂದಾಗಲೆಲ್ಲಾ “ಸುಮ್ಮನಿರಮ್ಮ ನನಗೆ ಗೊತ್ತು,..ನನ್ನ ಕೆಲಸ ಮಾಡಿಕೊಳ್ಳೋದು ಹೇಗೆಂದ್ಹೇಳಿ ನಿನ್ನ ಕಾಳಜಿ ಅವಮಾನಿಸಿದ್ದಕ್ಕೆ ಅಮ್ಮ ಕ್ಷಮಿಸು. -ಅಗೌರವಿಸಬೇಕೆನ್ನೋ ಉದ್ದೇಶವಿಲ್ಲದಿದ್ದರೂ ಸಲಿಗೆಗೋ..ಆತ್ಮೀಯರ ಮುಂದೆ ನಿನ್ನನ್ನು ತಮಾಷೆ ಮಾಡಿ ಕಿಂಡಲ್ ಮಾಡಿದ್ದಕ್ಕೆ ನೀನು ನೊಂದುಕೊಂಡಿರಬಹುದಾದ ಸನ್ನಿವೇಶಗಳಿಗಾಗಿ ಅಮ್ಮ ಕ್ಷಮಿಸು.

ಮೊಮ್ಮಕ್ಕಳೊಂದಿಗಿನ ನಿನ್ನ ಬಾಂಧವ್ಯ ಅರ್ಥೈಸಿಕೊಳ್ಳದೆ ಸಲುಗೆಯಲ್ಲಿದ್ದಾಗಲೆಲ್ಲಾ “ನಿನ್ನ ಮುದ್ದಿನಿಂದ ಮಕ್ಕಳು ಹಾಳಾಗ್ತವೆ ಎಂದ್ಹೇಳಿ ನಿನ್ನ ಹೊಣೆಗಾರಿಕೆಯನ್ನು ಅನುಮಾನಿಸಿದ್ದಕ್ಕಾಗಿ ಅಮ್ಮ ಕ್ಷಮಿಸು. -ನನ್ನೊಂದಿಗೆ ಇರಬೇಕೆನ್ನುವ ಆಸೆಯಲ್ಲಿ “ಊರಿಗೆ ಯಾವಾಗ ಬರ್ತಿಯೋ..ಕರ್ಕೊಂಡು ಹೋಗೊಕ್ಕೆ..” ಎಂದು ಕೇಳಿದ ಸನ್ನಿವೇಶಗಳಲ್ಲಿ “ವರ್ಕ್ ಬ್ಯುಸಿ..ಫ್ರೀ ಆದ್ಮೇಲೆ ಬರ್ತಿನಿ..ಯಾಕ್ ಅವಸರ..” ಎಂದು ಗೊಣಗಿ ನಿನ್ನಾಸೆಗೆ ತಣ್ಣೀರೆಚಿದ್ದಕ್ಕೆ ಕ್ಷಮಿಸು.

ಊಟದ ರುಚಿ ಆಚೀಚೆ ಆದಾಗ “ಎಲ್ಲೋಯ್ತು ನಿನ್ನ ಆ ಕೈ ರುಚಿ…ಅಡುಗೆ ಮಾಡೋದ್ ಬಿಟ್ರೆ ಹೀಗ್ಹೇನೆ ಆಗೋದು..” ಎಂದು ಮೂಗು ಮುರಿದು ಊಟವನ್ನೇ ಅರ್ಧಕ್ಕೆ ಬಿಟ್ಟ ನನ್ನ ಅಹಂ.. ಚರ್ಚ್-ಪುಣ್ಯಕ್ಷೇತ್ರಗಳಿಗೆ ಹೋಗ್ಬೇಕೆನ್ನೋ ನಿನ್ನ ಕನವರಿಕೆಯನ್ನು ಸಬೂಬು ಹೇಳಿ ಮುಂದೂಡಿದ ಉದಾಸೀನತೆಗೆ ಅಮ್ಮ ಕ್ಷಮಿಸು.

ಎಂಥಾ ಲಕ್ಷಣವಂತೆ ನನ್ನಮ್ಮ
ಎಂಥಾ ಲಕ್ಷಣವಂತೆ ನನ್ನಮ್ಮ….

ಮಲಗೋ ಹೊತ್ತಲ್ಲಿ ಎಲೆ ಅಡಿಕೆ ಕುಟ್ಟುತ್ತಾ ಮಾಡಿದ ಸದ್ದಿಗೆ ಇಷ್ಟೊತ್ತು ರಾತ್ರಿಯಲ್ಲೂ ಇದೆಲ್ಲಾ ಬೇಕಾ ಎಂದು ರೇಗಿದ್ದಕ್ಕೆ ಅಮ್ಮ ಕ್ಷಮಿಸು. ದಣಿದು ಬಂದಾಗಲೆಲ್ಲಾ ದಿನವಿಡೀ ದುಡಿದ ಆಯಾಸವನ್ನು ಲೆಕ್ಕಿಸದೆ ನಿನ್ನಿಂದ ಕಾಫಿ-ತಿಂಡಿ ಮಾಡಿಸಿಕೊಂಡಿದ್ದಕ್ಕೆ..-ನಿನ್ದ್ ಕಾಫಿ ತಿಂಡಿ ಊಟ ಆಯ್ತಾ ಎಂದು ಸೌಜನ್ಯಕ್ಕೂ ವಿಚಾರಿಸಿಕೊಳ್ಳದ ಅಸಡ್ಡೆಗೆ ಅಮ್ಮ ಕ್ಷಮಿಸು. ಎಷ್ಟೋ ವಿಷಯಗಳಲ್ಲಿ ತಾತ್ಸಾರ ಮಾಡಿದ್ದಕ್ಕೆ..ಎಷ್ಟೋ ಸನ್ನಿವೇಶಗಳಲ್ಲಿ ಪ್ರದರ್ಶಿಸಿದ ಅಹಂಗೆ.. ಎಷ್ಟೋ ಸಂದರ್ಭಗಳಲ್ಲಿ ನಿನ್ನ ಕಾಳಜಿ ಅರ್ಥ ಮಾಡಿಕೊಳ್ಳದೆ ಅರಚಿ-ಅಬ್ಬರಿಸಿದ್ದಕ್ಕೆ ಅಮ್ಮ ಕ್ಷಮಿಸು ನಮಗಾಗಿ ಜೀವಮಾನವೆಲ್ಲಾ ದುಡಿದು ದಣಿದಿದ್ದಿಯ..ಎನ್ನೋದನ್ನು ಅರ್ಥ ಮಾಡಿಕೊಳ್ಳದೆ ನಿನ್ನನ್ನು ಅಗೌರವಿಸಿದ್ದಕ್ಕೆ ಅಮ್ಮ ಕ್ಷಮಿಸು.

ಆಕೆ ನಗುವಿನಿಂದಲೇ ಹೂಗಳಿಗೆ ಅಂದ-ಚೆಂದ-ಘಮಲು....
ಆಕೆ ನಗುವಿನಿಂದಲೇ ಹೂಗಳಿಗೆ ಅಂದ-ಚೆಂದ-ಘಮಲು….

ಆಸ್ಪತ್ರೆಯಲ್ಲಿದ್ದಾಗ ಕಹಿ ಎನ್ನುವ ಕಾರಣಕ್ಕೆ ಔಷಧಿ ತೆಗೆದುಕೊಳ್ಳೊಲ್ಲ ಎಂದಯ ಹಠಕ್ಕೆ ಬಿದ್ದಾಗ, ನರ್ಸ್ ಗಳನ್ನು ಕರೆಯಿಸಿ ಬೈಸಿದ್ದಕ್ಕೆ ಅಮ್ಮ ಕ್ಷಮಿಸು ಆಸ್ಪತ್ರೆ ಸಹವಾಸ ಬೇಡ್ರೋ..ನನ್ನನ್ನು ಸಾಯಿಸಿಬಿಡ್ತಾರೆ..ಅವರು ಚುಚ್ಚುವ ಸೂಜಿ,ನಾಡಿ ಸಿಗದಿದ್ದಾಗ ಸೂಜಿ ಚುಚ್ಚಿ..ಚುಚ್ಚಿ ನೀಡುವ ನೋವು ತಡೆಯಲಿಕ್ಕಾಗಲ್ರೋ..ಮನೆಯಲ್ಲೇ ಪ್ರಾಣ ಬಿಟ್ ಬಿಡ್ತೇನೆ ಎಂದಾಗ ಎದೆ ಝಲ್ಲೆನಿಸುವಂತೆ ಸಿಟ್ಟಿನಿಂದ ಅಬ್ಬರಿಸಿದ್ದಕ್ಕೆ ಅಮ್ಮ ಕ್ಷಮಿಸು  ಅವರು ಕೊಡೋ ಆಹಾರ ನಾಲಿಗೆಯಲ್ಲಿ ಇಡಲಿಕ್ಕೆ ಆಗಲ್ರೋ..ರುಚಿರುಚಿಯಾಗಿ ಏನಾದ್ರೂ ಕೊಡ್ರೋ ಎಂದಾಗ ಆರೋಗ್ಯಕ್ಕಿಂತ ನಾಲಿಗೆ ರುಚಿ ಹೆಚ್ಚಾಯ್ತಾ ಎಂದು ಬೈಯ್ದು ಮೌನಿಯಾಗುವಂತೆ ಮಾಡಿದ್ದಕ್ಕೆ ಅಮ್ಮ ಕ್ಷಮಿಸು.

ಕೊನೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ನಿನ್ನನ್ನು ಅಕ್ಷರಶಃ ಒಬ್ಬಂಟಿಯಾಗಿಸಿದ್ದಕ್ಕೆ ,ಜೀವನ್ಮರಣಗಳ ನಡುವೆ ಹೋರಾಡುವಾಗ ನೀನೊಬ್ಬಳೇ ಒಂಟಿಯಾಗಿ ನೋವನ್ನು ಸಹಿಸಿಕೊಳ್ಳುವಂತೆ ಮಾಡಿದ್ದಕ್ಕೆ ಅಮ್ಮ ಕ್ಷಮಿಸು.. ಕೊನೇ ದಿನಗಳಲ್ಲಿ ನಿನ್ನ ಆರೈಕೆ-ಕಾಳಜಿ ಬಗ್ಗೆ ಗೊತ್ತಿದ್ದೋ..ಗೊತ್ತಿಲ್ಲದೆಯೋ ತೋರಿರಬಹುದಾದ ನಿರ್ಲಕ್ಷ್ಯಕ್ಕೆ ಅಮ್ಮ ಕ್ಷಮಿಸು.

ಆಕೆಯಿಂದ ಹೂಗೆ ನಗುವೋ..ನಗುವಿಂದ ಹೂಗೆ ಸೊಬಗೋ..
ಆಕೆಯಿಂದ ಹೂಗೆ ನಗುವೋ..ನಗುವಿಂದ ಹೂಗೆ ಸೊಬಗೋ….

ಅದೆಷ್ಟೋ ಸಂದರ್ಭಗಳಲ್ಲಿ ನಿನ್ನನ್ನು  ಬೈದಿದ್ದಕ್ಕೆ.. ರೇಗಿದ್ದಕ್ಕೆ..ಗೊಣಗಿದ್ದಕ್ಕೆ.. ಗದರಿದ್ದಕ್ಕೆ.. ಅವಮಾನಿಸಿದ್ದಕ್ಕೆ..ಅನಾದಾರಿಸಿದ್ದಕ್ಕೆ..ತಲೆ ತಗ್ಗಿಸಿದ್ದಕ್ಕೆ-ಮನಸ್ಸನ್ನು ಕುಗ್ಗಿಸಿದ್ದಕ್ಕೆ, ನಿರ್ಲಕ್ಷ್ಯಿಸಿದ್ದಕ್ಕೆ.. ನಿನ್ನ ಕಾಳಜಿ ಮಾಡದ .ತಾತ್ಸಾರ ಮಾಡಿದ್ದಕ್ಕೆ..ನಿನ್ನನ್ನು ಅರ್ಥೈಸಿಕೊಳ್ಳದ್ದಕ್ಕೆ.ನಿನ್ನ ಬದುಕಿನ ಅಗಾಧತೆಯನ್ನು ಅರ್ಥ ಮಾಡಿಕೊಳ್ಳದ್ದಕ್ಕೆ-ನಿನ್ನ ವ್ಯಕ್ತಿತ್ವವನ್ನು ಗೌರವಿಸದ್ದಕ್ಕೆ-ಭಾವನೆಗಳನ್ನು ಅರ್ಥ ಮಾಡಿಕೊಳ್ಳದ್ದಕ್ಕೆ..ನಿನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದ್ದಕ್ಕೆ,.ನಿನ್ನ ನಿರೀಕ್ಷೆಗಳಿಗೆ ಸ್ಪಂದಿಸಲಾಗದ್ದಕ್ಕೆ..ಸಣ್ಣ ಪುಟ್ಟ ಆಸೆ ಈಡೇರಿಸಲಾಗದ್ದಕ್ಕೆ.. ಕಡೆಯದಾಗಿ ನಿನ್ನನ್ನು ಉಳಿಸಿಕೊಳ್ಳಲಾಗದೆ ಹೋದ ನಮ್ಮ ವೈಫಲ್ಯ- ಅಸಹಾಯಕತೆಗಳಿಗೆಲ್ಲಾ ನಿನ್ನದೊಂದು ಕ್ಷಮೆ ಇರಲಿ ಅಮ್ಮ..

ಬಾಚಿ ತಬ್ಬಿದರೆ ಮಲ್ಲಿಗೆ ತೋಟವೂ ಮೈದೆಳೆದುಬಿಡುತ್ತಿತ್ತು
ಬಾಚಿ ತಬ್ಬಿದರೆ ಮಲ್ಲಿಗೆ ತೋಟವೂ ಮೈದೆಳೆದುಬಿಡುತ್ತಿತ್ತು….

ಇಂದು ಕ್ಷಮೆ ಕೇಳೊಕ್ಕೆ ಮನಸು ತುಡಿಯುತ್ತಿದೆ…ಆದ್ರೆ ಕ್ಷಮಿಸಬೇಕಾದ ನೀನೇ ನಮ್ಮೊಡನಿಲ್ಲ.. ಸಾಧ್ಯವಾದರೆ ಕ್ಷಮಿಸಿ ಬಿಡು ..ಆದ್ರೆ ಬಿಟ್ಟು ಹೋಗುವಾಗ ಒಂದೇ ಒಂದು ಮಾತನ್ನು ಹೇಳದೆ, ಸಣ್ಣ ಸುಳಿವನ್ನೂ ನೀಡದೆ ದೇಹ ತೊರೆದು ಹೊರಟುಬಿಟ್ಯಲ್ಲ ಅಮ್ಮ..ನಮ್ಮನ್ನೆಲ್ಲಾ ಅನಾಥಗೊಳಿಸಿ ಉಸಿರು ಚೆಲ್ಲಿದ ನಿನ್ನನ್ನು ಹೇಗೆ ಕ್ಷಮಿಸಲಿ..?.ಗೊತ್ತಾಗುತ್ತಿಲ್ಲ..

ಬದುಕಿದಿದ್ದರೆ ನನ್ನೆಲ್ಲ ತಪ್ಪು-ಅಕ್ಷಮ್ಯ-ಸಣ್ಣತನಗಳಿಗೆಲ್ಲಾ ನಿನ್ನ ಮುಂದೆ ಮಂಡಿಯೂರಿ ಕ್ಷಮೆ ಕೇಳಿ ಹೃದಯ ಹಗುರಾಗಿಸಿಕೊಳ್ಳುತ್ತಿದ್ದೆ.. ಈಗ ಸಿಕ್ಕವರೆ ಬಳಿಯೆಲ್ಲಾ ನಿನ್ನದೇ ಮಾತು,,, ನನ್ನಮ್ಮ ಗ್ರೇಟ್ ಎಂದು ಅಭಿಮಾನದಿಂದ ಹೇಳುತ್ತೇನೆ.

ದಿನಗಳು ಹಾಗೆಯೇ ಉರುಳುತ್ತಿವೆ,,ಆದರೆ ಮಾತುಗಳು ಮುಗಿಯುತ್ತಿಲ್ಲ..ನೀನೆಂದು ಸಿಗೊಲ್ಲ ಎನ್ನುವ ಕಟು ಸತ್ಯ ಗೊತ್ತಾಗಿರುವಾಗ ಕಣ್ಣೆದುರಿಗಿರುವ ಅದೆಷ್ಟೋ ಅಮ್ಮಂದಿರಲ್ಲಿ ನಿನ್ನನ್ನು ಹುಡುಕುತ್ತಿದ್ದೇನೆ..ಅಮ್ಮಾ ಐ ಲವ್ ಯೂ.

Spread the love

Related Articles

Leave a Reply

Your email address will not be published.

Back to top button
Flash News