EX-CM YEDIYURAPPA QUITS SHIKARIPRUA FOR SON VIJAYENDRA “ಕ್ಷೇತ್ರ ತ್ಯಾಗ” ಬಿಎಸ್ ವೈ ರಾಜಕೀಯ“ಮಹಾನಿರ್ಗಮನ”ದ ಮುನ್ಸೂಚನೆನಾ.?!

ಯಡಿಯೂರಪ್ಪ ಪಾಲಿಗೆ ರಾಜಕೀಯ ಪ್ರಯೋಗಶಾಲೆಯಾಗಿದ್ದ “ಶಿಕಾರಿಪುರ” ತ್ಯಾಗ ಮಾಡಿದ್ದರ ಹಿಂದಿನ ಲೆಕ್ಕಾಚಾರವೇನು,,?! ಬಿಜೆಪಿ ಪಾಲಿಗೆ ಯಡಿಯೂರಪ್ಪ ಮುಗಿದ ಅಧ್ಯಾಯನಾ..?!

0

ಶಿವಮೊಗ್ಗ/ಶಿಕಾರಿಪುರ/ಬೆಂಗಳೂರು: ಅದು ಅಂದುಕೊಂಡಷ್ಟು ಸುಲಭವೂ ಅಲ್ಲ, ಸಲೀಸೂ ಅಲ್ಲ.. ಅನುಭವಿಸಿದವರಿಗೇ ಗೊತ್ತು ಅದರ ಯಾತನೆ.ನೋವು-ಸಂಕಟ..ಬಹುಷಃ ಯಡಿಯೂರಪ್ಪ ಅವರದು ಅದೇ ಸ್ತಿತಿ..ತನ್ನ ವ್ಯಕ್ತಿಗತವಾದ ಬದುಕು-ರಾಜಕೀಯ ಭವಿಷ್ಯವನ್ನು ರೂಪಿಸಿದ,ಅಷ್ಟೇ ಅಲ್ಲ, ಮುಖ್ಯಮಂತ್ರಿ ಗಾಧಿಯಂಥ ಮಹೋನ್ನತ ಸ್ಥಾನ ಅಲಂಕರಿಸೊಕ್ಕೆ ಕಾರಣವಾದ ಕ್ಷೇತ್ರ ತೊರೆಯುವುದೆಂದರೆ ಅದು ಅಕ್ಷರಶಃ ಕರುಳು ಹಿಂಡುವ ಅನುಭವ. ತಾಯಿಯಿಂದ ಮಗುವನ್ನು ಬೇರ್ಪಡಿಸಿದಷ್ಟೇ ನೋವು-ಯಾತನೆ ನೀಡುವಂಥ ಅನುಭವ.

ಏಕೆಂದ್ರೆ ಶಿಕಾರಿಪುರದೊಂದಿಗೆ ಬಿ.ಎಸ್ ಯಡಿಯೂರಪ್ಪ ಅವರಿಗಿದ್ದುದು ಕೇವಲ ಕ್ಷೇತ್ರ ಎನ್ನುವ ಹಿತಾಸಕ್ತಿಯಲ್ಲ,ಬದಲಿಗೆ “ಕರುಳುಬಳ್ಳಿ”ಯ ಸಂಬಂಧ-ಭಾವನಾ ತ್ಮಕ ನಂಟು-ಅಂತರಾಳದ ಒಡನಾಟ- ಅವರ್ಣನೀಯ ಹಾಗೂ ಅವಿನಾಭವವಾದಂಥ ಬಾಂಧವ್ಯ.ಇಂಥಾ ಶಿಕಾರಿಪುರದಂಥ ಶಿಕಾರಿಪುರವನ್ನು ಮಗನಿಗಾಗಿ ತ್ಯಾಗ ಮಾಡುವ ನಿರ್ದಾರ ಪ್ರಕಟಿಸುವಾಗ ಯಡಿಯೂರಪ್ಪ ಹೃದಯ ಭಾರಮಾಡಿಕೊಳ್ಳದೆ ಇರಲಿಕ್ಕಿಲ್ಲ..ಇಲ್ಲ ಎನ್ನುವುದು ಆತ್ಮವಂಚನೆಯಾಗಬಹುದೇನೋ.

ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡುವ ದಿಢೀರ್ ನಿರ್ದಾರ ಪ್ರಕಟಿಸಿದ್ದು ರಾಜಕೀಯ ವಿದ್ಯಾಮಾನಗಳ ಮಟ್ಟಿಗೆ ಅಚ್ಚರಿ-ಅಘಾತಕಾರಿಯೇ ಸರಿ.ಮಗನಿಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ಮನಸಿನ ಇಂಗಿತವನ್ನು ಆತ್ಮೀಯರ ಬಳಿ ಹೇಳಿಕೊಂಡಿದ್ದರೆನ್ನುವುದನ್ನು ಬಿಟ್ಟರೆ ಅದನ್ನೆಲ್ಲೂ ಸಾರ್ವಜನಿಕಗೊಳಿಸಿರಲಿಲ್ಲ. .ಶಿಕಾರಿಪುರ ಬಿಟ್ಟುಕೊಡೋದು ನಿಕ್ಕಿಯಾಗಿದ್ದರೂ ಅದು ಮುಂದಿನ ದಿನಗಳಲ್ಲಿ ಸಾದ್ಯವಾಗಬಹುದೇನೋ ಎಂದೇ ವಿಶ್ಲೇಷಿಸಲಾಗ್ತಿತ್ತು.

ಏಕೆಂದರೆ ಯಡಿಯೂರಪ್ಪ ಈ ಇಳಿ ವಯಸ್ಸಿನಲ್ಲೂ ಎಲ್ಲೂ ರಾಜಕೀಯ ನಿವೃತ್ತಿಯ ಮಾತನ್ನಾಗಲಿ, ರಾಜಕೀಯದ ಬೆಳವಣಿಗೆಯಿಂದ ಬೇಸತ್ತಿರುವ ಬಗ್ಗೆಯಾಗಲಿ ಅಥವಾ ಶಿಕಾರಿಪುರವನ್ನು ತ್ಯಾಗ ಮಾಡುತ್ತಿರುವ ವಿಚಾರವನ್ನಾಗಲಿ ಎಲ್ಲೂ ಹೇಳಿರಲಿಲ್ಲ.ಆದ್ರೆ ಯಾರೂ ಊಹಿಸಿರದಂಥ ಸನ್ನಿವೇಶದಲ್ಲಿ ತಮ್ಮ ನಿರ್ದಾರ ಪ್ರಕಟಿಸಿದ್ದಾರೆ.ಮನಸಿನಲ್ಲಿ ನೋವಿದ್ದರೂ ತುಂಬಾ ಸ್ಥಿತಪ್ರಜ್ಞರಾಗಿಯೇ ತ್ಯಾಗದ ನಿರ್ದಾರವನ್ನು ಪ್ರಕಟಿಸಿದರು.ಅಷ್ಟೇ ಅಲ್ಲ,ನನಗಿಂತ ಹೆಚ್ಚಿನ ಅಂತರದಲ್ಲಿ ಮಗನನ್ನು ಗೆಲ್ಲಿಸಿ ಕೈ ಹಿಡಿಯಿರಿ ಎಂದು ಶಿಕಾರಿಪುರ ಜನತೆಯನ್ನು ವಿನಮ್ರತೆಯಿಂದ ಕೇಳಿಕೊಂಡಿದ್ದು ಇವತ್ತಿನ ರಾಜಕೀಯ ವಿದ್ಯಾಮಾನದ ಬಿಗ್ ಹೈಲೈಟ್.

ಶಿಕಾರಿಪುರ ಕ್ಷೇತ್ರವನ್ನು ತಮ್ಮ ರಾಜಕೀಯ ಅಖಾಡ ಮತ್ತು ಪ್ರಯೋಗಶಾಲೆಯನ್ನಾಗಿಸಿಕೊಂಡವ್ರು ಯಡಿಯೂರಪ್ಪ.ಈ ಕ್ಷೇತ್ರ ಅವರಿಗೆ ರಾಜಕೀಯದ ಬೀಜಾಕ್ಷರ ಗಳನ್ನು ಕಲಿಸಿದೆ.ಪಟ್ಟುಗಳನ್ನು ಕರಗತ ಮಾಡಿಸಿದೆ.ಅವರನ್ನು ಒಬ್ಬ ಪ್ರಬುದ್ಧ ರಾಜಕಾರಣಿಯನ್ನಾಗಿ ರೂಪಿಸಿದೆ. ಗೆದ್ದ ಅಮಲಿನಲ್ಲಿ ಜನಹಿತ ಮರೆತಾಗ ಸೋಲಿನ ಕಹಿಪಾಠ ಕಲಿಸಿದೆ. ಆ ಮೂಲಕ ಅವರ ವ್ಯಕ್ತಿತ್ವವನ್ನು ಮಾಗಿಸಿದೆ.ಅದೇ ಕ್ಷೇತ್ರ ಸೋಲಿ ನಿಂದ ಕಂಗೆಟ್ಟಾಗ ಗೆಲವಿನ ನಗೆ ಬೀರಿಸಿದೆ.ಹೀಗೆ ಸೋಲು ಗೆಲುವುಗಳೆರಡನ್ನು ಸಮಚಿತ್ತದಿಂದ ಸ್ವೀಕರಿಸುವ ಸ್ಥಿತಪ್ರಜ್ಞೆಯನ್ನು ಮೂಡಿಸಿಕೊಟ್ಟಿದ್ದೇ ಶಿಕಾರಿಪುರ.

ತನ್ನ ಬದುಕಿನಲ್ಲಿ ಎಲ್ಲವೂ ಆಗಿದ್ದ ಶಿಕಾರಿಪುರವನ್ನು ಹೆಚ್ಚು ಪ್ರೀತಿಸಿದವರು ಯಡಿಯೂರಪ್ಪ. ಮಂಡ್ಯದ ಬೂಕನಕೆರೆ ಹುಟ್ಟೂರಾದ್ರೂ ಶಿಕಾರಿಪುರದ ಬಗ್ಗೆ ಎಲ್ಲಿಲ್ಲದ ವಿಶೇಷ ಪ್ರೀತಿ.ಆಕರ್ಷಣೆ. ನೀವು ನಂಬಲಿಕ್ಕಿಲ್ಲ. ಮುಖ್ಯಮಂತ್ರಿಯಾಗಿದ್ದಾಗಲು ತನ್ನನ್ನು ಹುಡುಕಿಕೊಂಡು ಶಿಕಾರಿಪುರದಿಂದ ಯಾರಾದ್ರೂ ಬಂದ್ರೆ ಅವರನ್ನು ಭೇಟಿ ಮಾಡದೆ ಅವರನ್ನು ವಾಪಸ್ ಕಳುಹಿಸಿದವರಲ್ಲ.ತಮ್ಮ ಕಚೇರಿ ಸಿಬ್ಬಂದಿಗೂ ಇದೇ ರೀತಿಯ “ಫರ್ಮಾನ್” ಹೊರಡಿಸಿದ್ದರೆನ್ನುವುದನ್ನು ಅನೇಕರೇ ಹೇಳ್ತಾರೆ. ಇಂಥಾ ಶಿಕಾರಿಪುರದಿಂದ ಮುಂದೆಂದೂ ತಾನು ಸ್ಪರ್ಧಿಸುವುದಿಲ್ಲ ಎಂದು ಅಧೀಕೃತವಾಗಿ ಘೋಷಿ ಸುತ್ತಾರೆಂದ್ರೆ ಅಂತದ್ದೊಂದು ನಿರ್ದಾರ ಕೈಗೊಳ್ಳುವ ಹಿಂದೆ ಅವರು ಅನುಭವಿಸಿರಬಹುದಾದ ಯಾತನೆ ಎಂತದ್ದಿರಬಹುದೆನ್ನುವುದನ್ನು ಊಹಿಸಬಹುದು.

ತನ್ನ ಎಲ್ಲಾ ಮಕ್ಕಳಿಗೆ ಬದುಕಿನ ನೆಲೆಯನ್ನು ಕಲ್ಪಿಸಿದ ಯಡಿಯೂರಪ್ಪ ಅವರಿಗೆ ಹೆಚ್ಚೆಚ್ಚು ಕಾಡಹತ್ತಿದ್ದು ಡೋಲಾಯಮಾನವಾಗಿರುವ ಕಿರಿಯ ಮಗ ವಿಜಯೇಂದ್ರನ ರಾಜಕೀಯ ಅಸ್ತಿತ್ವ. ಮೇಲ್ನೋಟಕ್ಕೆ ವಿಜಯೇಂದ್ರಗೆ ಇದೆ ಎಂದೆನಿಸುವ “ಹವಾ-ವರ್ಚಸ್ಸಿನ ಆಯಸ್ಸು ತಾನಿರುವವರೆಗಷ್ಟೇ ಎನ್ನುವುದು ಯಡಿಯೂರಪ್ಪ ಅವರಿಗೆ ಚೆನ್ನಾಗಿ ಗೊತ್ತಿದೆ. ಅಲ್ಲದೇ ವಿವಿಧ ಕಾರಣಗಳಿಂದ ಪಕ್ಷದೊಳಗೇ ಮಗನನ್ನು ತುಳಿಯುವ ಪ್ರಯತ್ನಗಳಾಗುತ್ತಿರುವುದು ಕೂಡ ವಿಜಯೇಂದ್ರ ಬಗ್ಗೆ ಅಪ್ಪ ಚಿಂತಿಸುವಂತೆ ಮಾಡಿತ್ತು.ತಾನು ಬದುಕಿರುವವರೆಗಷ್ಟೇ ತನ್ನ ಮಕ್ಕಳಿಗೆ ಬೆಲೆ ಎನ್ನುವ ಸತ್ಯ ಮನದಟ್ಟು ಮಾಡಿಕೊಂಡಿದ್ರು ಯಡಿಯೂರಪ್ಪ.

ಹಿರಿಯ ಮಗ ರಾಘವೇಂದ್ರ ಹೇಗೋ ಸಂಸದನಾಗಿ ಜನರ ಮನಸಿನಲ್ಲಿ ಉಳಿಯುವ ಕೆಲಸ ಮಾಡಿ ತನ್ನ ರಾಜಕೀಯ ಭವಿಷ್ಯವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಆದ್ರೆ ಕಿರಿಯ ಮಗ ವಿಜಯೇಂದ್ರನ ಸ್ಥಿತಿ ಹಾಗಿಲ್ವೇ..? ಅವರ ಬೆಳವಣಿಗೆಗೆ ಎದುರಾಗುತ್ತಿರುವ ತೊಡಕುಗಳು ಭವಿಷ್ಯದ ದೃಷ್ಟಿಯಿಂದ ಆತಂಕ ಕಾರಿಯಂತಿದೆ ಎನ್ನುವುದನ್ನು ಅರಿತ ಹಿನ್ನಲೆಯಲ್ಲೇ ಯಡಿಯೂರಪ್ಪ ಮಹತ್ವದ ನಿರ್ದಾರಕ್ಕೆ ಬಂದ್ ಬಿಟ್ರು ಅನ್ಸುತ್ತೆ. ತಾನು ಗಟ್ಟಿಯಿರುವಾಗಲೇ ಮಗನಿಗೊಂದು ರಾಜಕೀಯ ಅಸ್ತಿತ್ವ-ಭವಿಷ್ಯ ರೂಪಿಸಲು ನಿರ್ಧರಿಸಿದ್ರು.ಅದಕ್ಕಾಗಿ ತಮ್ಮ ಕ್ಷೇತ್ರವಾದ ಶಿಕಾರಿಪುರ ವನ್ನೇ ಧಾರೆ ಎರೆದರೆ ಎಲ್ಲಾ ರೀತಿಯಲ್ಲೂ ಸಹಕಾರಿಯಾಗುತ್ತದೆ ಎನ್ನುವುದನ್ನು ಖಾತ್ರಿಮಾಡಿ ಕೊಂಡು ಅದನ್ನು ಅಧೀಕೃತವಾಗಿ ಘೋಷಿಸಿಯೇ ಬಿಟ್ಟಿದ್ದಾರೆ.

ಇಂತದ್ದೊಂದು ನಿರ್ದಾರಕ್ಕೆ ಕಾರಣವೇನು..? ಯಡಿಯೂರಪ್ಪ ಇಂತದ್ದೊಂದು ನಿರ್ದಾರ ತೆಗೆದುಕೊಳ್ಳುವ ಹಿಂದೆ ಪಕ್ಷದಲ್ಲಿ ಅವರನ್ನು ನಡೆಸಿಕೊ ಳ್ಳುತ್ತಿದ್ದ ರೀತಿಯೂ ಒಂದ್ ಕಾರಣವೇ..? ಇದ್ದರೂ ಇರಬಹುದು. ಹಾಗೆನೇ ವಯೋವೃದ್ಧರಿಗೆ 2023 ರ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಫರ್ಮಾನ್ ಹೈಕಮಾಂಡ್ ನಿಂದ ಘೋಷಣೆಯಾದ್ರೆ ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಬೇಕಾಗುತ್ತದೆ..ಹಾಗಾಗಿ ಪಕ್ಷದಲ್ಲಿ ಬೇಡಿಕೆ ಇರುವಾಗಲೇ ಗೌರಯುತವಾಗಿ ಮಹತ್ವದ್ದನಿಸುವಂಥ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂಬ ನಿರ್ದಾರಕ್ಕೆ ಬಂದು ತನ್ನ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡುವ ಘೋಷಣೆ ಮಾಡಿದ್ರು ಎನ್ನುವ ವಿಶ್ಲೇಷಣೆ-ವ್ಯಾಖ್ಯಾನ ಕೇಳಿಬಂದಿವೆ.

ಪಕ್ಷದಲ್ಲಿ ಬೇಡಿಕೆ ಕಳೆದುಕೊಂಡ್ರಾ ಯಡಿಯೂರಪ್ಪ..ಬಹುತೇಕ ಮೂಲಗಳು ಹೇಳ್ತಿರೋದೇ ಅದು. ಯೆಡ್ಡಿಗೆ ಮೊದಲಿದ್ದ ಬೆಲೆ ಸಿಗ್ತಿಲ್ಲ.ಸಿಎಂ ಆದಿಯಾಗಿ ಸಂಪುಟದ ಸಹದ್ಯೋಗಿಗಳಿಂದ ಸಿಗ್ತಿರೋ ಗೌರವವೂ ಅಷ್ಟಕ್ಕಷ್ಟೆ ಅಂತೆ.ಸದಾ ಬೇಡಿಕೆಯಲ್ಲಿದ್ದ ಯಡಿಯೂರಪ್ಪ ಮನೆಯಲ್ಲಿ ಒಂಟಿಯಾಗಿ ಕೂರುವಂತಾಗಿದ್ದುದು ಸಹಜವಾಗೇ ಇಂಥಾ ನಿರ್ಣಯಗಳಿಗೆ ಕೈ ಹಾಕುವಂತೆ ಮಾಡಿದ್ರೂ ಆಶ್ವರ್ಯವಿಲ್ಲ.ತನಗಾಗುತ್ತಿರುವ ಮುಜುಗರದ ಸ್ಥಿತಿಗೆ ಬಂಡಾಯ ಎದ್ದು ನೂತನ ಪಕ್ಷ ಕಟ್ಟೋ ಸ್ಥಿತಿಯಲ್ಲೂ ಅವರಿಲ್ಲ..

ಹೊಸ ಪಕ್ಷ ಕಟ್ಟಿದ್ರೆ ಏನಾಗಬಹುದೆನ್ನುವ ಪಾಠವೂ ಕೆಜೆಪಿ ಕಟ್ಟಿ ಕಲಿತಿದ್ದಾಗಿದೆ.ವಯಸ್ಸೂ ಅದಕ್ಕೆ ಸಹಕರಿಸುವುದಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಹೈಕಮಾಂಡ್ ಎದುರಾಕಿಕೊಂಡು ಯಡಿಯೂರಪ್ಪಂಗಾಗಿ ಪಕ್ಷ ತ್ಯಜಿಸುವ ರಿಸ್ಕ್ ನ್ನು ಮೊದಲಿದ್ದಂತೆ ಈಗ ತೆಗೆದುಕೊಳ್ಳೊಕ್ಕೆ ಯಡಿಯೂರಪ್ಪ ಅವರ ಬಹುತೇಕ ಬೆಂಬಲಿಗರೇ ಸಿದ್ಧರಿಲ್ಲ..ಈ ಎಲ್ಲಾ ಅಂಶಗಳನ್ನು ಅರ್ಥ ಮಾಡಿಕೊಂಡಿಯೇ ಯಡಿಯೂರಪ್ಪ ಕ್ಷೇತ್ರವನ್ನು ತ್ಯಾಗ ಮಾಡುವ ಮೂಲಕ ಸೇಫ್ ಗೇಮ್ ಪ್ಲೇ ಮಾಡಿದರೆಂದು ಪಕ್ಷದೊಳಗಿನವರೇ ಮಾತನಾಡಿಕೊಳ್ಳುತ್ತಿದ್ದಾರೆ.

ಇಂತದ್ದೊಂದು ನಿರ್ದಾರ ಪಕ್ಷದಲ್ಲಿ ಅವರ ಗೌರವ ಹೆಚ್ಚಿಸಿದೆ.ಅವರನ್ನು ತ್ಯಾಗಮಯಿ ಎಂದು ಕೊಂಡಾಡುವಂತೆ ಮಾಡಿದೆ.ಆದ್ರೆ ವಯಸ್ಸಿನ ಕಾರಣದಿಂದ ರಾಜಕೀಯ ನಿವೃತ್ತಿ ಪಡೆಯೊಕ್ಕೆ ಎಲ್ಲಾ ರೀತಿಯಲ್ಲೂ ಅರ್ಹ ಇರುವ ಅದೆಷ್ಟೋ ಬಿಜೆಪಿ ನಾಯಕರ( ಉದಾಹರಣೆಗೆ ಕೆ.ಎಸ್.ಈಶ್ವರಪ್ಪ.?!) ಎದೆಯಲ್ಲಿ ನಡುಕ ಮೂಡಿಸಿರುವುದು ಕೂಡ ಸತ್ಯ.ಯಡಿಯೂರಪ್ಪ ಅವರಂಥ ಮಹಾನ್ ನಾಯಕನೇ ಕ್ಷೇತ್ರ ಬಿಟ್ಟುಕೊಡುವುದಾಗಿ ಘೋಷಿಸಿರುವಾಗ “ನಿಮಗೇನಾಗಿದೆ” ಎಂದು ಪ್ರಶ್ನಿಸುವಂತೆ ಮಾಡಿದೆ ಎನ್ನುವುದು ಕೂಡ ಅಷ್ಟೇ ವಾಸ್ತವ.

ಕ್ಷೇತ್ರದ ತ್ಯಾಗ..ರಾಜಕೀಯ ವಿದಾಯದ ಮುನ್ಸೂಚನೆನಾ..?ಯಡಿಯೂರಪ್ಪ ಅವರ ಕ್ಷೇತ್ರ ತ್ಯಾಗದ ಘೋಷಣೆ ಹೀಗೂ ಒಂದ್ ಅನುಮಾನ ಮೂಡಿಸಿರುವುದು ಕೂಡ ಸತ್ಯ.ಕ್ಷೇತ್ರ ಬಿಟ್ಟುಕೊಟ್ಟ ಮೇಲೆ “ವಾಟ್ ನೆಕ್ಸ್ಟ್” ಎನ್ನುವ ಪ್ರಶ್ನೆ ಸಹಜವಾಗೇ ಸೃಷ್ಟಿಯಾಗಿದೆ. ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳೋದು ಕಷ್ಟ.ಆ ಮನಸ್ಥಿತಿಯಲ್ಲಿ ಅವರು ಇಲ್ವೇ ಇಲ್ಲ.ಸಂಸದ ಸ್ಥಾನಕ್ಕೂ ನೋ ಎಂದು ಹೇಳಿಯಾಗಿದೆ. ಹೋಗ್ಲಿ ಯಾವುದಾದ್ರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿಸಿದ್ರೆ ಅದಕ್ಕೂ ನೋ ಎಂದಿದ್ದಾರಂತೆ. ಪಕ್ಷದೊಳಗೆ ಗೌರವಯುತ ಸ್ಥಾನ ಕೊಟ್ರೆ,ಮುಖ್ಯಮಂತ್ರಿ ಸ್ಥಾನವನ್ನೇ ಅಲಂಕರಿಸಿಯಾಗಿದೆ..ಅದಕ್ಕಿಂತ ಇನ್ನ್ಯಾವ ಸ್ಥಾನ ಕೊಡ್ಲಿಕ್ಕೆ ಸಾಧ್ಯ ಎನ್ನುವ ಪ್ರಶ್ನೆ ಕೂಡ ಸೃಷ್ಟಿಯಾಗ್ತದೆ..

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ಗಮನಿಸಿದ್ರೆ ಬಹುತೇಕ ಅದು ಮುಗಿದ ಅಧ್ಯಾಯ ಎಂಬ ಉತ್ತರ ದೊರೆಯುತ್ತದೆ.ಬೆಲೆ ಇರುವಾಗಲೇ ಗೌರವಯುತ ವಿದಾಯ ಪಡೆಯೋದು ಸೂಕ್ತ ಎನ್ನುವ ನಿರ್ದಾರಕ್ಕೂ ಬಂದಿದ್ದಾರಂತೆ.ಹಾಗಾಗಿ ಯಡಿಯೂರಪ್ಪ ಅವರ ಕ್ಷೇತ್ರ ತ್ಯಾಗ ರಾಜಕೀಯ ಯುಗಾಂತ್ಯದ ಮುನ್ಸೂಚನೆನಾ..ರಾಜಕೀಯ ಸನ್ಯಾಸದ ಸಾಧ್ಯತೆಗಳನ್ನು ಸಾರಿ ಹೇಳುತ್ತಿದೆಯಾ..? ಗೊತ್ತಿಲ್ಲ..ಆದ್ರೆ ಪಕ್ಷದೊಳಗಿನ ಬೆಳವಣಿಗೆಗಳು ಅದನ್ನೇ ಸಾರಿ ಹೇಳುತ್ತಿರುವಂತಿದೆ.,

ಕ್ಷೇತ್ರ ತ್ಯಾಗವೋ..!? ರಾಜಕೀಯದಿಂದ “ಮಹಾನಿರ್ಗಮನ”ವೋ?!: EX-CM YEDIYURAPPA QUITS SHIKARIPRUA FOR SON VIJAYENDRA “ಕ್ಷೇತ್ರ ತ್ಯಾಗ” ಬಿಎಸ್ ವೈ ರಾಜಕೀಯ“ಮಹಾನಿರ್ಗಮನ”ದ ಮುನ್ಸೂಚನೆನಾ.?!

Spread the love
Leave A Reply

Your email address will not be published.

Flash News