ಬೆಂಗಳೂರು:ಅದ್ಹೇಕೋ ಗೊತ್ತಿಲ್ಲ, ಕನ್ನಡ ನ್ಯೂಸ್ ಚಾನೆಲ್ಸ್ ಗಳಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ಎಣ್ಣೆ ಸೀಗೆ “ನಂಟು”.ಎರಡೂ ವಿರುದ್ಧ ದ್ರುವ…ಅನೇಕ ಸನ್ನಿವೇಶಗಳಲ್ಲಿ ನ್ಯೂಸ್ ಚಾನೆಲ್ಸ್ ಜತೆ ದರ್ಶನ್ ಕಟ್ಟಿಕೊಂಡ ದ್ವೇಷದ ಪರಂಪರೆ ಅವರ ಬಿಡುಗಡೆಗೆ ಸಿದ್ದವಾಗಿರುವ ಕ್ರಾಂತಿ ಸಿನೆಮಾದವರೆಗೂ ಬಂದು ನಿಂತಿದೆ.ಬಹುಷಃ ಅದು ಇಲ್ಲಿಗೆ ನಿಲ್ಲೋ ಲಕ್ಷಣವೂ ಇಲ್ಲ. ಏಕಂದ್ರೆ ದರ್ಶನ್ ‘ನಾನ್ಹೇಕೆ ಸ್ಸಾರಿ ಕೇಳಲಿ..” ಎಂದು ಹಿಡಿದಿರುವ ಪಟ್ಟು ಸಡಿಲಿಸುವಂತೆ ಕಾಣ್ತಿಲ್ಲ.ಹಾಗೆಂದು ನ್ಯೂಸ್ ಚಾನೆಲ್ಸ್ ಕಾಂಪ್ರಮೈಸ್ ಆದ್ವಾ..ನೋ..ಚಾನ್ಸ್..” ಕ್ರಾಂತಿ” ಸಿನೆಮಾದ ದೃಶ್ಯಗಳಿರಲಿ, ಒಂದೇ ಒಂದು ಸ್ಕ್ರಾಲ್-ಬ್ರೇಕಿಂಗ್ ಪಾಯಿಂಟ್ ಕೂಡ ಸ್ಕ್ರೀನ್ ಮೇಲೆ ಹೋಗಕೂಡದು ಎಂದು ಮ್ಯಾನೇಜ್ಮೆಂಟ್ಸ್ ಫರ್ಮಾನ್ ಹೊರಡಿಸಿವೆಯಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಪ್ರತಿಭಾನ್ವಿತ ನಟ.ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿರುವ ನಟ,ಹೆಚ್ಚು ಸಂಭಾವನೆ ಪಡೆಯುವ ನಟ..ನಟನೆಯನ್ನು ರಕ್ತಗತಗೊಳಿಸಿ ಕೊಂಡಿರುವ ಕಲಾವಿದ.ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಕಷ್ಟಪಟ್ಟು ವೃತ್ತಿಜೀವನ ರೂಪಿಸಿಕೊಂಡ ವ್ಯಕ್ತಿ.ಕಲಾವಿದರ ಕುಟುಂಬದ ಹಿನ್ನಲೆಯಿದ್ದರೂ ಚಿತ್ರರಂಗದಲ್ಲಿ ಆದ ಅವಮಾನವನ್ನು ಅನುಭವಿಸಿ ಅದನ್ನು ಮೆಟ್ಟಿನಿಂತು ಗಾಂಧಿನಗರವೇ ಬೆರಗಿನಿಂದ ನೋಡುವಂತೆ ಬೆಳೆದವರು.
ಹಾಗಾಗಿನೇ ದರ್ಶನ್ ರಿಂದ ಏನೇ ಸಣ್ಣಪುಟ್ಟ ತೊಂದರೆ-ಗೊಂದಲ-ಎಡವಟ್ಟುಗಳಾದ್ರೂ ಅದನ್ನು ಹೊಟ್ಟೆಗಾಕಿಕೊಂಡು ಸುಮ್ಮನಿರ್ತಿತ್ತು.ದರ್ಶನ್ ವೈಯುಕ್ತಿಕ-ವೃತ್ತಿ ವಿಚಾರಗಳಲ್ಲಿ ತಲೆ ಹಾಕುತ್ತಲೂ ಇಲ್ಲ..ಆದ್ರೆ ಇಂಥಾ ಕಲಾವಿದ ಮಾದ್ಯಮಗಳ ಜತೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸಂಘರ್ಷ ಸೃಷ್ಟಿಸಿಕೊಳ್ಳುತ್ತಾ ಬಂದಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ.
ಕ್ರಾಂತಿ ಸಿನೆಮಾದ ವಿಷಯಕ್ಕೆ ಬರೋದಾದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಹೈಪ್ ಕ್ರಿಯೇಟ್ ಆಗ್ತಿದೆ ಎನ್ನುವುದನ್ನು ಬಿಟ್ರೆ ಅಂತದ್ದೊಂದು ಸಿನೆಮಾ ರಿಲೀಸ್ ಆಗ್ತಿದೆಯಾ ಎನ್ನುವ ಸಂಶಯ ಮೂಡುವಂತ ಸನ್ನಿವೇಶ ಸೃಷ್ಟಿಯಾಗಿದೆ.ದರ್ಶನ್ ಸಿನೆಮಾ ರಿಲೀಸ್ ಆಗ್ತಿದೆ ಎಂದ್ರೆ ಇರ್ತಿದ್ದ ಕ್ರೇಜೆ ಇಲ್ಲವಾಗಿದೆ.ಒಂದಷ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಮಾಡ್ತಿರೋ ಪ್ರಮೋಷನ್ ಬಿಟ್ರೆ ಕ್ರಾಂತಿಯ ಮಾತೇ ಇಲ್ಲವಾಗಿದೆ.ತಾನು ಮಾಡಿಕೊಂಡ ಯಡವಟ್ಟಿನ ಬಗ್ಗೆ ದರ್ಶನ್ ಗೆ ಬೇಸರವಿದ್ದರೂ ಹಾಳಾದ ಕೋಪದ ಕೈಗೆ ಬುದ್ದಿ ಕೊಟ್ಟಿರೋದ್ರಿಂದ ತಾನೇನು ಮಾಡ್ತಿದ್ದೇನೆನ್ನೋದು ಗೊತ್ತಾಗ್ತಿಲ್ಲ ಅಷ್ಟೇ.
ರಾಬರ್ಟ್ ಸಿನೆಮಾದ ಸಂದರ್ಭದಲ್ಲಿ ಮಾಡಲಾದ ವರದಿಗಳಿಗೆ ವ್ಯಗ್ರಗೊಂಡು (ಕುಡಿಯದೆ, ಸಹಜ ಸ್ಥಿತಿಯಲ್ಲಿದಿದ್ದರೆ ದರ್ಶನ್ ಬಾಯಿಂದ ಅಷ್ಟೊಂದು ಕೆಟ್ಟಕೊಳಕಾದ ಮಾತುಗಳು ಬರ್ತಿರಲಿಲ್ಲವೇನೋ..?) ಮಾದ್ಯಮಗಳ ಮೇಲೆ ಅವರ ಹರಿಹಾಯ್ದ ರೀತಿಯೇ ಇವತ್ತು ದರ್ಶನ್ ಗೆ ಮುಳುವಾಯ್ತು ಎನ್ನಲಾಗ್ತಿದೆ.
ನ್ಯೂಸ್ ಚಾನೆಲ್ ಗಳನ್ನು ಹತ್ತಿರಕ್ಕೆ ಸುಳಿಯದಂತೆ ತನ್ನ ಸುತ್ತ ನಿರ್ಬಂಧ ಹೇರಿಕೊಂಡಿದ್ದಾರೆ ದರ್ಶನ್.ಇದರಿಂದ ಏನ್ ಸಾಧಿಸ್ತಿದ್ದಾರೆನ್ನುವುದು ಅವರಿಗೆ ಅರಿವಿಗೆ ಬರುತ್ತಿದೆ.ನ್ಯೂಸ್ ಚಾನೆಲ್ ಗಳೊಂದಿಗೆ ಸಂಬಂಧ ಚೆನ್ನಾಗಿ ಇಟ್ಟುಕೊಂಡಿದ್ದ ಪಕ್ಷದಲ್ಲಿ ಇವತ್ತು ಪ್ರಸಾರವಾಗಲಿದ್ದ ಅವರ ಸಂದರ್ಶನಕ್ಕೆ ವ್ಯಾಪಕ ಪ್ರಚಾರ ಸಿಗ್ತಿತ್ತು.ಕ್ರಾಂತಿಗೆ ಹೈಪ್ ದೊರೀತಿತ್ತು.
ಆದರೆ ಇವತ್ತು ಸೋಶಿ ಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿರುವ ಇಂಟರ್ ವ್ಯೂ ನಿರೀಕ್ಷೆಯ ಮಟ್ಟವನ್ನೂ ತಲುಪುತ್ತಿಲ್ಲ.ವೈಯುಕ್ತಿಕ ಸಂಘರ್ಷದ ಕಾರಣಕ್ಕೆ ದರ್ಶನ್ ಒಂದೊಳ್ಳೆಯ ಚಿತ್ರವನ್ನು ಕೊಲ್ಲುತ್ತಿ ದ್ದಾರಾ..ತನ್ನ ಪ್ರತಿಭೆಯನ್ನೂ ಕೊಂದುಕೊಳ್ಳುತ್ತಿದ್ದಾರಾ.. ಯಶಸ್ವಿಗೊಳ್ಳಬಹುದಾದ ಚಿತ್ರಕ್ಕೆ ನ್ಯಾಯ ದೊರಕಿಸಿಕೊಡಲಾಗುತ್ತಿಲ್ವಾ..? ಎಂದು ಬೇಸರ ವ್ಯಕ್ತಪಡಿಸ್ತಿದ್ದಾರೆ ಹಿರಿಯ ನಿರ್ಮಾಪಕರು.
ನ್ಯೂಸ್ ಚಾನೆಲ್ ಗಳು ನಮ್ಮ ಬಾಸ್ ನ್ನು ಬ್ಯಾನ್ ಮಾಡಿದ್ರೇನು..?ನಾವೇ ಸಿನೆಮಾ ಓಡಿಸ್ತೇವೆ..ಗೆಲ್ಲಿಸ್ತೇವೆ ಎಂಬ ಡಿ ಬಾಸ್ ಅಭಿಮಾನಿಗಳ ಚಾಲೆಂಜ್ ನ್ನು ಎಂಥವ್ರೂ ಮೆಚ್ಚಲೇಬೇಕು..ಅಭಿಮಾನಿಗಳು ತನ್ನ ನೆಚ್ಚಿನ ನಟನಿಗಾಗಿ ಇಂತದ್ದೊಂದು ಚಾಲೆಂಜ್ ಹಾಕಿ ಅದನ್ನು ಪ್ರಮೋಟ್ ಮಾಡ್ತಿರೋದು ಸಿನೆಮಾ ಇತಿಹಾಸದಲ್ಲಿ ಈವರೆಗೂ ಆಗಿಲ್ಲ.ದರ್ಶನ್ ಕೂಡ ಇಂತದ್ದೊಂದು ಅಭಿಮಾನಕ್ಕೆ ಮಾರು ಹೋಗಿದ್ದಾರೆ.
ಆದ್ರೆ..ಆದ್ರೆ..ಕ್ರಾಂತಿಯಂಥ ಬಿಗ್ ಬಜೆಟ್..ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನೆಮಾ ಗೆಲ್ಲೊಕ್ಕೆ ಇಷ್ಟೇ ಸಾಕಾ..? ಒಂದು ಕನ್ನಡ ಸಿನೆಮಾ ಗೆದ್ದರೆ ಅದು ಇಡೀ ಕನ್ನಡ ಚಿತ್ರರಂಗವೇ ಗೆದ್ದಂಗೆ ಅಲ್ಲವೇ..? ವರ್ಷವೆಲ್ಲಾ ಕಷ್ಟಪಟ್ಟು, ಬೆವರು ಹರಿಸಿ,ಒಂದೊಳ್ಳೆಯ ಸಿನೆಮಾ ಮಾಡಿರುವ ದರ್ಶನ್ ಗೆ ಇದು ಸರಿ ಎನಿಸ್ತಿದೆಯಾ..? ಖಂಡಿತಾ ಇಲ್ಲ.ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡಬಲ್ಲ ಕಥಾವಸ್ತು ಒಳಗೊಂಡ ಕ್ರಾಂತಿಯಂಥ ಸಿನೆಮಾಕ್ಕೆ ಇಂಥಾ ತೊಡಕು ಎದುರಾಗಿರುವುದಕ್ಕೆ ಪ್ರತಿಯೋರ್ವ ಕನ್ನಡ ಪ್ರೇಕ್ಷಕ ಬೇಸರ ವ್ಯಕ್ತಪಡಿಸಲಾರಂಭಿಸಿದ್ದಾನೆ.