ರಸ್ತೆ ಸಾರಿಗೆ ನಿಗಮ ಖಾಸಗೀಕರಣಕ್ಕೆ ಸರ್ಕಾರದ ಹುನ್ನಾರ-ಮೊದಲ ಹೆಜ್ಜೆಯೇ ಎಲೆಕ್ಟ್ರಿಕಲ್ ಬಸ್ ಗಳ ಖರೀದಿ!

0

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಖಾಸಗೀಕರಣವಾಗಲಿದೆಯೇ?ಅದನ್ನೇ ನಂಬಿಕೊಂಡಿರುವ ಸಾರಿಗೆ ನೌಕರರು ಬೀದಿ ಪಾಲಾಗಲಿದ್ದಾರಾ..ಹತ್ತಾರು ವರ್ಷಗಳಷ್ಟು ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಣೆಗೇಡಿ ಸರ್ಕಾರ ಕಾಲಗರ್ಭದೊಳಗೆ ಸಮಾಧಿ ಮಾಡಲಿದ್ಯಾ? ಆ ಮೂಲಕ ತನ್ನ ಅತ್ಯುತ್ತಮ ಹಾಗೂ ಶ್ರೇಷ್ಟ ಸೇವೆ ಮೂಲಕ ದೇಶದಲ್ಲೇ ನಂಬರ್ ಒನ್ ಎನ್ನುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಪಡೆದ ರಾಜ್ಯ ರಸ್ತೆ ಸಾರಿಗೆ ಶಾಶ್ವತವಾಗಿ ಖಾಸಗಿಯವ್ರ ಕಪಿಮುಷ್ಠಿಯೊಳಗೆ ಸಿಲುಕಿ ನಲುಗಲಿದ್ಯಾ…?!  

ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು..ಇದರ ಭಾಗವಾಗಿ ಕೈಗೊಳ್ಳಲಾಗುತ್ತಿರುವ ನಿರ್ದಾರಗಳನ್ನು ಗಮನಿಸಿದಾಗ ಇಂತದ್ದೊಂದು ಅನುಮಾನ ಮೂಡೋದೆ ಇರೊಲ್ಲ.ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಕೊಟ್ಟ ಹೇಳಿಕೆಯನ್ನೇ ಗಮನಿಸಿದ್ರೆ ಸಾರಿಗೆ ನಿಗಮದೊಳಗೆ ಖಾಸಗೀಕರಣದ ಭೂತವನ್ನು ಬಿಡುವ ಪ್ರಯತ್ನ ತುಂಬಾ ಗಂಭೀರವಾಗಿ ನಡೆಯುತ್ತಿರುವುದು ಸ್ಪಷ್ಟವಾಗುತ್ತೆ.

ಬಿಎಂಟಿಸಿಗೆ 300,ಉಳಿದ ಮೂರು ನಿಗಮಗಳಿಗೆ 100 ಬಸ್ ಗಳು ಒಟ್ಟು 400 ಎಲೆಕ್ಟ್ರಿಕಲ್ ಬಸ್ ಗಳನ್ನು ಸೇರ್ಪಡೆ ಗೊಳಿಸಲು ನಿರ್ಧರಿಸಲಾಗಿದೆ ಎಂಬ ಅವರ ಹೇಳಿಕೆಯ ಗೂಡಾರ್ಥವೇ ಖಾಸಗೀಕರಣ ಎನ್ನಲಾಗ್ತಿದೆ.ಅದೇ ಮಾತಿನ ಲಹರಿಯಲ್ಲಿ ಇವೆಲ್ಲಾ ಬಸ್ ಗಳನ್ನು ನಾವ್ ಖರೀದಿಸ್ಲಿಕ್ಕಾಗೊಲ್ಲ..ಬಿಎಂಟಿಸಿ ದಿನಕ್ಕೆ 1 ಕೋಟಿ ನಷ್ಟದಲ್ಲಿದೆ.ಇಂಥ ಸಂದರ್ಭದಲ್ಲಿ 400 ಎಲೆಕ್ಟ್ರಿ ಕಲ್ ಬಸ್ ಗಳನ್ನು ಹಂಗೇರಿಯ ಖಾಸಗಿ ಕಂಪೆನಿ ಮೂಲಕ ಗುತ್ತಿಗೆ ಮೂಲಕ ಪಡೆದು ಓಡಿಸಲು ನಿರ್ಧರಿಸಲಾಗಿದೆ.ಡ್ರೈವರ್ಸ್ ಹಾಗೂ ಕಂಡಕ್ಟರ್ಸ್ ನಮ್ಮವರೇ ಆಗಿರುತ್ತಾರೆ.ಬರುವ ಲಾಭದಲ್ಲಿ ಸಿಂಹಪಾಲನ್ನು ನಮಗೆ ಕೊಡ್ತಾರೆ.ಇದರಿಂದಾಗಿ ನಷ್ಟದ ಹೊರೆ ತಗ್ಗಲಿದೆ ಎಂದ್ಹೇಳಿ ಕಾರ್ಯಕ್ರಮದಲ್ಲಿ ಚಪ್ಪಾಳೆ ಗಿಟ್ಟಿಸ್ತಾರೆ ಸಾರಿಗೆ ಸಚಿವ ಸವದಿ.

ಆದ್ರೆ..ಆದ್ರೆ ಮಾನ್ಯ ಸವದಿಯವರಿಗೆ ಸಾರಿಗೆ ನಿಗಮಗಳ ಇತಿಹಾಸದ ಬಗ್ಗೆ ಅರಿವಿದ್ದಂತಿಲ್ಲ.ಅದರ ಭವ್ಯ ಪರಂಪರೆಯ ಮಾಹಿತಿಯೇ ಇಲ್ಲ ಎನ್ಸುತ್ತೆ. ದಶಕಗಳ ಕಾಲ ರಾಜ್ಯದ ಜನರ ಸಾರಿಗೆಯ ಜೀವನಾಡಿ ಎಂದೇ ಕರೆಯಿಸಿಕೊಂಡಿದ್ದ ಸಾರಿಗೆ ನಿಗಮಗಳು ಲಾಭದಲ್ಲಿದ್ದವು.ಅವುಗಳನ್ನು ಹಾಳು ಮಾಡಿದ್ದು ಭ್ರಷ್ಟ ಚುನಾಯಿತ ವ್ಯವಸ್ಥೆ.ಕೇವಲ ನಷ್ಟದ ಬಗ್ಗೆನೇ ಮಾತ್ನಾಡುವ ಇವರಿಗೆ ವ್ಯವಸ್ಥೆಯನ್ನು ಸರಿಪಡಿಸಿದ್ರೆ,ಒಂದಷ್ಟು ಕೋಟಿಗಳಷ್ಟು ಹಣ ನೀಡುದ್ರೆ, ನಿಗಮಗಳ ವ್ಯಾಪ್ತಿಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ರೆ ನಾಲ್ಕು ಸಾರಿಗೆ ನಿಗಮಗಳ ಭವ್ಯ ಹಾಗೂ ಲಾಭದಾಯಕ ಇತಿಹಾಸ ಮರುಕಳಿ ಸೊಲ್ವೇ..ಹಾಗಾಗಲು ಸಾಧ್ಯವಿದೆ ಎನ್ನುವುದು ಸಾರಿಗೆ ಸಚಿವರಿಗೂ ಗೊತ್ತಿದೆ.ಆದ್ರೆ ಅದನ್ನು ಮಾಡುವ ಬದ್ಧತೆ ಇಲ್ಲ ಅಷ್ಟೇ.ಇದಕ್ಕೆ ಕಾರಣ, ಎಲೆಕ್ಟ್ರಿಕಲ್ ಬಸ್ ಗಳನ್ನು ರಸ್ತೆಗಿಳಿಸೋದ್ರ ಮೂಲಕ ಅದರಿಂದ ಸಿಗಬಹುದಾದ ಕಿಕ್ ಬ್ಯಾಕ್ ದುರಾಸೆ ಎನ್ನೋದು ಸಾರಿಗೆ ಯೂನಿಯನ್ ಮುಖಂಡರ ಆಪಾದನೆ.

ಕೆಎಸ್ ಆರ್ ಟಿಸಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತ ಸುಬ್ಬರಾವ್
ಕೆಎಸ್ ಆರ್ ಟಿಸಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತ ಸುಬ್ಬರಾವ್

ನಷ್ಟದ ಬಗ್ಗೇನೆ ಮಾತ್ನಾಡುವ ಸರ್ಕಾರಗಳು ಅದರ ಸುಧಾರಣೆ ಬಗ್ಗೆ ಏಕೆ ಮಾತ್ನಾಡುತ್ತಿಲ್ಲ.ಏನ್ ಮಾಡಿದ್ರೆ ಸಂಸ್ಥೆ ಉಳಿಯಬಲ್ಲದು ಎನ್ನೋದಕ್ಕೆ ನೀಲನಕ್ಷೆ ಸಿದ್ಧ ಮಾಡುತ್ತಿಲ್ಲವೇಕೆ.ಸಾರಿಗೆ ಸಚಿವ ಸವದಿ ಮಿನಿಸ್ಟರ್ ಆದಾಗಿನಿಂದಲೂ ಇದೇ ಹೇಳಿಕೆ ಕೊಡ್ತಾ ಬಂದಿದ್ದಾರೆಯೇ ಹೊರತು,ನಷ್ಟ ತಗ್ಗಿಸಿ ಲಾಭದಾಯಕವನ್ನಾಗಿಸುವುದರ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದಾರಾ..ಯೂನಿಯನ್ ಗಳ ಜತೆ ಚರ್ಚೆ ಮಾಡಿದ್ದಾರಾ..ಅಭಿಪ್ರಾಯ ಸಂಗ್ರಹಿಸಿದ್ದಾರಾ..ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಮಾತುಕತೆ ನಡೆಸಿದ್ದಾರಾ..ಖಂಡಿತಾ ಇಲ್ಲ ಎನ್ನುತ್ತಾರೆ ಕೆಎಸ್ ಆರ್ ಟಿಸಿ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಮುಖಂಡ ಅನಂತ ಸುಬ್ಬರಾವ್.

ಹಂಗೇರಿ ಮೂಲದ ಕಂಪನಿ ಜತೆ ಈಗಾಗ್ಲೇ ಅಂತಿಮ ಸುತ್ತಿನ ಮಾತುಕತೆಯನ್ನೂ ನಡೆಸಿ ಓಕೆ ಎಂದಿರುವ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅದನ್ನು ರಸ್ತೆಗಿಳಿಸಲಿದೆ.ಗುತ್ತಿಗೆ ಮೇಲೆ ಅವುಗಳನ್ನು ಓಡಿಸ್ತೇವೆ.ಅದರಿಂದ ಬರುವ ರಿಸಲ್ಟ್ ನೋಡ್ಕೊಂಡ್ ಮುಂದಿನ ನಿರ್ದಾರ’ಕೈಗೊಳ್ತೇವೆ.ಖಾಸಗಿ ಬಸ್ ಗಳಿಂದ ಬರುವ ಆದಾಯದಲ್ಲಿ ಶೇಕಡಾ 60 ರಷ್ಟನ್ನು ನಾವ್ ಇಟ್ಕೋತೇವೆ.ಉಳಿದ ಶೇಕಡಾ 40 ರಷ್ಟನ್ನು ಅವರೇ ಉಳಿಸಿಕೊಳ್ಳುವಂತೆ ಮಾಡ್ತೇವೆನ್ನೋದು ಸವದಿ ಅವರ ವಿವರಣೆ.

ಸರ್ಕಾರದ ಮುಖ್ಯ ಉದ್ದೇಶವೇ ಖಾಸಗಿಕರಣವಾಗಿರುವುದರಿಂದ ನಷ್ಟ ಅನುಭವಿಸಿದ್ರೂ ಲಾಭದ ಲೆಕ್ಕ ತೋರಿಸಿದ್ರೂ ಆಶ್ಚರ್ಯವಿಲ್ಲ.ಏಕೆಂದ್ರೆ ಅವುಗಳ ಸೇವೆ ಮುಂದುವರೆದು ಅವುಗಳೇ ಭವಿಷ್ಯದಲ್ಲಿ ನಿಗಮಗಳನ್ನು ಆಪೋಷನ ತೆಗೆದುಕೊಳ್ಳಬೇಕೆನ್ನುವುದು ಸರ್ಕಾರದ ಇರಾದೆಯಾಗಿರುವುದರಿಂದ್ಲೋ ಏನೋ,ಎಲೆಕ್ಟ್ರಿಕಲ್ ಬಸ್ ಗಳ ಬಗ್ಗೆ ಪಾಸಿಟಿವ್ ಸರ್ಟಿಫಿಕೇಟನ್ನು ಪ್ರಿಪೇರ್ ಮಾಡಿ ಸರ್ಕಾರಕ್ಕೆ ಸಲ್ಲಿಸಿ,ಮತ್ತಷ್ಟು ಎಲೆಕ್ಟ್ತಿಕಲ್ ಬಸ್ ಗಳನ್ನು ನಿಗಮದೊಳಗೆ ಬಿಟ್ಟುಕೊಳ್ಳೊಕ್ಕೆ ಅವಕಾಶ ಕಲ್ಪಿಸ್ಬೋದು.ಸಧ್ಯಕ್ಕೆ ಗುತ್ತಿಗೆ ಎನ್ನುತ್ತಿರುವ ಸರ್ಕಾರ ಭವಿಷ್ಯದಲ್ಲಿ ಅವುಗಳ ಖರೀದಿಗೆ ಮುಂದಾದ್ರೆ ಬಿಎಂಟಿಸಿ ಸೇರಿದಂತೆ ಎಲ್ಲಾ ನಾಲ್ಕೂ ನಿಗಮಗಳ ಕಥೆ ಶಾಶ್ವತವಾಗಿ ಮುಗಿದೋದಂತೆ ಎನ್ನುವ ಆತಂಕ ಸಾಮಾಜಿಕ ಕಾರ್ಯಕರ್ತ ಯೊಗೇಶ್ ಗೌಡ ಆರೋಪ.

ಖಾಸಗೀಕರಣದ ಬಗ್ಗೆ ಬಂಡಾಯ ಏಳದಂತೆ ನೌಕರರನ್ನೇ ಒಡೆದಾಳುತ್ತಿರುವ ಸರ್ಕಾರ:ಸರ್ಕಾರದ ಈ ಖತರ್ನಾಕ್ ಐಡ್ಯಾವನ್ನು ಬಹುತೇಕ ನೌಕರರು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲದಿರುವುದು ದೌರ್ಭಾಗ್ಯಪೂರ್ಣ.ಖಾಸಗೀಕರಣ ನಿಗಮದೊಳಗೆ ಪ್ರವೇಶಿಸುತ್ತಿದ್ದರೂ ನೌಕರರು ಪ್ರಶ್ನಿಸಲಾರದ ಸ್ಥಿತಿಯಲ್ಲಿದ್ದಾರೆ.ಇದಕ್ಕೆ ಕಾರಣ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ಬೇಡಿಕೆಯ ಹೋರಾಟ.ಖಾಸಗೀಕರಣದ ವಿರುದ್ಧ ಹೋರಾಟಕ್ಕೆ ಧುಮುಕದಷ್ಟು ನೌಕರರನ್ನು ಸರ್ಕಾರಿ ನೌಕರರ ಮಾನ್ಯತೆಯ ಹೋರಾಟದಲ್ಲಿ ಸರ್ಕಾರವೇ ಬ್ಯುಸಿಯಾಗಿಬಿಟ್ಟಿದೆ.

ನೌಕರರಿಗೆ ಸರ್ಕಾರಿ ನೌಕರರಾಗುವ ಬೇಡಿಕ ಒಂದ್ ಬಿಟ್ರೆ ಇನ್ನೇನೂ ಬೇಡ ಎನ್ನುವ ಮಟ್ಟಕ್ಕೆ ಅವರ ಮನಸ್ಥಿತಿಯನ್ನು ತಂದಿಟ್ಟಿದ್ದಾರೆ.ಬಹುತೇಕರೆಲ್ಲಾ ಆ ಹೋರಾಟದಲ್ಲೇ ತಲ್ಲೀನರಾಗಿ ಹೋಗಿದ್ದಾರೆ.ಈ ಹೋರಾಟವನ್ನು ಹಾಗೆಯೇ ಜೀವಂತವಾಗಿಟ್ಟು ಖಾಸಗೀಕರಣದ ಬೇಳೆ ಬೇಯಿಸಿಕೊಳ್ಳುವ ಇರಾದೆಯಲ್ಲಿದೆ ಸರ್ಕಾರ.ನೌಕರರ ನಡುವಿನ ಒಗ್ಗಟ್ಟು ಛಿದ್ರವಾಗಿರುವ ಸನ್ನಿವೇಶದಲ್ಲಿ ಖಾಸಗೀಕರಣದ ಉದ್ದೇಶವನ್ನು ಸರ್ಕಾರ ಈಡೇರಿಸಿಕೊಂಡ್ ಬಿಡುತ್ತಾ ಎನ್ನುವ ಅನುಮಾನ ಕೂಡ ಕಾಡ್ತಿದೆ.

ಇದೆಲ್ಲದರ ನಡುವೆ ಸ್ವಾಭಿಮಾನಿ ಸಾರಿಗೆ ನೌಕರರು ಹಾಗೂ ಸಂಘಟನೆಗಳು ಖಾಸಗೀಕರಣದ ಹುನ್ನಾರವನ್ನು ಪ್ರಶ್ನಿಸಿ ಬೃಹತ್ ಪ್ರತಿಭಟನೆಯನ್ನು ರಾಜ್ಯಾದ್ಯಂತ ಮಾಡಲು ನಿರ್ಧರಿಸಿದ್ದಾರೆ.ಸರ್ಕಾರಿ ನೌಕರರ ಹೋರಾಟದಲ್ಲೇ ಬ್ಯುಸಿಯಾಗಿರುವ ಅವರನ್ನು ಸಮಾಧಾನಪಡಿಸುವುದು ಸಧ್ಯದ ಮಟ್ಟಿಗೆ ಸ್ವಲ್ಪ ಕಷ್ಟವಾದ್ರೂ ಅವರ ಮನವೊಲಿಸಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳೊಕ್ಕೆ ಸಿದ್ಧತೆ ನಡೆದಿದೆ.ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಶೀಘ್ರವೇ ಸಾರಿಗೆ ವ್ಯವಸ್ಥೆ ಇಡೀ ರಾಜ್ಯಾದ್ಯಂತ ಸ್ಥಬ್ಧವಾಗುವ ಸಾಧ್ಯತೆಗಳಿವೆ.

ಲಾಭದ ರೂಟ್ ಖಾಸಗಿ ಅವ್ರ ಪಾಲು-ಲಾಸ್ ರೂಟ್ಸ್ ಬಿಎಂಟಿಸಿಗೆ:ಶೇಕಡಾ 60:40ರ ಅನುಪಾತದ ಬಗ್ಗೆ ಹೇಳುವ ಸವದಿ ಅವರು ಯಾವ ರೂಟ್ಸ್ ಗಳಲ್ಲಿ ಖಾಸಗಿ ಬಸ್ ಗಳು ಸಂಚರಿಸ್ತವೆ ಎನ್ನೋದನ್ನು ಸ್ಪಷ್ಟಪಡಿಸಿಲ್ಲ.ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕ ಪಕ್ಕಾ ಮಾಹಿತಿ ಪ್ರಕಾರ ಬಹುಪಾಲು ಲಾಭದ ರೂಟ್ಸ್(ಹೆಚ್ಚು ಆದಾಯ ಬರುವ ಮಾರ್ಗಗಳು)ಗಳನ್ನು ಬಿಎಂಟಿಸಿಯಿಂದ ಕಸಿದುಕೊಂಡು ಖಾಸಗಿಯವರಿಗೆ ನೀಡುವ ಹುನ್ನಾರ ನಡೆಯುತ್ತಿದೆ.ಲಾಭದ ಮಾರ್ಗಗಳೆಲ್ಲಾ ಖಾಸಗಿ ಅವರ ಪಾಲಾದ್ರೆ ಅವರಿಗೆ ಲಾಭ ಹೆಚ್ಚಾಗ್ದೆ ಇನ್ನೇನು.

ಅದರಲ್ಲಿ ಶೇಕಡಾ 60 ರಷ್ಟನ್ನು ಕೊಡೋದ್ರಲ್ಲಿ ಹೆಗ್ಗಳಿಕೆ ಏನ್ ಬಂತು.ಒನ್ಸ್ ಎಗೈನ್ ಈಗಾಗ್ಲೇ ನಷ್ಟಕ್ಕೆ ಸಿಲುಕಿರುವ ಬಿಎಂಟಿಸಿ ಸ್ಥಿತಿ ಆರ್ಥಿಕವಾಗಿ ಮತ್ತಷ್ಟು ಶೋಚನೀಯವಾಗುತ್ತೆ.ಇದೇ ಪರಿಸ್ಥಿತಿ ಮುಂದುವರುದ್ರೆ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನೂ ಕಡ್ಮೆ ಮಾಡ್ಬೇಕಾಗುತ್ತೆ.ಬಸ್ ಗಳ ಸಂಖ್ಯೆ ಕಡ್ಮೆಯಾದ್ರೆ ಸಹಜವಾಗಿಯೇ ನೌಕರರು ಕೂಡ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತೆ. ಸಾರಿಗೆ ನಿಗಮಗಳು ಎದುರಿಸುತ್ತಿರುವ ಈ ಆತಂಕ ಖಾಸಗೀಕರಣದ ಅಮಲನ್ನು ತಲೆಗೇರಿಸಿಕೊಂಡಿರುವ ಸಚಿವ ಸವದಿಗೆ ಗೊತ್ತಿಲ್ವೇ?

ಇದು ಒಂದ್ರೀತಿ ಸಮಸ್ಯೆಯಾದ್ರೆ ರಸ್ತೆ ಸಾರಿಗೆ ನಿಗಮವನ್ನೇ ಬದುಕಿನ ಆಧಾರವಾಗಿಸಿಕೊಂಡ ನೌಕರರು ಶಾಶ್ವತವಾಗಿ ಬೀದಿಗೆ ಬೀಳೋ ಭಯ ಮತ್ತೊಂದ್ಕಡೆ. ಇತರೆ ಮೂರು ನಿಗಮಗಳನ್ನು ಬಿಟ್ ಬಿಡೋಣ ಕೇವಲ ಬಿಎಂಟಿಸಿಯನ್ನೇ ಲೆಕ್ಕಕ್ಕಿಟ್ಟು ನೋಡೋಣ.ಎಲೆಕ್ಟ್ರಿಕಲ್ ಬಸ್ ಗಳು ನಿಗಮದೊಳಗೆ ಬರೋದ್ರಿಂದ ಹತ್ತಿರತ್ತಿರ 36 ಸಾವಿರ ನೌಕರರಲ್ಲಿ ಒಂದಷ್ಟು ಜನ ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ.ಎಲೆಕ್ಟ್ರಿಕಲ್ ಬಸ್ ಗಳಿಗೆ ಉಳಿದ ಬಸ್ ಗಳಂತೆ ಮೆಂಟೆನೆನ್ಸ್ ಕಡ್ಮೆನೇ. ಆ ಬಸ್ ಗಳಿಗೆ ಡ್ರೈವರ್ಸ್-ಕಂಡಕ್ಟರ್ಸ್ ನಮ್ಮವರೇ ಎಂದೇ ಇಟ್ಟುಕೊಳ್ಳೋಣ,ಅವುಗಳ ಮೆಂಟೆನೆನ್ಸ್ ಗೆ ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡುವ ನೌಕರರು ನಮ್ಮವರಾಗ್ಲೇಬೇಕು.

ರಸ್ತೆ ಸಾರಿಗೆ ನೌಕರರ ಉದ್ಯೋಗಭದ್ರತೆಗೆ ಕುತ್ತು ತರಲಿದೆಯೇ ಖಾಸಗೀಕರಣ
ರಸ್ತೆ ಸಾರಿಗೆ ನಿಗಮಗಳ  ನೌಕರರ ಉದ್ಯೋಗಭದ್ರತೆಗೆ ಕುತ್ತು ತರಲಿದೆಯೇ ಸರ್ಕಾರಿ ಪ್ರಾಯೋಜಿತ ಖಾಸಗೀಕರಣ

ಒಂದು ಅಂದಾಜಿನ ಪ್ರಕಾರ ಹತ್ತಿರತ್ತಿರ 8 ರಿಂದ 10 ಸಾವಿರ ನೌಕರರು ಗ್ಯಾರೇಜ್ ಗಳಲ್ಲಿ ಕೆಲಸ ಮಾಡ್ತಾರೆ.ಎಲೆಕ್ಟ್ತಿಕಲ್ ಬಸ್ ಪೂರೈಕೆ ಮಾಡುವ ಕಂಪೆನಿ ಯೇ ಆರು ತಿಂಗಳಿಂದ ಒಂದ್ ವರ್ಷದವರೆಗೆ ಮೆಂಟೆನೆನ್ಸ್ ಮಾಡೋದ್ರಿಂದ ಬಿಎಂಟಿಸಿ ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡ್ತಿರುವ ನೌಕರರ ಅವಶ್ಯಕತೆ ಬೀ ಳೋ ಸಾಧ್ಯತೆ ಕಡ್ಮೆ.ಹೋಗ್ಲಿ ಅವರು ಮಾಮೂಲಿನಂತೆ ಕೆಲಸ ಮಾಡ್ಕೊಂಡು ಹೋಗ್ತಾರೆ ಎಂದೇ ಇಟ್ಟುಕೊಳ್ಳೋಣ.ಈಗ್ಲೇ ವರ್ಕ್ ಶಾಪ್ ಗಳಲ್ಲಿನ ಸಿಬ್ಬಂದಿ ಹೆಚ್ಚಿದ್ದಾರೆ.ಅವರನ್ನು ತೆಗೆಯಬೇಕೆನ್ನುವ ಮಾತುಗಳು ಕೇಳಿಬರುತ್ತಿರುವಾಗ 350 ಬಿಎಂಟಿಸಿ ಬಸ್ ಗಳು ಕಡ್ಮೆಯಾಗುವುದರಿಂದ ಬಸ್ ಗಳ ಮೆಂಟೆನೆನ್ಸ್ ನೋಡಿಕೊಳ್ತಿರುವ ಸಾವಿರಾರು ನೌಕರರು ಬೀದಿ ಪಾಲಾಗೋದಿಲ್ವೇ..ಅವರಿಗೆ ಏನ್ ಮಾಡಲಾಗ್ತದೆ ಎನ್ನುವುದರ ಬಗ್ಗೆ ಸವದಿ ಬಳಿ ಉತ್ತರವಿಲ್ಲ.

ಎಲೆಕ್ಟ್ತಿಕಲ್ ಬಸ್ ಗಳು ಇನ್ನು ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ.ವಿದ್ಯುತ್ ಚಾಲಿತ ಬ್ಯಾಟರಿ ಮೂಲಕ ಓಡುವ ಅವುಗಳ ಚಾರ್ಜಿಂಗ್ ಪಾಯಿಂಟ್ಸ್ ಗಳ ಅಳವಡಿಕೆ ಕಾರ್ಯವೂ ನಡೀತಿದೆ.ಬನಶಂಕರಿ 20ನೇ ಡಿಪೋದಲ್ಲಿ ಇದರ ಕೆಲಸ ನಡೆಯುತ್ತಿದೆ.ಆದ್ರೆ ಚಾರ್ಜಿಂಗ್ ಸೆಂಟರ್ ಗಳಿಗೆ ಬರೋ ವಿದ್ಯುತ್ ಬಿಲ್ಲನ್ನು ಯಾರ್ ಕಟ್ಟುತ್ತಾರೆನ್ನುವುದು.ಹಾಗೆಯೇ ಅವುಗಳಿಗೆ ನಿಲ್ಲಲು ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಬಿಟ್ಟುಕೊಡಲಾಗ್ತದೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.
ಇದರ ಜತೆಗೆ ಬೇರೆ ರಾಜ್ಯಗಳಲ್ಲಂತೆ ಸ್ವೈಪಿಂಗ್ ಮಿಷಿನ್ ಗಳನ್ನು ಬಿಎಂಟಿಸಿ ಬಸ್ ಗಳಲ್ಲಿ ಅಳವಡಿಸುವ ಚಿಂತನೆ ನಡೀತಿದೆ ಎನ್ನಲಾಗಿದೆ.ಬಸ್ ಹತ್ತುತ್ತಿದ್ದಂತೆಯೇ ಅಲ್ಲಿರುವ ಮಿಷೆನ್ ಗಳನ್ನು ಸ್ವೈಪ್ ಮಾಡಿ ಹಣ ಭರ್ತಿ ಮಾಡುವಂಥ ಐಡ್ಯಾ ಹೊಂದಲಾಗಿದೆ.ಹೀಗಾದ್ರೆ ಟಿಕೆಟ್ ನೀಡೊಕ್ಕಂತನೇ ಇರುವ ಕಂಡಕ್ಟರ್ಸ್ ಉಳಿಯೊಕ್ಕೆ ಸಾಧ್ಯನಾ..ಇದು ಖಾಸಗೀಕರಣದ ಭಾಗ ಎಂದೇ ಹೇಳಲಾಗ್ತಿದೆ.

ಎಲೆಕ್ಟ್ರಿಕಲ್ ಬಸ್ ಗಳು ರಸ್ತೆಗಿಳಿಯುವುದರಿಂದ ಮೊದಲು ಕೆಲಸಕ್ಕೆ ಕುತ್ತು ಬರೋದು ಮೆಕ್ಯಾನಿಕ್ಸ್ ಗಳಿಗೆ..?
ಎಲೆಕ್ಟ್ರಿಕಲ್ ಬಸ್ ಗಳು ರಸ್ತೆಗಿಳಿಯುವುದರಿಂದ ಮೊದಲು ಕೆಲಸಕ್ಕೆ ಕುತ್ತು ಬರೋದು ಮೆಕ್ಯಾನಿಕ್ಸ್ ಗಳಿಗೆ..?

ಸ್ವಯಂನಿವೃತ್ತಿಗೆ ದುಂಬಾಲು:50 ವರ್ಷ ದಾಟುತ್ತಿದ್ದಂತೆಯೇ ಸಾರಿಗೆ ನಿಗಮಗಳ ನೌಕರರಿಗೆ ಸ್ವಯಂ ನಿವೃತ್ತಿ ಪಡೆಯುವಂತೆ ಅಲ್ಲಿರುವ ಅಧಿಕಾರಿಗಳಿಗೆ ದುಂಬಾಲು ಬೀಳ್ತಿರುವ ಸಂಗತಿ ಹೊರಬಿದ್ದಿದೆ.ಏನಾದ್ರೂ ಸಮಸ್ಯೆ ಹೇಳಿಕೊಳ್ಳಲು ಹೋದ್ರೆ ಅಧಿಕಾರಿಗಳೇ ನಿಂಗೆ ಕೆಲಸ ಮಾಡ್ಲಿಕ್ಕೆ ಆಗುತ್ತಿಲ್ಲ ಎನ್ಸುತ್ತೆ.ಹಾಗಾಗಿ ಸ್ವಯಂ ನಿವೃತ್ತಿ ಪಡೆದುಬಿಡಿ.ಎಲ್ಲಾ ಬೆನಿಫಿಟ್ಸ್ ನಾನ್ ಕೊಡುಸ್ತೀನಿ ಎನ್ತಾರಂತೆ.ಅಂದ್ರೆ ಮಾಡೊಕ್ಕೆ ಸಿಕ್ಕಾಪಟ್ಟೆ ಕೆಲಸಗಳಿದ್ದರೂ ಸ್ವಯಂ ನಿವೃತ್ತಿಗೆ ನೌಕರರನ್ನು ಪ್ರಚೋದಿಸುವ ಗುತ್ತಿಗೆ ಪಡೆದವರಂತೆ ವರ್ತಿಸ್ತಿದ್ದಾರೆ ಅಧಿಕಾರಿಗಳು.

ಲಾಭದ ರೂಟ್ ಗಳ ಹರಾಜಿಗೂ ಆಸಕ್ತಿ:ಇದೆಂಥಾ ದೌರ್ಭಾಗ್ಯದ ದಿನಗಳು ಬಂತ್ನೋಡಿ.ಏನೇ ಬದ್ಲಾವಣೆಗಳಾದ್ರೂ ಇವತ್ತಿಗೂ ಕೆಲವು ರೂಟ್ ಗಳಲ್ಲಿ ಕೆಎಸ್ ಆರ್ ಟಿಸಿ ಹಾಗೂ ಇತರೆ ನಿಗಮಗಳಿಗೆ ಅಪಾರ ಲಾಭ ಬರುತ್ತಿದೆ.ಅವುಗಳನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡ್ಬೇಕಿತ್ತು.ಆದ್ರೆ ಸರ್ಕಾರವೇ ಇವತ್ತು ಆ ಲಾಭದಾಯಕ ರೂಟ್ ಗಳನ್ನು ಖಾಸಗಿ ಅವರಿಗೆ ಬಿಡ್ ಮೂಲಕ ಹರಾಜು ಮಾಡಲು ಮುಂದಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.ಶೀಘ್ರದಲ್ಲೇ ಅವು ಹರಾಜಾಗುವ ಸಾಧ್ಯತೆಗಳಿವೆ.ಇದು ಕೂಡ ಖಾಸಗಿಕರಣದ ಮುನ್ಸೂಚನೆ ಅಲ್ಲದೇ ಇನ್ನೇನು.

-ಬಿಎಂಟಿಸಿ ಒಂದ್ ನೋಟ
-ಕೆಲಸ ಮಾಡುತ್ತಿರುವ ಒಟ್ಟು ನೌಕರರು-36 ಸಾವಿರ
-ಚಾಲಕರು-15 ಸಾವಿರ
-ನಿರ್ವಾಹಕರು-9-10 ಸಾವಿರ
-ವರ್ಕ್ ಶಾಪ್ ತಾಂತ್ರಿಕ ಸಿಬ್ಬಂದಿ-10 ಸಾವಿರ
-ದಿನನಿತ್ಯದ ಗಳಿಕೆ:3-4 ಕೋಟಿ
-ಖರ್ಚು-4-5 ಕೋಟಿ
-ಆದಾಯ- 1 ಕೋಟಿ ನಷ್ಟ(ಸಾರಿಗೆ ಸಚಿವ ಸವದಿ ಅವರ ಹೇಳಿಕೆಯನ್ನಾಧರಿಸಿ)

 

 

Spread the love
Leave A Reply

Your email address will not be published.

Flash News