ಪೌಷ್ಟಿಕ ಕುಂಬಳಕಾಯಿಯಿಂದ ಏನೆಲ್ಲಾ ಸ್ವಾದಿಷ್ಟ ಖಾದ್ಯ ತಯಾರಿಸಬಹುದು ಗೊತ್ತಾ..

0

ಪೌಷ್ಟಿಕಾಂಶಗಳ ಆಗರವಾಗಿರುವ ಸಿಹಿ ಕುಂಬಳಕಾಯಿಯ ವೈವಿಧ್ಯತೆ ಹಾಗೂ ಆರೋಗ್ಯದ ಸಾಕಷ್ಟು ವಿಚಾರಗಳು ತುಂಬಾ ಜನಕ್ಕೆ ತಿಳಿದಿರಿಲಿಕ್ಕಿಲ್ಲ.ಅದರಿಂದ ಸಾಕಷ್ಟು ಖಾದ್ಯಗಳನ್ನು ಮಾಡಬಹುದಾಗಿದೆ. ವೈವಿಧ್ಯಮಯ ಅಡುಗೆ ಜೊತೆಗೆ ರಾಯತ, ಪಲ್ಯ ಮಾಡಬಹುದಾಗಿದೆ. ಚಪಾತಿ, ರೊಟ್ಟಿ,ಬಿಸಿ ಅನ್ನದ ಜೊತೆಗೆ ತಿಂದರೆ ತುಂಬಾ ರುಚಿಯಾಗಿರುತ್ತವೆ. ಅಂದ್ಹಾಗೆ ಸಿಹಿಗುಂಬಳದಿಂದ ಮಾಡಬಹುದಾದ ತರೇವಾರಿ ಖಾದ್ಯಗಳ ವಿವರ ಇಲ್ಲಿದೆ.

ರುಚಿಕರ ರಾಯತ ಮಾಡುವುದ್ಹೇಗೆ:

ಬೇಕಾಗಿರುವ ಸಾಮಾಗ್ರಿ: ಸಿಹಿ ಕುಂಬಳಕಾಯಿಯನ್ನು ಸಿಪ್ಪೆ ಸಹಿತ ಮಧ್ಯಮ ಗಾತ್ರದಲ್ಲಿ ಹೋಳು ಮಾಡಿಕೊಳ್ಳಬೇಕು.ಒಂದು  ಕಪ್, ಕಾಯಿತುರಿ – ಅರ್ಧ ಕಪ್, ಗಟ್ಟಿ ಮೊಸರು -೧ ದೊಡ್ಡ ಬಟ್ಟಲು, ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು ರೆಡಿ ಮಾಡಿಕೊಳ್ಳಬೇಕು.

ತಯಾರಿಸುವ ವಿಧಾನ: ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಇಂಗು, ಸಾಸಿವೆ, ಜೀರಿಗೆ, ಕುಟ್ಟಿದ ಕಾಳುಮೆಣಸು ಮತ್ತು ಒಣ ಮೆಣಸಿನಕಾಯಿಯ ತುಂಡು ಹಾಕಿ ಒಗ್ಗರಣೆ ಮಾಡಿ ಹಸಿ ಶುಂಠಿ ಮತ್ತು ಹಸಿ ಮೆಣಸಿನಕಾಯಿಯ ಪೇಸ್ಟ್ ಸೇರಿಸಿ ಬಾಡಿಸಿ ತಣ್ಣಗಾದ ಮೇಲೆ ಮೊಸರಿಗೆ ಹಾಕಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಸೇರಿಸಿ ಸ್ವಲ್ಪ ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಮತ್ತು ಉಪ್ಪು ಹಾಕಿ ಬೆರೆಸಬೇಕು.

ಸಿಹಿಪಲ್ಯ ಸಿದ್ಧಪಡಿಸುವ ವಿಧಾನ:

ಅಗತ್ಯವಿರುವ ಸಾಮಗ್ರಿಗಳು: ಕುಂಬಳಕಾಯಿ ಕಾಲು ಕೆ.ಜಿ, ಬೆಲ್ಲದ ಪಡಿ- ರುಚಿಗೆ ತಕ್ಕಷ್ಟು, ತೆಂಗಿನ ತುರಿ-೧ ಕಪ್, ಏಲಕ್ಕಿಪುಡಿ ಮತ್ತು ತುಪ್ಪ-ಸ್ವಲ್ಪ.

ತಯಾರಿಸುವ ವಿಧಾನ: ಬಿಸಿ ತುಪ್ಪಕ್ಕೆ ಕುಂಬಳಕಾಯಿಯ ಹೋಳುಗಳನ್ನು ಹಾಕಿ ಬಾಡಿಸಿ ಬೆಲ್ಲ, ಏಲಕ್ಕಿಪುಡಿ ಮತ್ತು ಕಾಯಿತುರಿ ಸೇರಿಸಿ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ಇದನ್ನು ಹಾಗೆಯೇ ಸೇವಿಸಿದರೂ ಚೆನ್ನಾಗಿರುತ್ತದೆ.

ಖಾರ ಪಲ್ಯ ಸಿದ್ಧಪಡಿಸುವ ವಿಧಾನ

ಬೇಕಾಗುವ ಸಾಮಗ್ರಿ: ಕುಂಬಳಕಾಯಿಯ ಹೋಳು-1 ಕಪ್, ಹೆಚ್ಚಿನ ಟೊಮೇಟೊ-1 ಕಪ್, ಜಜ್ಜಿದ ಬೆಳ್ಳುಳ್ಳಿ-2 ಸಣ್ಣಗೆ ಹೆಚ್ಚಿದ ಹಸಿ ಶುಂಠಿ-ಸ್ವಲ್ಪ, ಸಾರಿನ ಪುಡಿ ಮತ್ತು ಖಾರ ಪುಡಿ-ಸ್ವಲ್ಪ, ಕೂಟ ಪುಡಿ-ರುಚಿಗೆ ತಕ್ಕಷ್ಟು, ಉಪ್ಪು ಮತ್ತು ಬೆಲ್ಲ-ಸ್ವಲ್ಪ, ಒಗ್ಗರಣೆಗೆ ಎಣ್ಣೆ-1 ದೊಡ್ಡ ಚಮಚ, ಇಂಗು, ಸಾಸಿವೆ, ಜೀರಿಗೆ, ಕಾಳುಮೆಣಸಿನ ಪುಡಿ, ಕರಿಬೇವು-ಸ್ವಲ್ಪ, ಕೊತ್ತಂಬರಿ ಸೊಪ್ಪ-ಸ್ವಲ್ಪ.

ವಿಧಾನ: ಚಿಕ್ಕ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಹುರಿದು ಟೊಮೇಟೊ ಮತ್ತು ಕುಂಬಳಕಾಯಿ ಹೋಳುಗಳನ್ನು ಸೇರಿಸಿ ಬಾಡಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಹಾಕಿ ತಿರುವಿ ಒಂದು ಲೋಟ ನೀರು ಸೇರಿಸಿ ಕುಕ್ಕರ್ ಮುಚ್ಚಿ ಹದಿನೈದು ನಿಮಿಷಗಳ ನಂತರ ಮುಚ್ಚಳ ತೆಗೆದು ಚೆನ್ನಾಗಿ ಕಲಸಿ ಎರಡು ಟೇಬಲ್ ಚಮಚ ಹುರಿದ ಶೇಂಗಾ ಪುಡಿ ಹಾಕಿ ಒಂದೆರಡು ಕುದಿ ಬರುವವರೆಗೆ ಕುದಿಸಬೇಕಾಗುತ್ತದೆ.ನೀವು ಇಚ್ಛಿಸುವ ಖಾರಪಲ್ಯ ಸಿದ್ಧವಾಗುತ್ತೆ.

Spread the love
Leave A Reply

Your email address will not be published.

Flash News