ಆರೋ..!? ಹತ್ತೊಂಬತ್ತೋ..!? ನಲವತ್ತೋ..!?ಕೊರೊನಾಕ್ಕೆ ಬಲಿಯಾದ ಬಿಎಂಟಿಸಿ ನೌಕರರ ಸಂಖ್ಯೆಯಲ್ಲೇ ಗೊಂದಲ..?? 30 ಲಕ್ಷ ಪರಿಹಾರವೂ ಗಗನಕುಸುಮವೇ..?

0

ಬೆಂಗಳೂರು:ಇದು ನಿಜಕ್ಕೂ ಶಾಕಿಂಗ್ ನ್ಯೂಸೇ ಸರಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಕೆಲಸ ಮಾಡುತ್ತಿರುವ ನೌಕರ ಸಿಬ್ಬಂದಿಯಲ್ಲಿ 25 ಕ್ಕೂ ಹೆಚ್ಚು ಕೊರೋನಾ ಸಾವುಗಳಾಗಿವೆಯಂತೆ. ಇಂತಹದ್ದೊಂದು ಮಾಹಿತಿಯನ್ನು ಬಿಎಂಟಿಸಿಯ ವಿಶ್ವಸನೀಯ ಮೂಲಗಳೇ ತಿಳಿಸಿವೆ. ಈ ಆಘಾತಕಾರಿ ಮಾಹಿತಿಯನ್ನು ಕೇಳಿ ಬೆಚ್ಚಿಬಿದ್ದಿರುವ ಬಿಎಂಟಿಸಿ ನೌಕರರು ಆತಂಕದ ನಡುವೆಯೇ ಕೆಲಸ ಮಾಡಬೇಕಾದ ಅಸಹಾಯಕ ಸ್ಥಿತಿ ಎದುರಾಗಿದೆ.

ಕೊರೋನಾ ರಾಜ್ಯಕ್ಕೆ ವಕ್ಕರಿಸಿ ಗಂಭೀರ ಪ್ರಮಾಣದಲ್ಲಿ ವ್ಯಾಪಿಸಿದಾಗಿನಿಂದಲೂ, ಬಿಎಂಟಿಸಿ ಸಿಬ್ಬಂದಿಗಳು ಅದರಲ್ಲೂ ಡ್ರೈವರ್, ಕಂಡಕ್ಟರ್‌ಗಳು ಜೀವದ ಹಂಗು ತೊರೆದು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡರು. ಆ ಕಾರಣಕ್ಕಾಗಿ ಅವರನ್ನು ಕೊರೋನಾ ವಾರಿಯರ್ಸ್ ಅಂತಲೂ ಬಿಂಬಿಸಲಾಯಿತು. ಆದರೆ ಅವರಿಗೆ ಕೊರೋನಾದಿಂದ ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ಸುರಕ್ಷತಾ ಸೌಲಭ್ಯಗಳನ್ನು ನೀಡದೇ ಇದ್ದುದರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಸ್ವತಃ ಡ್ರೈವರ್, ಕಂಡಕ್ಟರ್‌ಗಳು ಕೊರೋನಾ ನಡುವೆ ಜೀವವನ್ನು ಕೈಯಲ್ಲಿ ಬಿಗಿಹಿಡಿದುಕೊಂಡು ಬದುಕುತ್ತಿರುವ ಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿದ್ದರು. ಇದೆಲ್ಲವನ್ನು ಮಾಧ್ಯಮಗಳು ಆಡಳಿತ ಮಂಡಳಿಯ ಗಮನಕ್ಕೆ ತಂದ ಹೊರತಾಗಿಯೂ ಯಾವುದೇ ಸುರಕ್ಷತಾ ವ್ಯವಸ್ಥೆಗಳು ಅನುಷ್ಠಾನಕ್ಕೆ ಬರಲಿಲ್ಲ. ಬದಲಿಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟ ತಪ್ಪಿಗೆ ನೂರಾರು ಮಂದಿಗೆ ಎಚ್ಚರಿಕೆಯ ನೋಟೀಸ್‌ಗಳು ಸರ್ವ್ ಆದವು. ಕೆಲವು ನೌಕರ ಮುಖಂಡರು ಸೇರಿದಂತೆ ಸಾಕಷ್ಟು ಜನರನ್ನು ಅಮಾನತ್ತುಗೊಳಿಸಲಾಯಿತು.

ಬಿಎಂಟಿಸಿ ವ್ಯಾಪ್ತಿಯಲ್ಲಿ ಎಂತಹ ಅಮಾನವೀಯ ಅವ್ಯವಸ್ಥೆ ಇದೆ ಎಂದರೆ ಕೆಲವು ನೌಕರರೇ ತಮ್ಮ ಅಳಲನ್ನು ತೋಡಿಕೊಂಡಂತೆ, ಕೊರೋನಾ ಸೋಂಕಿನ ಸಂಗತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೆ ಕದ್ದು ಮುಚ್ಚಿ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆಯಾಗುತ್ತಿತ್ತಂತೆ. ಆ ವ್ಯವಸ್ಥೆ ಈಗಲೂ ಮುಂದುವರೆದಿದೆ. 14 ದಿನಗಳ ಕ್ವಾರಂಟೈನ್‌ಗೆ ಹೋಗುವ ಸಿಬ್ಬಂದಿಗೆ ೭ ದಿನ ಮಾತ್ರ ರಜಾ ಸಿಗುತ್ತಂತೆ. ಉಳಿದ ಅವಧಿಗೆ ನೌಕರರು ತಮ್ಮ ಖಾತೆಯಿಂದಲೇ ರಜೆ ಪಡೆಯಬೇಕಾಗುತ್ತದೆ. ನಿಯಮಗಳ ಬಗ್ಗೆ ಮಾತನಾಡಿದರೆ ಅಂತಹವರ ಮೇಲೆ ಕಣ್ಣಿಟ್ಟು ಅವರನ್ನು ಹಣಿಯಲು ಸಂದರ್ಭಕ್ಕಾಗಿ ಕಾಯುತ್ತಿರುತ್ತಾರಂತೆ ಅಧಿಕಾರಿಗಳು.

ಬಿಎಂಟಿಸಿಯಲ್ಲಿ ಕೊರೋನಾದ ಸೋಂಕು ವ್ಯಾಪಕ ಪ್ರಮಾಣದಲ್ಲಿ ಹರಡಿವೆ ಎನ್ನುವ ಮಾತುಗಳಿವೆ. ಆದರೆ ಯಾವುದೂ ಬಹಿರಂಗಗೊಳ್ಳದಂತೆ ಅದೆಲ್ಲವನ್ನೂ ಮುಚ್ಚಿಹಾಕಲಾಗುತ್ತಿದೆಯಂತೆ. ಮೇಲಧಿಕಾರಿಗಳು ‘ಮನಸ್ಸು ಮಾಡಿದರಷ್ಟೆ…’ ಸಿಬ್ಬಂದಿಗೆ ಡ್ಯೂಟಿ. ಇಲ್ಲದಿದ್ದರೆ ಡಿಪೋ ಕಾದು ವಾಪಸ್ಸಾಗಬೇಕಾದ ಪರಿಸ್ಥಿತಿ. ಆದಷ್ಟು ಕಡಿಮೆ ನೌಕರರನ್ನು ಡ್ಯೂಟಿಗೆ ಬಳಸಿಕೊಂಡರೆ ಕಡಿಮೆ ಮೊತ್ತದ ಸಂಬಳ ನೀಡಬಹುದೆಂಬುದು ಈ ಆಲೋಚನೆಗೆ ಕಾರಣ ಎನ್ನಲಾಗುತ್ತಿದೆ.

ಕೊರೋನಾಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆ ಇಲ್ಲದೆ ಬಿಎಂಟಿಸಿಯಲ್ಲಿ ಸಾಯುತ್ತಿರುವ ನೌಕರರ ಸಂಖ್ಯೆಯನ್ನು ಎಲ್ಲೂ ಅಧಿಕೃತಗೊ ಳಿಸುತ್ತಿಲ್ಲ. ಯಾಕೆ ಆ ಸಂಗತಿಯನ್ನು ಮುಚ್ಚಿಡಲಾಗುತ್ತಿದೆ. ಸಾರಿಗೆ ನೌಕರರ ವಾಟ್ಸಪ್ ಗ್ರೂಪ್‌ಗಳಲ್ಲಿ ನಿತ್ಯವೂ ಎರಡು, ಮೂರು ನೌಕರರ ಸಾವಿನ ಸುದ್ದಿಗಳೇ ರಾರಾಜಿಸುತ್ತಿವೆ. ಇದ್ಯಾವುದನ್ನೂ ಆಡಳಿತ ಮಂಡಳಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಬಹುಶಃ ಸಾವಿನ ಸಂಖ್ಯೆಯನ್ನು ಬಹಿರಂಗಗೊಳಿಸಿದರೆ ಸಂಸ್ಥೆಯ ಮೇಲೆ ಸಾರ್ವಜನಿಕರು ಹಾಗೂ ನೌಕರರು ಇಟ್ಟಿರುವ ನಂಬಿಕೆ ಹಾಳಾಗಿ ಹೋಗುತ್ತದೆ ಎನ್ನುವ ಆತಂಕ ಇದಕ್ಕೆ ಕಾರಣವಿರಬಹುದು. ಹಾಗಂತ ಕೊರೋನಾ ಸಾವಿನ ಸಂಖ್ಯೆಯನ್ನು ಮುಚ್ಚಿಡುವುದು ಎಷ್ಟು ಸರಿ?

ಇದೆಲ್ಲಕ್ಕಿಂತ ಗಂಭೀರ ಹಾಗೂ ಆತಂಕಕಾರಿ ಸಂಗತಿ ಇನ್ನೊಂದಿದೆ. ಕೊರೋನಾ ಡ್ಯೂಟಿಯಲ್ಲಿ ಯಾರೇ ಸಾವನ್ನಪ್ಪಿದರೂ ಅವರ ಸಾವನ್ನು ಗೌರವಿಸುವುದಲ್ಲದೆ, ಅವರ ಕುಟುಂಬಕ್ಕೆ 30  ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರವೇ ಘೋಷಿಸಿತ್ತು. ಆದರೆ ನಿಮಗೆ ಗೊತ್ತಿರಲಿ, ಈವರೆಗೆ ಬಿಎಂಟಿಸಿಯಲ್ಲಿ ಕೊರೋನಾ ಡ್ಯೂಟಿಯಲ್ಲಿದ್ದಾಗಲೇ ಸತ್ತಿರುವ ಒಬ್ಬನೇ ಒಬ್ಬ ನೌಕರನಿಗೂ ಆ ಕೊರೋನಾ ಪರಿಹಾರದ ಮೊತ್ತ ಸಂದಾಯವಾಗಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಸ್ಪಷ್ಟನೆ ಕೇಳಿದರೆ ಐವತ್ತೈದು ವರ್ಷ ಮೇಲ್ಪಟ್ಟ ನೌಕರರಿಗೆ ವಯೋಮಿತಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಣೆಯಲ್ಲಿ ವಿನಾಯಿತಿ ನೀಡಲಾಗಿರುತ್ತದೆ. ಹಾಗೂ ಕೊರೋನಾ ಸೋಂಕು ದೃಢಪಟ್ಟು ಮರಣ ಹೊಂದಿದರೆ ರೂ. 30  ಲಕ್ಷ ಪರಿಹಾರ ಕುರಿತು ಪ್ರಸ್ತುತ ಸಂಸ್ಥೆಯ ವತಿಯಿಂದ ಯಾವುದೇ ಸುತ್ತೋಲೆ ಹೊರಡಿಸಿರುವುದಿಲ್ಲ…” ಎಂಬ ಮಾಹಿತಿಯನ್ನು ಸಂಸ್ಥೆಯೇ ನೀಡಿದೆ. ಹಾಗಾದರೆ ಸರ್ಕಾರ ನೀಡಿದ ಹೇಳಿಕೆಯೇ ಸುಳ್ಳಾ? ಅಥವಾ ಕೊರೋನಾ ಡ್ಯೂಟಿಯಲ್ಲಿ ಬೇರೆಯವರು ಸತ್ತರೆ ವಾರಿಯರ್ಸ್. ಅದೇ ಬಿಎಂಟಿಸಿ ಸಿಬ್ಬಂದಿ ಅವರು ಮಾಮೂಲಿ ನೌಕರರೇ? ಇದಕ್ಕೆ ಉತ್ತರ ಕೊಡುವವರು ಯಾರು..?

ಕೊರೋನಾ ಸಾವುಗಳ ಅಂಕಿಸಂಖ್ಯೆಗಳ ಬಗ್ಗೆ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಪತ್ರಿಕೆ ಮಾತನಾಡಿಸಿದಾಗ ಕೊರೋನಾ ಶುರುವಾದಾಗಿನಿಂದ ಆಗಸ್ಟ್ ತಿಂಗಳ ವರೆಗೆ ಕೊರೋನಾದಿಂದ 6  ಜನ ಅಧಿಕೃತವಾಗಿ ಸಾವನ್ನಪ್ಪಿದ್ದಾರೆ ಎಂದರು.ಆದರೆ ದಿನಂಪ್ರತಿ ಸಾರಿಗೆ ಸಂಸ್ಥೆಯ ನೌಕರರ ವಾಟ್ಸ್‌ಪ್ ಗ್ರೂಪ್‌ಗಳಲ್ಲಿ ಕನಿಷ್ಠ 2-3  ಕೊರೋನಾ ಸಾವುಗಳಾಗುತ್ತಿವೆಯಲ್ಲ ಅದು ಸುಳ್ಳಾ? ಎಂದು ಪ್ರಶ್ನಿಸಿದರೆ ಅವೆಲ್ಲವನ್ನೂ ಕೊರೋನಾ ಸಾವುಗಳೆಂದು ಒಪ್ಪಲು ಆಗುವುದಿಲ್ಲ. ನಮಗೆ ಅಧಿಕೃತವಾಗಿ ಆಸ್ಪತ್ರೆಗಳಿಂದ ದೃಢೀಕರಣ ಬೇಕು. ಆ ರೀತಿಯ ನಿರೀಕ್ಷೆಯಲ್ಲಿರುವ ಪ್ರಕರಣಗಳೇ ಸಾಕಷ್ಟಿವೆ ಎನ್ನುತ್ತಾರೆ.

ಇನ್ನು ಕೊರೋನಾ ಸಂದರ್ಭದಲ್ಲಿ ಸಾರಿಗೆ ನೌಕರರ ಹಿತವನ್ನು ಸಂಪೂರ್ಣವಾಗಿ ಆಡಳಿತ ಮಂಡಳಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ) ಮುಖಂಡ ಅನಂತಸುಬ್ಬರಾವ್ ಕೇವಲ ಬಿಎಂಟಿಸಿ ಒಂದರಲ್ಲೇ ಈವರೆಗೂ ಕೊರೋನಾಕ್ಕೆ 19  ಸಿಬ್ಬಂದಿಗಳು ಬಲಿಯಾಗಿರುವ ಮಾಹಿತಿ ತಮಗಿದೆ.500 ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. 600  ಸಿಬ್ಬಂದಿ ಗುಣಮುಖರಾಗಿ ತೆರಳಿದ್ದಾರೆ ಎನ್ನುತ್ತಾರೆ. ಕ್ವಾರಂಟೈನ್‌ನಲ್ಲಿರುವ ಇನ್ನೊಂದಷ್ಟು ಸಿಬ್ಬಂದಿಗಳ ಆರೋಗ್ಯವೂ ಕೊರೋನಾ ಕಾರಣಕ್ಕೆ ಬಿಗಡಾಯಿಸಿದೆ. ಸಾವಿನ ಸಂಖ್ಯೆ ಮತ್ತುಷ್ಟು ಹೆಚ್ಚಾಗುವ ಆತಂಕವಿದೆ. ಆದರೆ ಸಂವೇದನೆಯೇ ಇಲ್ಲದ ಆಡಳಿತ ಮಂಡಳಿಯಿಂದ ನೌಕರರು ಏನೂ ನಿರೀಕ್ಷಿಸದ ಸ್ಥಿತಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಬಿಎಂಟಿಸಿಯಲ್ಲಿ ಕೊರೋನಾದಂತಹ ಸಂಕಷ್ಟದ ನಡುವೆಯೂ ಕೆಲಸ ಮಾಡುತ್ತಿರುವ ನೌಕರರ ಪ್ರಾಣಕ್ಕಾಗಲೀ, ಸೇವೆಗಾಗಲೀ ಕಿಂಚಿತ್ತೂ ಬೆಲೆಯೂ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ತಮ್ಮ ಅಳಲು, ನೋವು, ಆಕ್ರೋಶ, ಸಂಕಟ, ಅಸಮಾಧಾನವನ್ನೆಲ್ಲಾ ತುಟಿಕಚ್ಚಿಕೊಂಡೇ ಕೆಲಸ ಮಾಡಬೇಕಾದ ಅಸಹಾಯಕ ಸ್ಥಿತಿ ನೌಕರರದ್ದು. ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಂತೂ ತನಗೂ ಇಲಾಖೆಗೂ ಸಂಬಂಧವೇ ಇಲ್ಲ ಎನ್ನುವಷ್ಟು ತಾತ್ಸಾರ, ನಿರ್ಲಕ್ಷ್ಯ ತೋರುತ್ತಿದ್ದಾರೆ.ಹಾಗಾದರೆ ನೌಕರರ ಸಮಸ್ಯೆಗೆ ಸ್ಪಂದಿಸುವವರು ಯಾರು? ಕೊರೋನಾದಂತಹ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ನೌಕರರ ಕಣ್ಣೀರು ಒರೆಸಿ, ಅವರಿಗೆ ಧೈರ್ಯ ತುಂಬುವವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

Spread the love
Leave A Reply

Your email address will not be published.

Flash News