ಮುಖ್ಯಮಂತ್ರಿ ಬಿ.ಎಸ್ ವೈಗೆ ಸಂಕಷ್ಟ ತಂದೊಡ್ಡಿದ ಆಪ್ತ, ಸಂತೋಷ್ ರಾಜಕೀಯ ಕಾರ್ಯದರ್ಶಿ ಹುದ್ದೆ ನೇಮಕಾತಿ..

0
ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್.
CM ರಾಜಕೀಯ ಕಾರ್ಯದರ್ಶಿ ಸಂತೋಷ್.

ಬೆಂಗಳೂರು:ತನ್ನ ಯಡವಟ್ಟುಗಳಿಗಿಂತಲೂ,ತನ್ನ ನಂಬಿದವರಿಗೆ ಏನಾದ್ರೊಂದು ಮಾಡ್ಲಿಕ್ಕೋಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಗ್ಲಾಕೊಂಡಿದ್ದೇ ಹೆಚ್ಚು.ಸಾರ್ವಜನಿಕವಾಗಿ ತೇಜೋವಧೆಗೊಂಡಿದ್ದೇ ಬಹಳ.ಇದಕ್ಕೆ ಕೊಡ್ತಾ ಹೋದ್ರೆ ದಂಡಿ ಉದಾಹರಣೆಗಳು ದುತ್ತೆಂದು ನಿಲ್ಲುತ್ವೆ.ಈಗಲೂ ಅಂತದ್ದೇ ಮತ್ತೊಂದು ರಾಜಕೀಯ ಪ್ರಹಸನ ನಿರ್ಮಾಣವಾಗಿದೆ.ಅಂದ್ಹಾಗೆ ಈ ಬಾರಿ ಅವರಿಗೆ ಇಂತದ್ದೊಂದು ಸಂಕಷ್ಟ ತಂದೊಡ್ಡಿರುವವರು ಯಾರು ಗೊತ್ತಾ..ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್.ಎಲ್ಲಕ್ಕೂ ಮೀರಿ ಬಿ.ಎಸ್ ವೈ ಶಿಷ್ಯೋತ್ತಮರಲ್ಲಿ ಒಬ್ಬ.ಯೆಸ್..ಸಂತೋಷ್ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡ್ಲಿಕ್ಕೆ ಹೋಗಿ ಅವರ ನೀಡಿದ ರಾಜಕೀಯ ಕಾರ್ಯದರ್ಶಿ ಹುದ್ದೆಯೇ ಇವತ್ತು ಯಡಿಯೂರಪ್ಪ ಸಾರ್ವಜನಿಕವಾಗಿಯಷ್ಟೇ ಅಲ್ಲ,ಕಾನೂನಾತ್ಮಕವಾಗಿಯೂ ಉತ್ತರ ಕೊಡ್ಬೇಕಿದೆ..ಕನ್ನಡ ಫ್ಲಾಶ್ ನ್ಯೂಸ್ ನಲ್ಲಿದೆ ಈ EXCLUSIVE ಸ್ಟೋರಿ.

ಯೆಸ್.. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿದೆ.ಬೆಂಗಳೂರಿನ  ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಉಮಾಪತಿ ಅವರು, ಎನ್.ಆರ್ ಸಂತೋಷ್ ನೇಮಕದ ಪ್ರಸ್ತುತತೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಿದ್ದಾರಲ್ಲದೇ ನೇಮಕಾತಿಯನ್ನು ಅನೂರ್ಜಿತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವುದಲ್ಲದೇ ಸರ್ಕಾರದ ಮಟ್ಟದಲ್ಲಿಯೂ ಪತ್ರ ಬರೆದಿದ್ದಾರೆ.

ಎಲ್ಲರಿಗು ಗೊತ್ತಿರುವಂತೆ, ಎನ್,ಆರ್ ಸಂತೋಷ್, ಬಿ.ಎಸ್ ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ.ಯಡಿಯೂರಪ್ಪ ಮಾಜಿ ಹಾಗೂ ಹಾಲಿ ಇರುವಾಗಲೆಲ್ಲಾ ಅವರ ಬೇಕುಬೇಡುಗಳನ್ನೆಲ್ಲಾ ಕಾಲ ಕಾಲಕ್ಕೆ ಪೂರೈಸ್ತಾ,  ಅವರ ಬೆನ್ನಿಗೆ ನಿಂತ ಹಿತಾಕಾಂಕ್ಷಿಗಳಲ್ಲಿ ಮೊದಲಿಗರಾಗಿದ್ದವರು.ಈ ಕಾರಣಕ್ಕೆ ಯಡಿಯೂರಪ್ಪ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದರಲ್ಲದೇ ಸಂತೋಷ್ ಮೇಲಿನ ಪ್ರೀತಿಗೆ ಕ್ಯಾಬಿನೆಟ್ ದರ್ಜೆಯ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನೇ ಬಳುವಳಿಯಾಗಿ ನೀಡಿ ತಮ್ಮ ಕೊಡುಗೈ ದಾನವನ್ನು ಜಗಜ್ಜಾಹೀರುಗೊಳಿಸಿದ್ರು,.ಈ ವೇಳೆ ದೊಡ್ಡ ಮಟ್ಟದ ಆಕ್ಷೇಪ ಹಾಗೂ ಅಸಮಾಧಾನ ಕೇಳಿಬಂದಿದ್ರೂ ಉಪಕಾರ ಮಾಡಿದವರಿಗೆ ಸಹಾಯ ಮಾಡುವ ವಿಷಯದಲ್ಲಿ ಸಿದ್ಧಹಸ್ತರಾಗಿರುವ ಯಡಿಯೂರಪ್ಪ ತಮ್ಮ ಶಿಷ್ಯೋತ್ತಮ  ಸಂತೋಷ ವಿಷಯದಲ್ಲೂ ಯಾವುದಕ್ಕೂ ಮಣೆ ಹಾಕಲೇ ಇಲ್ಲ..

ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಉಮಾಪತಿ

ಆದರೆ ಭಾವನಾತ್ಮಕ ವಿಚಾರಗಳು ಬೇರೆ, ಕಾನೂನು ಬೇರೆ ಅಲ್ವೇ..ಎನ್ನೋದು ಪಾಪ ಯಡಿಯೂರಪ್ಪ ಅವರಿಗೆ ಗೊತ್ತಾಗ್ಲಿಲ್ವೇನೋ ಅನ್ಸುತ್ತೆ.ಏಕೆಂದ್ರೆ ಸಂತೋಷ್ ಅವರ ನೇಮಕಾತಿಯನ್ನು ಕಾನೂನಾತ್ಮಕವಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಉಮಾಪತಿ ಅವರು ಪ್ರಶ್ನಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಸಂತೋಷ್ ಅವರ ನೇಮಕಾತಿ ಅಸಿಂಧು-ಕಾನೂನುಬದ್ಧವಾಗಿ ಅಕ್ರಮ ಎಂಬ ವಾದ ಮುಂದೊಡ್ಡಿದ್ದಾರೆ.ಆದರೆ ಉಮಾಪತಿ ಅವರ ದೂರನ್ನು ಡಿಪಿಎಆರ್ ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಸಿಬ್ಬಂದಿ ಸ್ವೀಕರಿಸಲು ನಿರಾಕರಿಸಿದ್ದಾರೆನ್ನಲಾಗಿದೆ.ಅವರ ನಿರಾಕರಣೆ ಹಿಂದೆ ಮುಖ್ಯ ಮಂತ್ರಿಗಳ ಕಚೇರಿಯ ನೇರ ಹಸ್ತಕ್ಷೇಪ ಹಾಗೂ ಒತ್ತಡವಿದೆ ಎನ್ನುವುದು ದೂರುದಾರ ಉಮಾಪತಿ ಅವರ ಆರೋಪ.

ರಾಜಕೀಯವಾಗಿ ಯಾವುದೇ ಸ್ಥಾನಮಾನದಲ್ಲಿಲ್ಲದ ಖಾಸಗಿ ವ್ಯಕ್ತಿಯನ್ನು ರಾಜಕೀಯ ಕಾರ್ಯದರ್ಶಿ ಮಾಡುವ ಅವಕಾಶಗಳೇ ಕಾನೂನಿನಲ್ಲಿಲ್ಲ.ಸಂತೋಷ್ ತನ್ನ ಸದಾಶಯ ಬಯಸುವ ಹಿತಾಕಾಂಕ್ಷಿ ಗಳ ಎನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ,ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ.. ಈ ವಿಷಯದಲ್ಲಿ ಯಡಿಯೂರಪ್ಪ ಅವರಿಂದ ಅಧಿಕಾರ ದುರುಪಯೋಗವಾಗಿದೆ.

ತೋಷ್ ಅವರಿಂದ ಯಡಿಯೂರಪ್ಪ ಅವರಿಗೆ ಉಪಕಾರವಾಗಿದ್ದರೆ ಅದನ್ನು ಅವರು ಬೇರೆ ಯಾವುದಾದ್ರೂ ರೂಪದಲ್ಲಿ ತೀರಿಸಲಿ.ಯಾರು ಬೇಡ ಎಂದವರು.ಆದ್ರೆ ಅದಕ್ಕಾಗಿ ತಮ್ಮ ಹುದ್ದೆಯ ಘನತೆ-ಅಧಿಕಾರದ ಗಾಂಭೀರ್ಯತೆಯನ್ನು ಮರೆತು ಅಧಿಕಾರಯುತವಾಗಿ ಅರ್ಹರೇ ಅಲ್ಲದವರಿಗೆ ರಾಜಕೀಯದ ಸ್ಥಾನಮಾನ ಕಲ್ಪಿಸುವುದು ಸೂಕ್ತವಲ್ಲ ಎನ್ನುವ ವಾದ ಮುಂದೊಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ಉಮಾಪತಿ ಕೋರ್ಟ್ ನಲ್ಲಿ ಸಲ್ಲಿಕೆ ಮಾಡಿದ್ದಾರೆನ್ನಲಾಗಿದೆ.

ಕೋರ್ಟ್ ನಲ್ಲೂ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಮಾಪತಿ ಅಂಡ್ ಹಿಸ್ ಟೀಮ್ ದಾಖಲಿಸಿದೆಯಂತೆ.ಖಾಸಗಿ ವ್ಯಕ್ತಿಗೆ  ಸರ್ಕಾರದ ಮಟ್ಟದಲ್ಲಿ ಅವಕಾಶವೇ ಇಲ್ಲದ   ಹುದ್ದೆಯನ್ನು ಕಲ್ಪಿಸಿ ಅವರಿಗೆ ಎಲ್ಲಾ ರೀತಿಯ ಸವಲತ್ತು ನೀಡಿರುವುದು ಕಾನೂನುಬಾಹೀರ.ಹಾಗಾಗಿ ಈ ಕೂಡಲೇ ಸಂತೋಷ್ ಅವರ ನೇಮಕಾತಿಯನ್ನು ರದ್ದುಪಡಿಸುವ ನಿರ್ಧಾರ ಸರ್ಕಾರ ಕೈಗೊಳ್ಳಬೇಕು.ಇಲ್ಲವಾದಲ್ಲಿ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಗಂಭೀರಗೊಳಿಸಬೇಕಾಗುತ್ತೆ ಎಂದು ಉಮಾಪತಿ ದೂರಿನಲ್ಲಿ ಎಚ್ಚರಿಸಿದ್ದಾರೆ.

ಅದೇನೇ ಆಗಲಿ,ಯಾವುದೋ ಭಾವಾವೇಶದಲ್ಲಿ,ಭಾವನಾತ್ಮಕತೆಗೆ ಒಳಗಾಗಿ ತನಗೆ ಮಾಡಿದ ಉಪಕಾರಕ್ಕೋಸ್ಕರ ಕಾನೂನಾತ್ಮಕವಾಗಿ ಊರ್ಜಿತವಲ್ಲದ ಹುದ್ದೆಯನ್ನು ಸಂತೋಷ್ ಅವರಿಗೆ ನೀಡಿರುವುದು ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊಡ್ಡ ಸಂಕಷ್ಟ-ಸಂಕಟವನ್ನು ತಂದೊಡ್ಡಿದೆ..ಇದನ್ನು ವಿಪಕ್ಷಗಳು ಅಸ್ತ್ರ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ..ಏನೋ ಮಾಡಲು ಹೋಗಿ ಏನನ್ನೋ ಮಾಡಿ ಈಗ ಕಾನೂನುಬಿಕ್ಕಟ್ಟಿನಲ್ಲಿ ಸಿಲುಕಾಕಿಕೊಂಡಿರುವ ಯಡಿಯೂರಪ್ಪ ಅವರ ಸ್ಥಿತಿಗೆ ಅಳಬೇಕೋ..ನಗಬೇಕೋ ಗೊತ್ತಾಗ್ತಿಲ್ಲ..ಒಟ್ಟಿನಲ್ಲಿ ಈ ಪ್ರಕರಣದ ಮೂಲಕ ಬಿ.ಎಸ್ ಯಡಿಯೂರಪ್ಪ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿರುವುದಂತೂ ಸತ್ಯ.

Spread the love
Leave A Reply

Your email address will not be published.

Flash News