ಕೊರೊನಾ ಕಂಟ್ರೋಲ್ ನಲ್ಲಿ ಕರ್ನಾಟಕದ್ದು ಕಳಪೆ ಸಾಧನೆ:ಕೇಂದ್ರ ಆರೋಗ್ಯ ಇಲಾಖೆ ಇಂತದ್ದೊಂದು ಸರ್ಟಿಫಿಕೇಟ್ ಕೊಡ್ಲಿಕ್ಕೆ ಕಾರಣವೇನ್ ಗೊತ್ತಾ..?

0

ಬೆಂಗಳೂರು:ಕೊರೋನಾ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಇತರ ಎಲ್ಲಾ ರಾಜ್ಯಗಳಿಗಿಂತ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಬಂಡವಾಳ ಬಟಾ ಬಯಲಾಗಿದೆ. ಇಷ್ಟು ತಿಂಗಳ ಅವಧಿಯಲ್ಲಿ ನಮ್ಮ ರಾಜ್ಯ ಕಿತ್ತು ದಬ್ಬಾಕಿದ್ದು ಅಷ್ಟರಲ್ಲೇ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ಸರ್ಟಿಫಿಕೇಟು ನೀಡಿರುವುದು ನಮ್ಮ ಸರ್ಕಾರ ದ ಯೋಗ್ಯತೆ ಏನೆಂಬುದನ್ನು ತೋರಿಸುತ್ತದೆ.

ಕೋವಿಡ್-19 ರ ತಪಾಸಣೆಗೆ ಅನ್ವಯವಾಗುವಂತೆ ಐಸಿಎಂಆರ್‌ನಲ್ಲಿ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ 53  ಮೆಡಿ ಕಲ್ ಕಾಲೇಜುಗಳು ರಿಜಿಸ್ಟರ್ ಆಗಿದ್ದವು. ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ಕೊರೋನಾ ನಿಯಂತ್ರ ಣ ಮಾಡಬೇಕಾಗಿದ್ದು ಇವುಗಳ ಆದ್ಯ ಕರ್ತವ್ಯವಾಗಿತ್ತು. ಆದರೆ ಆರಂಭಶೂರತ್ವ ಎನ್ನುವಂತೆ ಪೈಪೋಟಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ಈ ಆಸ್ಪತ್ರೆಗಳು ಈಗ ಆ ಆಸಕ್ತಿಯನ್ನೇ ಕಳೆದುಕೊಂಡಿವೆಯಂತೆ. ಇದೆಲ್ಲವೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಸಿಎಂಆರ್ ನೀಡಿರುವ ಪ್ರಮಾಣ ಪತ್ರದಲ್ಲೇ ಉಲ್ಲೇಖವಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪ್ರೊಫೆಸರ್ ಬಲರಾಮ್ ಭಾರ್ಗವ ಸೆಪ್ಟೆಂಬರ್ 29 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ರವರಿಗೆ ಪತ್ರವೊಂದನ್ನು ಬರೆದು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕರ್ನಾಟಕದ ನಿರಾಸಕ್ತಿ ಮತ್ತು ಕಳಪೆ ಸಾಧನೆಯನ್ನು ತೀಕ್ಷ್ಣ ಪದಗಳಲ್ಲಿ ಟೀಕಿಸಿದ್ದರು. ಕಾಲೇಜುಗಳು ಲಾಭಕ್ಕೆ ಹೇಗೆ ಬಾಯಿ ಬಿಡುತ್ತವೋ ಹಾಗೆ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಬೇಕಿತ್ತು.

ಆದರೆ ಅದನ್ನು ನಿರ್ಲಕ್ಷಿಸಿರುವುದೇ ಕೋವಿಡ್ ತಪಾಸಣೆಯಲ್ಲಿ ರಾಜ್ಯ ಹಿಂದುಳಿಯಲು ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪ್ರತಿಯನ್ನು ವಿಜಯಭಾಸ್ಕರ್ ಸರ್ಕಾರಕ್ಕೂ ರವಾನಿಸಿದ್ದರು. ಆನಂತರವೇ ಮುಜುಗರಕ್ಕೀಡಾದ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀರಾಮುಲು ಮತ್ತು ಡಾ. ಸುಧಾಕರ್‌ರವರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದರು. ಇದರ ಪರಿಣಾಮವೇ ಶ್ರೀರಾಮುಲು ಕೈಯಿಂದ ಆರೋಗ್ಯ ಇಲಾಖೆ ಕೈ ತಪ್ಪಿತ್ತು ಎನ್ನುವುದು ಗಮನಾರ್ಹ.

ಪ್ರತಿಯೊಂದು ವೈದ್ಯಕೀಯ ಕಾಲೇಜು ಆರ್‌ಟಿಪಿಸಿಆರ್ ಉಪಕರಣದಿಂದ ಸರಾಸರಿ 1,680  ತಪಾಸಣೆ ನಡೆಸಬೇಕಿತ್ತು. ಆದರೆ ನಮ್ಮ ರಾಜ್ಯದ ಪ್ರಗತಿ ಕೇವಲ ಶೇ. 42 . ಅದರಲ್ಲೂ ಸೆಪ್ಟೆಂಬರ್‌ನಲ್ಲಿ ತಪಾಸಣೆಯ ಪ್ರಮಾಣ ಶೇ. 13.5ಕ್ಕೆ ಕುಸಿತಗೊಂಡಿರುವುದಕ್ಕೆ ಆರೋಗ್ಯ ಇಲಾಖೆ ಆಕ್ರೋಶದೊಂದಿಗೆ ಕಳವಳವನ್ನೂ ವ್ಯಕ್ತಪಡಿಸಿತ್ತು. 2020ರ ಅಕ್ಟೋಬರ್ 10 ರವರೆಗೆ ಒಟ್ಟು 10  ಲಕ್ಷ ಜನಕ್ಕೆ ಆರ್‌ಟಿಪಿಸಿಆರ್ ಪರೀಕ್ಷೆಗಳಾಗಿವೆ.

ದೆಹಲಿಯಲ್ಲಿ 2.40  ಲಕ್ಷದಷ್ಟು ಆರ್‌ಟಿಪಿಸಿಆರ್‌ಗಳಾಗಿದ್ದಾರೆ. ಕಾಶ್ಮೀರದಲ್ಲಿ 1.61  ಲಕ್ಷ, ಆಂಧ್ರದಲ್ಲಿ 1.43  ಲಕ್ಷ, ಅಸ್ಸಾಂನಲ್ಲಿ 1.39 ಲಕ್ಷ ಹಾಗೆಯೇ ತಮಿಳುನಾಡಿನಲ್ಲಿ 1.25  ಲಕ್ಷದಷ್ಟು ಆರ್‌ಟಿಪಿಸಿಆರ್ ತಪಾಸಣೆಗಳಾಗಿವೆ. ಆದರೆ 65  ಲಕ್ಷ ಜನಸಂಖ್ಯೆಯ ನಮ್ಮ ರಾಜ್ಯದಲ್ಲಿ ಆದದ್ದು ಕೇವಲ 1,10,360 ರಷ್ಟು ಮಾತ್ರ. ಇದರಲ್ಲೇ ನಮ್ಮ ಸರ್ಕಾರಗಳ ಕಾಳಜಿ ಕೊರೋನಾ ಸೋಂಕಿನ ವಿಷಯದಲ್ಲಿ ಎಷ್ಟಿದೆಯೆನ್ನುವುದು ಅರ್ಥವಾಗುತ್ತದೆ.

ಆರ್‌ಟಿಪಿಸಿಆರ್ ತಪಾಸಣೆಗಳು ಸರಿಯಾಗಿ ನಡೆದಿದ್ದೇ ಆದರೆ ಸಮಸ್ಯೆ ಇಷ್ಟೊಂದು ಉಲ್ಬಣವಾಗುತ್ತಿರಲಿಲ್ಲ. ಇವೊತ್ತು ರಾಜ್ಯದ ಪರಿಸ್ಥಿತಿ ಕೊರೋನಾ ವಿಷಯದಲ್ಲಿ ತೀವ್ರ ಹದಗೆಟ್ಟಿರುವುದಕ್ಕೆ ವೈದ್ಯಕೀಯ ಕಾಲೇಜುಗಳ ನಿರ್ಲಕ್ಷ್ಯವೇ ಕಾರಣ ಎಂದು ಆಪಾದಿಸಿರುವ ಕೇಂದ್ರ ಆರೋಗ್ಯ ಇಲಾಖೆಯೇ ಮರಣದ ಅಂಕಿ-ಅಂಶಗಳನ್ನೂ ಪ್ರಕಟಿಸಿದೆ. ಈ ಪೈಕಿ 2019 ರ ಜುಲೈನಿಂದ ಸೆಪ್ಟೆಂಬರ್‌ವರೆಗೆ 16,670 ಸಾವುಗಳು ಸಾಮಾನ್ಯ ಕಾರಣಗಳಿಂದಾಗಿವೆ. ಅದೇ ಕೊರೋನಾ ತನ್ನ ವಿಧ್ವಂಸಕತೆಯನ್ನು ಮೆರೆಯಲಾರಂಭಿಸಿದ ಸಂದರ್ಭ ಅಂದರೆ 2020 ರಲ್ಲಿ 3 ತಿಂಗಳ ಅವಧಿಯಲ್ಲೇ 24,572 ಜನ ಮರಣ ಹೊಂದಿದ್ದಾರೆ.

ಮರಣ ಪ್ರಮಾಣ ಇಷ್ಟೊಂದು ಹೆಚ್ಚಲು ಕೊರೋನಾ ಹೇಗೆ ಕಾರಣವೋ ಅದನ್ನು ನಿಯಂತ್ರಿಸುವಲ್ಲಿ ಸಶಕ್ತ ಮತ್ತು ಸಮರ್ಥವಾಗಿ ಕೆಲಸ ಮಾಡಬೇಕಿದ್ದ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ, ನಿರಾಸಕ್ತಿ, ನಿರ್ಲಜ್ಜತನವೂ ಕಾರಣವೇ ಎನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಕೇಂದ್ರ ಸರ್ಕಾರ ನೀಡಿರುವ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಾದರೂ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಳ ಮಾಡಿ ಕೊರೋನಾದಿಂದ ರಾಜ್ಯದ ಜನರನ್ನು ರಕ್ಷಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ.

 

Spread the love
Leave A Reply

Your email address will not be published.

Flash News