ಹಳಿ ತಪ್ಪಿದ ಹೋರಾಟಗಳಿಗೆ ದಿಕ್ಸೂಚಿಯಾಗಲಿದೆಯಾ “ನೈಜ ಹೋರಾಟಗಾರರು” ಪಡೆ

0

ಬೆಂಗಳೂರು:ನಂಬಿಕೆ-ನಿರೀಕ್ಷೆ ಕಳೆದೋಗುತ್ತಿರುವ ಬೇಸರದ ಸನ್ನಿವೇಶದ ನಡುವೆ ಒಂದು ಬೆಳ್ಳಿಗೆರೆಯ ಬೆಳವಣಿಗೆ ಇದು.. ಸ್ವಹಿತಾಸಕ್ತಿ, ಲಾಭಕೋರತನ, ಹಣ ಮಾಡುವ ದುರುದ್ದೇಶಗಳಿಗೆ ಸೀಮಿತವಾಗುತ್ತಿರುವ ಕಾರಣಕ್ಕೆ ಇಂದಿನ  ಹೋರಾಟ, ಚಳವಳಿಗಳು ಅರ್ಥ ಕಳೆದುಕೊಂಡಿವೆ. ಬಹುತೇಕ ಹೋರಾಟಗಳ ಹಿಂದಿನ ಉದ್ದೇಶ ಬ್ಲ್ಯಾಕ್‌ಮೇಲ್ ತಂತ್ರಗಾರಿಕೆ ಮತ್ತು ಹಣ ಗಳಿಕೆಯಾಗುತ್ತಿರುವುದರಿಂದ ನೈಜ ಹೋರಾಟಗಳಿಗೆ ನೆಲೆ-ಬೆಲೆ ಇಲ್ಲದಂತಾಗಿದೆ.

ಇಂತಹ ನಿರಾಶಾದಾಯಕ ವಾತಾವರಣದ ನಡುವೆಯೂ ಒಂದಷ್ಟು ಸಾಮಾಜಿಕ ಕಳಕಳಿಯುಳ್ಳ ಮೌಲ್ಯಧಾರಿತ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತರು ರಾಜ್ಯ ಮಟ್ಟದಲ್ಲಿ ಒಂದು ಸಂಘಟನೆಯ ಸೂರಿನಡಿ ಒಂದಾಗಲು ನಿರ್ಧರಿಸಿದ್ದಾರೆ. ಇವರ ಐಕ್ಯತೆಯ ಹೋರಾಟದ ವೇದಿಕೆಗೆ ಇಟ್ಟಿರುವ ಹೆಸರು `ನೈಜ ಹೋರಾಟಗಾರರು’.

ಲಂಚಮುಕ್ತ ಕರ್ನಾಟಕದಂತಹ ಭ್ರಷ್ಟಾಚಾರ ವಿರೋಧಿ ಸಂಘಟನೆಯನ್ನು ಹುಟ್ಟುಹಾಕಿದ ರವಿಕೃಷ್ಣಾ ರೆಡ್ಡಿ ತಮ್ಮ ಕಾರ್ಯದಕ್ಷತೆಯ ಮೂಲಕವೇ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದ ಕರ್ನಾಟಕದ ಖೇಮ್ಕಾ ಖ್ಯಾತಿಯ ಕೆ. ಮಥಾಯ್, ಶಾಸಕರು ಹಾಗೂ ಕಾರ್ಪೊರೇಟರ್‍ಸ್‌ಗಳ ಸಾಕಷ್ಟು ಅಕ್ರಮಗಳನ್ನು ತಮ್ಮ ಹೋರಾಟಗಳ ಮೂಲಕ ಬಯಲು ಮಾಡುತ್ತಾ ಬಂದಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರನ್ನೊಳಗೊಂಡ ಹೋರಾಟಗಾರರ ತಂಡ ನೈಜ ಹೋರಾಟಗಾರರು ವೇದಿಕೆಯನ್ನು ಸಿದ್ಧಮಾಡುತ್ತಿದೆ.

ಒಬ್ಬ ವ್ಯಕ್ತಿಯಾಗಿ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕಿಂತ, ಒಂದು ಸಂಘಟನೆಯಾಗಿ ಸಮಾನ ಮನಸ್ಕ ಹೋರಾಟಗಾರರು ಒಂದು ವೇದಿಕೆಯಲ್ಲಿ ಒಗ್ಗೂಡಿದರೆ ಅದರ ಪರಿಣಾಮ ಹಾಗೂ ಅದರ ವ್ಯಾಪಕತೆ ಹೆಚ್ಚು ಗಂಭೀರವಾಗುವ ಚಿಂತನೆಯಲ್ಲಿ ನೈಜ ಹೋರಾಟಗಾರರ ತಂಡ ಅಣಿಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಎಲ್ಲಾ ರೀತಿಯ ಅಕ್ರಮ ಅವ್ಯವಹಾರ, ಭ್ರಷ್ಟಾಚಾರ, ಹಗರಣಗಳ ವಿರುದ್ಧ ಜನಾಂದೋಲನವನ್ನು ರೂಪಿಸುವುದಷ್ಟೇ ಅಲ್ಲ. ಅಕ್ರಮದಲ್ಲಿ ಭಾಗಿಯಾಗುವ ಚುನಾಯಿತರು ಹಾಗೂ ಅಧಿಕಾರಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗುವವರೆಗೂ ಹೋರಾಟ ನಡೆಸಿ ಅದಕ್ಕೊಂದು ತಾರ್ಕಿಕ ಅಂತ್ಯ ನೀಡುವುದು ನೈಜ ಹೋರಾಟಗಾರರ ತಂಡದ ಗುರಿ, ಉದ್ದೇಶ, ಆದರ್ಶ ಹಾಗೂ ಧ್ಯೇಯವಾಗಲಿದೆ ಎಂದು ವೇದಿಕೆಯ ಸಂಚಾಲಕ ಎಚ್.ಎಂ.ವೆಂಕಟೇಶ್ ತಿಳಿಸಿದ್ದಾರೆ.

ನೈಜ ಹೋರಾಟಗಾರರು ಹಾಗೆಯೇ ನಿಸ್ವಾರ್ಥ ಮನೋಭಾವನೆಯಲ್ಲಿನ ಹೋರಾಟಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೈಜ ಹೋರಾಟಗಾರರ ವೇದಿಕೆ ಅಸ್ತಿತ್ವಕ್ಕೆ ಬರುತ್ತಿರುವುದು ಒಂದು ರೀತಿ ಸಮಾಧಾನಕರ ವಿಷಯ ಅಲ್ಲವೇ…? ಕನ್ನಡ ಫ್ಲಾಶ್ ನ್ಯೂಸ್ ನೈಜ ಹೋರಾಟಗಾರರ ವೇದಿಕೆ ಮೂಲಕ ಮತ್ತೊಂದು ಕ್ರಾಂತಿಯಾಗಲಿ..ಹೋರಾಟಗಳು ಚಿರಾಯುವಾಗಲಿ ಎಂದು ಆಶಿಸುತ್ತದೆಯಷ್ಟೇ ಅಲ್ಲ,ಹೋರಾಟಗಾರರಿಗೆ ಸದಾ ಬೆಂಬಲವಾಗಿ ನಿಲ್ಲಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ..ಹೋರಾಟಗಾರರಿಗೆ ಆಲ್ ದಿ ಬೆಸ್ಟ್..

Spread the love
Leave A Reply

Your email address will not be published.

Flash News