ಬೆಂಗಳೂರು: 6960 ಕೇಸ್ ಗಳನ್ನು ವಜಾಗೊಳಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು ಹೇಳಿಕೆ ಕೊಟ್ಟಿರುವುದು ದೊಡ್ಡ ಸಂಚಲನ ಮೂಡಿಸಿದೆ.ಸಂಸ್ಥೆಗೆ  25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂತದ್ದೊಂದು ಘೋಷಣೆ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ದಂಡನೆಗೆ ಒಳಗಾಗಿದ್ದ ಸಾರಿಗೆ ಸಿಬ್ಬಂದಿಗೆ ಈ ಘೋಷಣೆ ಸಂತಸವನ್ನುಂಟುಮಾಡಿದೆ. ಇದನ್ನು ಐತಿಹಾಸಿಕ ಘೋಷಣೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಬಿಎಂಟಿಸಿ ಇತಿಹಾಸದಲ್ಲಿ ಇಂತಹ ಬೆಳವಣಿಗೆಯನ್ನು ಐತಿಹಾಸಿಕ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಆದರೆ ಸತ್ಯವತಿ ಅವರು ಈ ಶಿಕ್ಷೆ ರದ್ದತಿಗೆ ಮಾನದಂಡ ರೂಪಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಶಿಕ್ಷೆ  ಅನುಭವಿಸುತ್ತಿದ್ದವರಿಗಷ್ಟೇ ಇದರ ಪ್ರಯೋಜನ ಲಭಿಸುತ್ತದೆ ಎನ್ನುವುದು ಕೂಡ ಸತ್ಯ.

ಒಂದೆಡೆ ಮಗುವನ್ನು ಚಿವುಟಿ,ಇನ್ನೊಂದೆಡೆ ಲಾಲಿ ಹಾಡಿ ಸುಮ್ಮನಿರಿಸುವುದು ಎಂದರೆ ಇದಕ್ಕೆ ಇರಬೇಕೇನೋ..ಅಂತದ್ದೊಂದು ಬುದ್ದಿವಂತಿಕೆ ಪ್ರದರ್ಶಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ಬಿಎಂಟಿಸಿ ಎಂಡಿ ಸತ್ಯವತಿ ಮೇಡಮ್..ಎಷ್ಟೇ ಆದ್ರೂ ಅವರು ಐಎಎಸ್ ಅಲ್ವೇ..ಆಡಳಿತವನ್ನು ನಯನಾಜೂಕಿನಿಂದ ಹೇಗೆ ನಿಭಾಯಿಸಬೇಕೆನ್ನುವುದನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿರುತ್ತಾರೆ.ಹಾಗಾಗಿ ಯಾವ್ ಸನ್ನಿವೇಶದಲ್ಲಿ ಯಾವ್ ರೀತಿ ವ್ಯವಹರಿಸಬೇಕು.ಯಾವ್ ನಿಯಮವನ್ನು ಕಾರ್ಯಗತಗೊಳಿಸಬೇಕೆನ್ನುವುದು  ಗೊತ್ತಿರುತ್ತದೆ.

ಸತ್ಯವತಿ ಅವರ ಧೋರಣೆ,ನಿಲುವು,ಘೋಷಣೆಗಳ ಬಗ್ಗೆ ಒಂದಷ್ಟು ಅಸಮಾಧಾನವಿದ್ದರೂ ಆಡಳಿತ ನಿರ್ವಹಣೆ ಮತ್ತು  ಕಾರ್ಯವೈಖರಿ ಬಗ್ಗೆ ನಮ್ಮದೂ ಆಕ್ಷೇಪವಿಲ್ಲ.ಆದರೆ ಹಾಗಂತ ಮೇಡಮ್ ಮಾಡಿದ್ದನ್ನೆಲ್ಲಾ ಪ್ರಶ್ನಿಸುವ ಗೋಜಿಗೂ ಹೋಗದೆ,ವಿಶ್ಲೇಷಣೆ-ತರ್ಕಕ್ಕೆ ಒಡ್ಡದೆ  ಬೆಂಬಲಿಸುವ ಜಾಯಮಾನ ಕನ್ನಡ ಫ್ಲ್ಯಾಶ್ ನ್ಯೂಸ್ ದ್ದು ಅಲ್ಲವೇ ಅಲ್ಲ.ಮಾದ್ಯಮಗಳು ಅದರಲ್ಲೂ ಮುಂಚೂಣಿ ಯಲ್ಲಿರುವ ಮಾದ್ಯಮಗಳು ಸತ್ಯವತಿ ಅವರ ಕಾರ್ಯವೈಖರಿಯಲ್ಲಿನ ಕೆಲವು ಲೋಪದೋಷಗಳನ್ನು ವರದಿ ಮಾಡುವ ವಿಷಯ ಒತ್ತಟ್ಟಿಗಿರಲಿ,ವಿಮರ್ಷಿಸುವ ಗೋಜಿಗೂ ಹೋಗ್ತಿಲ್ಲ ಎನ್ನುವುದಷ್ಟೇ ನಮ್ಮ ಬೇಸರ.ಮಾದ್ಯಮಗಳೇ ಆಳುವ ಸರ್ಕಾರ ಹಾಗೂ ಅಧಿಕಾರಶಾಹಿಗಳ “ತುತ್ತೂರಿ”ಗಳಾದ್ರೆ ಮಾದ್ಯಮಗಳ ಬಗ್ಗೆ ಸಾರ್ವಜನಿಕವಾಗಿ ನಂಬಿಕೆ ಉಳಿಯೊಕ್ಕೆ ಸಾಧ್ಯನಾ..? ಖಂಡಿತಾ ಇಲ್ಲ, ಬಿಎಂಟಿಸಿಯಲ್ಲಿ ನಡೆಯುತ್ತಿರುವ ವಿಷಯದಲ್ಲಿ ಬಹುತೇಕ ಮಾದ್ಯಮಗಳಿಂದ ಆಗುತ್ತಿರುವುದು ಕೂಡ ಇದೇ..

ಬಿಎಂಟಿಸಿ ಎಂಡಿ ಸತ್ಯವತಿ ಅವರ ಕಚೇರಿಯಿಂದ 19-12-2023 ರಂದು ಹೊರಡಿಸಲಾದ ಆದೇಶವನ್ನು SOME ಮಾದ್ಯಮಗಳು ಐತಿಹಾಸಿಕ ಎನ್ನುವಂತೆ ಪ್ರಸಾರ ಮಾಡಿದ್ವು.ಅದ್ಯಾವ ಕಾರಣಕ್ಕೆ ಮಾದ್ಯಮಗಳಿಗೆ ಇದು ಐತಿಹಾಸಿಕ ಎನಿಸ್ತೋ ಗೊತ್ತಿಲ್ಲ.( ಯಾಕೆ ಕೆಎಸ್ ಆರ್ ಟಿಸಿ ಎಂಡಿ ಆಗಿರುವ ಅನ್ಬುಕುಮಾರ್ ಅವರೇ ಈ ಹಿಂದೆ  ಸಾವಿರಾರು ಪ್ರಕರಣಗಳನ್ನು ಯಾವುದೇ ಷರತ್ತಿಲ್ಲದೆ ರದ್ದು ಮಾಡಿ ಇತಿಹಾಸ ಸೃಷ್ಟಿಸಿರೋದು ಈ ಮಾದ್ಯಮಗಳ ನೆನಪಿಗೆ ಬರಲಿಲ್ಲವೇ..?) ಮೇಡಮ್ ಸತ್ಯವತಿ ಅವರಿಂದ ಹೊಸ ಇತಿಹಾಸ ನಿರ್ಮಾಣ,ಬೆಳ್ಳಿಹಬ್ಬದ ಸ್ಮರಣಾರ್ಥ ಸಾರಿಗೆ ಸಿಬ್ಬಂದಿಗೆ ಬಂಪರ್ ಕೊಡುಗೆ ಎನ್ನುವಂತೆ ದಿನವಿಡೀ ಬ್ರೇಕಿಂಗ್,ಸ್ಕ್ರಾಲ್ ಗಳಲ್ಲಿ ಸುದ್ದಿಯನ್ನು ವಿಜ್ರಂಭಿಸಿದ್ದು ಅದೇಕೋ ಸರಿ ಎನಿಸಲಿಲ್ಲ.

ಸಾರಿಗೆ ಸಿಬ್ಬಂದಿಯ ಪ್ರಾತಿನಿಧಿಕ ಚಿತ್ರ
                                                                                                                                                                                                          (ಸಾರಿಗೆ ಸಿಬ್ಬಂದಿಯ ಪ್ರಾತಿನಿಧಿಕ ಚಿತ್ರ)

ಕೆಲವು ಮಾದ್ಯಮಗಳಿಗೆ ಮೇಡಮ್ ಮಾಡಿದ್ದು ಮಹದುಪಕರಾದ ಕೆಲಸ ಎಂದೆನಿಸಿರಬಹುದೇನೋ ಆದರೆ ಸಾರಿಗೆ ಸಿಬ್ಬಂದಿ ವಲಯದಲ್ಲಿ ಇದನ್ನು ಸ್ವಾಗತಾರ್ಹ ಬೆಳವಣಿಗೆ ಎಂದು ಪರಿಗಣಿಸುತ್ತಿಲ್ಲ ಎನ್ನುವುದೇ ವಾಸ್ತವ.ಏಕೆಂದರೆ ಮೇಡಮ್ ಅವರ ಉಪಕಾರ “ಲಘು ಪ್ರಮಾಣ”ದ್ದೆನ್ನಬಹುದಾದ ಅಥವಾ ಗಂಭೀರಸ್ವರೂಪದ್ದಲ್ಲದ ಸಣ್ಣಪುಟ್ಟ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತದೆಯೆ ಹೊರತು ,ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಮಾನತ್ತಾದ,ಡಿಸ್ಮಿಸ್ ಆದ, ಡಿಸ್ಮಿಸ್ ಆಗಿ ಮತ್ತೆ ಷರತ್ತುಗಳ ಮೇಲೆ ಸಹಿ ಹಾಕಿ ನಿಯೋಜನೆಗೊಂಡ ಸಿಬ್ಬಂದಿಗಲ್ಲವಂತೆ.ಬಹುತೇಕರನ್ನು ಈ   ಉಪಕಾರದ ಸ್ಕೀಂನಿಂದ ಹೊರಗಿಡಲಾಗಿದೆ ಎನ್ನುವ ಮಾತುಗಳಿವೆ.ಸತ್ಯವತಿ ಅವರು ನಮ್ಮನ್ನು ಪರಿಗಣಿಸು ವ ಕೆಲಸ ಮಾಡಿದಿದ್ದರೆ ನಾವಷ್ಟೇ ಅಲ್ಲ ನಮ್ಮ ಇಡೀ ಕುಟುಂಬ ಅವರಿಗೆ ಅಭಾರಿಯಾಗಿರುತ್ತಿದ್ದೆವೇನೋ? ಎನ್ನುತ್ತಾರೆ ಡಿಸ್ಮಿಸ್ ಆಗಿ ಮತ್ತೆಷರತ್ತಿನ ಅನ್ವಯ ಕೆಲಸ ಮಾಡುತ್ತಿರುವ ಬಹುತೇಕ ಡ್ರೈವರ್ಸ್.

ಎಚ್ಚರಿಕೆ ನೀಡಿ ಶಿಕ್ಷೆಯಿಂದ ಮುಕ್ತಿಗೊಳಿಸಿದ್ದರೆ ಉಪಕಾರವಾಗುತ್ತಿತ್ತೇನೋ.. ಎಚ್ಚರಿಕೆ ನೀಡಿ ಪ್ರಕರಣ ಖುಲಾಸೆ ಮಾಡಿದಿದ್ದರೆ ಖುಷಿ ಪಡುತ್ತಿದ್ದೆವು.ಆದರೆ ಉಪಧನ ಮತ್ತು ಮುಂಬಡ್ತಿಯನ್ನು ಕಡಿತ ಮಾಡಿ ಶಿಕ್ಷೆ ರದ್ದು ಮಾಡಿರುವುದು ಅಷ್ಟೇನೂ ಸಮಾಧಾನ ತಂದಿಲ್ಲ.ಏಕೆಂದ್ರೆ ಈ ರೀತಿಯ ಶಿಕ್ಷೆ ರದ್ದತಿಯಿಂದ ನೌಕರರ ಅಲೆದಾಟಕ್ಕೆ ಬ್ರೇಕ್ ಬಿದ್ದಿದೆಯೇ ಹೊರತು ಅವರಿಗೆ ನೀಡಲಾಗಿದ್ದ ಪನಿಶ್ಮೆಂಟ್ ರದ್ದಾಂತಿಲ್ಲ.ಹಾಗೆ ನೋಡಿದ್ರೆ ಅನ್ಬುಕುಮಾರ್ ಹತ್ತಿರತ್ತಿರ 7000 ಪ್ರಕರಣಗಳಲ್ಲಿ ನೌಕರರಿಗೆ ಶಿಕ್ಷೆಯಿಂದ ವಿನಾಯ್ತಿ ನೀಡಿದ್ದರು.ಆ ಸಂಪ್ರದಾಯವನ್ನು ಮೇಡಮ್ ಬಿಎಂಟಿಸಿಯಲ್ಲಿ ಮುಂದುವರೆಸಿದ್ದಾರಷ್ಟೇ ಎನ್ನುವುದು ಅನೇಕ ಸಾರಿಗೆ ಸಿಬ್ಬಂದಿಯ ವಾದ.

ಅದೇನೇ ಆಗಲಿ ಏನೇ ಒಂದು ಘೋಷಣೆಯಾದರೂ ಅದನ್ನು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸುವ ಪ್ರಕ್ರಿಯೆ ಸದಾ ನಡೆದೇ ಇರುತ್ತದೆ ಎನ್ನುವಂತೆ ಮೇಡಮ್‌ ಅವರು 25 ವರ್ಷಗಳ ಇತಿಹಾಸದಲ್ಲಿ ಸ್ಮರಣೀಯವಾಗುವಂತ ಆದೇಶವೊಂದನ್ನು ಹೊರಡಿಸಿರುವುದನ್ನು ಸ್ವಾಗತಿಸಬೇಕಾಗುತ್ತದೆ. ಮೇಡಮ್‌ ಸತ್ಯವತಿ ಅವರ ಈ ನಿರ್ದಾರವನ್ನು ಒಪ್ಪುವುದರ ಜತೆಗೆ ಅದು ಒಂದಷ್ಟು ಸಾರಿಗೆ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತಿರುವುದರ ಬಗ್ಗೆ ಪ್ರಶ್ನೆ ಎತ್ತಲೇಬೇಕಾಗುತ್ತದೆ.ವಾಗ್ದಂಡನೆ ಮಾಡಿ ಯಾವುದೇ ಲಾಸ್‌ ಆಗದಂತೆ ಸಾರಿಗೆ ಸಿಬ್ಬಂದಿಗೆ ಪ್ರಯೋಜನ ನೀಡಬಹುದಿತ್ತೇನೋ ..ಆದನ್ನು ಮಾಡದಿರುವುದು ಕೂಡ ನಾನಾ ರೀತಿಯ ಅಸಮಾಧಾನ-ಆಕ್ಷೇಪಕ್ಕೆ ಗ್ರಾಸವಾಗಿದೆ.

ಕೋರ್ಟ್-ಕಚೇರಿ ಅಲೆಯುತ್ತಿದ್ದವರಿಗೆ ಸಣ್ಣ ರಿಲೀಫ್ ಸಿಕ್ಕಿರಬಹುದೇ ಹೊರತು….

“ಉಪಧನ ಮತ್ತು ವೇತನ ಮುಂಬಡ್ತಿಯನ್ನು ಕಡಿತ  ಮಾಡಿ ಶಿಕ್ಷೆ ವಿಧಿಸಿ ರದ್ದು ಮಾಡಿರುವುದರಿಂದ ಮೇಲ್ಕಂಡ ಪ್ರಕರಣಗಳಲ್ಲಿ ಕೋರ್ಟ್-ಕಚೇರಿಯನ್ನು ಅಲೆಯುತ್ತಿದ್ದವರಿಗೆ ಸಣ್ಣ ರಿಲೀಫ್ ಸಿಕ್ಕಿರಬಹುದೇ ಹೊರತು ರದ್ದತಿಯ ಸಂಪೂರ್ಣ ಪ್ರಯೋಜನ ಸಿಕ್ಕಿಲ್ಲವಂತೆ.ಏಕೆಂದರೆ ಶಿಕ್ಷೆ ರದ್ದತಿ ವೇಳೆ ದಂಡ ವಿಧಿಸಲಾಗಿದೆ.ಹಾಗೆಯೇ ಅವರಿಗೆ ಸಿಗಬಹುದಾಗಿದ್ದ ಮುಂಬಡ್ತಿಗೂ ಕೊಕ್ಕೆ ಹಾಕಲಾಗಿದೆಯಂತೆ. ಸಧ್ಯಕ್ಕೆ ಕಾರ್ಮಿಕರು ಅಲೆದಾಟಕ್ಕೆ ಬ್ರೇಕ್ ಸಿಕ್ಕಿತೆಂದು ಖುಷಿ ಪಡುತ್ತಿರಬಹುದು.ಆದರೆ ಅದರ ಎಫೆಕ್ಟ್ ಗೊತ್ತಾಗೋದು ನಿವೃತ್ತಿ ವೇಳೆ.ಏಕೆಂದರೆ ಈ ಕ್ರಮದಿಂದ ನಿವೃತ್ತಿ ವೇಳೆಗೆ ಪ್ರತಿಯೊಬ್ಬ ಕಾರ್ಮಿಕನಿಗೂ 1ವರೆಯಿಂದ 2 ಲಕ್ಷ ನಷ್ಟವಾಗುತ್ತದೆ.ಆತನಿಗೆ ಬರಬೇಕಿದ್ದ ಬೆನಿಫಿಟ್ಸ್ ನಲ್ಲಿ ಲಕ್ಷಾಂತರ ನಷ್ಟವಾಗುತ್ತದೆ ಎಂದರೆ ಅದು ಗಂಭೀರವಾದ ಸಂಗತಿಯಲ್ಲವೇ..? ಹಾಗಾಗಿ ಇದಕ್ಕೆ ಅವಕಾಶ ನೀಡದೆ ಶಿಕ್ಷೆಯಿಂದ ಮುಕ್ತಿ ನೀಡುವ ಕೆಲಸ ಮೇಡಮ್ ಅವರಿಂದ ನಡೆಯಬೇಕಿತ್ತೆನ್ನುವುದು ನನ್ನ ಅಭಿಪ್ರಾಯ” -ಆನಂದ್-ಸಾರಿಗೆ ಮುಖಂಡ

“ನಮಗೇನು ಇದರಿಂದ ನಯಾಪೈಸೆ ಪ್ರಯೋಜನವಾಗಿಲ್ಲ.”

“ನಾವೆಲ್ಲಾ ಮಾಡದ ತಪ್ಪಿಗೆ ಡಿಸ್ಮಿಸ್ ಆಗಿ ವರ್ಷದವರೆಗೂ ಕೆಲಸ ಕಳೆದುಕೊಂಡು ಮನೆಯಲ್ಲಿ ಕೂತವರು.ನಂತರ ಸರ್ಕಾರ ಮಾಡಿದ ಉಪಕಾರದಿಂದ ತಪ್ಪೊಪ್ಪಿಕೊಂಡು ಷರತ್ತಿನ ಪತ್ರಕ್ಕೆ ಸಹಿ ಹಾಕಿ ಕೆಲಸಕ್ಕೆ ನಿಯೋಜನೆಗೊಂಡವರು.ಆದರೆ ಶಿಕ್ಷೆ ರದ್ದತಿಯ ಪ್ರಯೋಜನಕ್ಕೆ ನಾವು ಬಾಧ್ಯಸ್ಥರಾಗುವುದೇ ಇಲ್ಲ.ಇದೆಲ್ಲಾ ದಂಡಸ್ವರೂಪದ-ಲಘು ಸ್ವರೂಪದ ಶಿಕ್ಷೆಗೊಳಪಟ್ಟವರಿಗೆ ಮಾತ್ರ ಪ್ರಯೋಜನಕ್ಕೆ ಬರುತ್ತೆ.ನಾವು ಮರುನಿಯೋಜನೆಗೊಳ್ಳುವಾಗ ಸಾಕಷ್ಟು ಇಂಕ್ರಿಮೆಂಟ್ ಸೆರೆಂಡರ್ ಮಾಡಿ ಬಂದವರು.ಅದರಿಂದ ಲಕ್ಷಾಂತರ ನಷ್ಟವನ್ನು ರಿಟೈರ್ ಆಗುವ ವೇಳೆ ಅನುಭವಿಸಲಿದ್ದೇವೆ.ನಮ್ಮನ್ನೂ ಮೇಡಮ್ ದೊಡ್ಡ ಮನಸು ಮಾಡಿ ಈ ಶಿಕ್ಷೆ ರದ್ದತಿಗೆ ಪರಿಗಣಿಸಬಹುದಿತ್ತೇನೋ.? ಆದರೆ ಸಣ್ಣಪುಟ್ಟ ಪ್ರಮಾಣದ ಶಿಕ್ಷೆಗೊಳಪಟ್ಟವರಿಗೆ ಕೃಪೆ ತೋರಿದಂಗೆ ಮಾಡಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೆ..ಮಾದ್ಯಮಗಳಿಗೆ ವಾಸ್ತವ ಏನೆನ್ನುವುದು ಗೊತ್ತಿಲ್ಲ..ಮೇಡಮ್ ಅವರು ಏನೋ ಘನಂದಾರಿ ಕೆಲಸ ಮಾಡಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರಷ್ಟೆ..ನಿಜವಾಗೂ ಸಫರ್ ಆಗುತ್ತಿರುವವರು ನಾವು..ನಮಗೆ ಈ ಮಾಫಿ ಭಾಗ್ಯ ಸಿಗಬೇಕಿತ್ತು” -ಮುಷ್ಕರದ ವೇಳೆ ಡಿಸ್ಮಿಸ್ ಆಗಿ,ಮತ್ತೆ ಷರತ್ತಿನ ಮೇಲೆ ಕೆಲಸಕ್ಕೆ ನಿಯೋಜನೆಗೊಂಡ ಬಿಎಂಟಿಸಿ ಡ್ರೈವರ್

ಮೇಡಮ್ ಅವರಿಗೆ ನಮ್ಮ ಕುಟುಂಬ ಸದಾ ಋಣಿ ಸಾರ್..

“ಮಾಡದ ತಪ್ಪಿಗೆ ದಂಡನೆಗೊಳಗಾಗಿ ಅದರಿಂದ ತಪ್ಪಿಸಿಕೊಳ್ಳೊಕ್ಕೆ ಕೋರ್ಟ್ ಗೆ ಅಲೆಯುತ್ತಿದ್ದೆವು ಸರ್.. ಕೆಲಸಕ್ಕೆ ರಜೆ ಹಾಕ್ಕೊಂಡು 2 ವರ್ಷದಿಂದಲೂ ಕೋರ್ಟ್ ಗೆ  ಅಲೆದಿದ್ದೇನೆ.ನನಗೆ ಅದರ ಸಂಕಟ ಗೊತ್ತು.ಶಿಕ್ಷೆ ಮಾಫಿಗೆ  ಅವರಿವರ ಬಳಿ ಕೈ ಕಾಲು ಹಿಡಿದಿದ್ದೇನೆ.ಆದರೆ ಕೋರ್ಟ್ ನಲ್ಲಿರುವುದರಿಂದ ಏನೂ ಮಾಡೊಕ್ಕೆ ಆಗೊಲ್ಲ ಎಂದು ಹೇಳಿದ್ದರು.ನಾನು ಕೂಡ ಕೈ ಚೆಲ್ಲಿ ಕೂತಿದ್ದೆ.ಆದರೆ ಮೇಡಮ್ ತೆಗೆದುಕೊಂಡ ನಿರ್ದಾರದಿಂದ ನನ್ನಂತೆಯೇ ಅದೆಷ್ಟೋ ಸಾರಿಗೆ ಸಿಬ್ಬಂದಿಗೆ ನೆಮ್ಮದಿ ಸಿಕ್ಕಂತಾಗಿದೆ.ಕೆಲಸ ಮಾಡಿಕೊಂಡು ಕೋರ್ಟ್ ಗೆ ಅಲೆದು ನೆಮ್ಮದಿ ಕಳಕೊಂಡಿದ್ದೆ.ಕೊನೆಗೂ ಮೇಡಮ್ ಸತ್ಯವತಿ ರಿಲೀಫ್ ಕೊಟ್ಟಿದ್ದಾರೆ.ಒಂದಷ್ಟು ದಂಡ ಕಟ್ಟಬೇಕಾಗುತ್ತೆ.ಹೋಗಲಿ ಬಿಡಿ ನೆಮ್ಮದಿ ಸಿಗ್ತಲ್ಲ ಅಷ್ಟೇ ಸಾಕು..-ಶಿಕ್ಷೆ ರದ್ದತಿಯ ಪ್ರಯೋಜನ ಪಡೆದ ಫಲಾನುಭವಿ ಕಂಡಕ್ಟರ್

Spread the love

Leave a Reply

Your email address will not be published. Required fields are marked *