ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟ, ನಟಿಯರೇ ದೇವರುಗಳು. ಸಿನಿಮಾ ತಾರೆಯರ ಮೇಲೆ ಅತಿರೇಕದ ಅಭಿಮಾನ ಬಾಲಿವುಡ್ಗೆ ಹೋಲಿಸಿದರೆ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಹೆಚ್ಚು. ಅದರಲ್ಲಿಯೂ ಆಂಧ್ರ, ತೆಲಂಗಾಣದಲ್ಲಿಯಂತೂ ಇನ್ನೂ ಹೆಚ್ಚು
ಸ್ಯಾಂಡಲ್ವುಡ್ ನಟಿ ರಶ್ಮಿಕಾ ಅವರಿಗೆ ಭಾರೀ ಅಭಿಮಾನಿ ಬಳಗವಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ಟಾಲಿವುಡ್ನಲ್ಲಿಯೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಸಿನಿಪ್ರೇಮಿಗಳ ನೆಚ್ಚಿನ ನಟಿ. ಆಕಾಶ್ ತ್ರಿಪಾಠಿ ಎಂಬ ರಶ್ಮಿಕಾ ಮಂದಣ್ಣರ ಅಭಿಮಾನಿಯೊಬ್ಬ ತಮ್ಮ ಅಭಿಮಾನದ ನಟಿಯನ್ನು ನೋಡಲು ತೆಲಂಗಾಣದಿಂದ ಕೊಡಗಿಗೆ ಬಂದಿದ್ದಾನೆ.
ರಶ್ಮಿಕಾ ಕೊಡಗಿನ ವಿರಾಜಪೇಟೆಯಲ್ಲಿರುತ್ತಾರೆ ಎಂದು ತಿಳಿದ ಆಕಾಶ್ ತ್ರಿಪಾಠಿ ಹೈದರಾಬಾದ್ನಿಂದ ಮೈಸೂರಿಗೆ ರೈಲಿನಲ್ಲಿ ಬಂದು, ಅಲ್ಲಿಂದ ಗೂಡ್ಸ್ ಆಟೋದಲ್ಲಿ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ. ಇಲ್ಲಿ ರಶ್ಮಿಕಾರ ಮನೆ ಹುಡುಕಿಕೊಂಡು ದಿನವೆಲ್ಲ ಅಲೆದಿದ್ದಾನೆ. ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿ ಸ್ಥಳೀಯರ ಬಳಿ ವಿಚಾರಣೆ ಮಾಡಿದ್ದಾನೆ. ರಶ್ಮಿಕಾ ಮನೆ ಎಲ್ಲಿ ಅಂತ ವಿಚಾರಿಸಿದ ಯುವಕ ನಟಿಯನ್ನು ಭೇಟಿಯಾಗಲು ತವಕಿಸಿದ್ದಾನೆ.
ಈತನ ವರ್ತನೆ ಕಂಡು ಆಶ್ಚರ್ಯಗೊಂಡ ಜನ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಈ ವ್ಯಕ್ತಿ ತೆಲಂಗಾಣದಿಂದ ರಶ್ಮಿಕಾರನ್ನು ನೋಡಲು ಬಂದಿರುವುದು ಗೊತ್ತಾಗಿದೆ. ಆತನಿಗೆ ಚೆನ್ನಾಗಿ ಬೈದು ಬುದ್ಧಿ ಹೇಳಿದ ವೀರಾಜಪೇಟೆ ಪೊಲೀಸರು, ಆತನಿಗೆ ಎಚ್ಚರಿಕೆ ನೀಡಿ ತೆಲಂಗಾಣಕ್ಕೆ ವಾಪಸ್ ಕಳುಹಿಸಿದ್ದಾರೆ.